ನಗರದ ಸಿದ್ಧೇಶ್ವರ ಮಂಗಲ ವ ಕಲಾಭವನದಲ್ಲಿ ಆಯೋಜಿಸಿದ ಮಟಾಶ್ ಚಿತ್ರದ 'ಚಜ್ಜಿ ರೊಟ್ಟಿ ಚವಳೀಕಾಯಿ'

ಲೋಕದರ್ಶನ್ ವರದಿ

ವಿಜಯಪುರ  9-ನಗರದ ಜನತೆಯ ಪ್ರೀತಿಗೆ ನಾವು ಸೋತಿದ್ದೇವೆ ಇಲ್ಲಿರುವ ಚಿತ್ರಪ್ರೇಮಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಮಟಾಶ್ ಚಿತ್ರ ತಂಡ ಚಿತ್ರೀಕರಣಕ್ಕೆ ಬಂದಾಗ ಇಲ್ಲಿರುವ ಸ್ಮಾರಕಗಳನ್ನು ನಾವು ಚಿತ್ರದಲ್ಲಿ ಕಥೆಗೆ ತಕ್ಕಂತೆ ಬಳಸಿಕೊಂಡಿದ್ದೇವೆ. ಚಿತ್ರದ ಕಥೆ ನೋಟುಬ್ಯಾನಾದ ಸಂದರ್ಭವನ್ನು ಒಳಗೊಂಡಿದೆ. ಇಂತಹ ಕಥೆಗೆ ಸಂಬಂಧ ಪಟ್ಟಂತಹ ಹಾಡನ್ನು ನಿಮ್ಮೂರಲ್ಲಿ ಬಿಡುಗಡೆ ಮಾಡಲು ಸಂತೋಷವೆನಿಸುತ್ತದೆ ಎಂದು ಚಲನ ಚಿತ್ರ  ನಿರ್ಮಾಪಕ ಮತ್ತು ನಿರ್ದೇಶಕರಾದ ಎಸ್.ಡಿ. ಅರವಿಂದ ಅವರು ಹೇಳಿದರು. ನಗರದ ಸಿದ್ಧೇಶ್ವರ ಮಂಗಲ ವ ಕಲಾಭವನದಲ್ಲಿ ಆಯೋಜಿಸಿದ ಮಟಾಶ್ ಚಿತ್ರದ 'ಚಜ್ಜಿ ರೊಟ್ಟಿ ಚವಳೀಕಾಯಿ' ಗೀತೆಯ ಧ್ವನಿ ಸುರಳಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತರ  ಕರ್ನಾಟಕ ಭಾಷಾ ಸೊಗಡಿನ ಗೀತೆಯನ್ನು ಚಿತ್ರಕ್ಕೆ ಬಳಸಬೇಕು. ಹಾಗೇ ಈ ಗೀತೆಯನ್ನು ಈ ಊರಿನವರ ಕಡೆಯಿಂದ ಬರೆಸಬೇಕೆಂದು ಆಸೆ ಪಟ್ಟಿದ್ದೆ. ಹಾಗಾಗಿ ನಾವು ಸುನೀಲಕುಮಾರ ಸುಧಾಕರ ಅವರನ್ನು ಕೇಳಿಕೊಂಡಾಗ ಅವರು ಒಂದೇ ದಿನದಲ್ಲಿ ನಮಗೆ ಹಾಡನ್ನು ಬರೆದುಕೊಟ್ಟಿದ್ದಾರೆ. ಅವರ ಸಾಹಿತ್ಯವನ್ನು ನಾವು ಬಳಸಿಕೊಂಡಿದ್ದೇವೆ. ಚಿತ್ರ ಬಿಡುಗಡೆಯಾಗುವ ಹಂತದಲ್ಲಿದೆ. ನೀವೆಲ್ಲ ಚಿತ್ರವನ್ನು ನೋಡಿ ಆಶೀರ್ವದಿಸಬೇಕೆಂದು ಕೇಳಿಕೊಂಡರು. ಪುನೀತರಾಜಕುಮಾರ ಅವರು ಈ ಗೀತೆಯನ್ನು ಹಾಡಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿದ್ದೇವೆ ಎಂದು ಈ ಮೂಲಕ ಕೃತಜ್ಞತೆ ಅರ್ಪಿಸಿದರು. ಮಟಾಶ್ ಚಿತ್ರ ತಂಡದ ಸದಸ್ಯರು ನನ್ನೊಂದಿಗೆ ಶ್ರಮಿಸಿದ್ದಾರೆ. ಅವರ ಶ್ರಮವು ಈ ಚಿತ್ರದ ನಿರ್ಮಾಣಕ್ಕೆ ಪೂರಕವಾಗಿದೆ. ಚಿತ್ರದ ನಿರ್ಮಾಪಕರಾದ ಚಂದ್ರಶೇಖರ ಮಣೂರ, ಸತೀಶ ಪಾಠಕ, ಗಿರೀಶ ಪಟೇಲ ಮತ್ತು ಸಹ ನಿರ್ಮಾಪಕರಾದ ಉಮೇಶ ಸುರೇಬಾನ್, ರೂಪಾಂಜಲಿ ಬಡಿಗೇರ, ಆನಂದ ಚಿತವಾಡಗಿ ನಮ್ಮೊಂದಿಗೆ ಇದ್ದಾರೆ ಅವರನ್ನು ಈ ಸಂದರ್ಭದಲ್ಲಿ ನೆನೆಯುವೆ ಎಂದರು. 

ಕಾರ್ಯಕ್ರಮದಲ್ಲಿ ಚಿತ್ರ ನಟ ಗೌತಮ್ ಎಚ್.ಸಿ. ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.  ನಿರ್ದೇಶಕರ ಎಸ್.ಡಿ ಅರವಿಂದ ಅವರನ್ನು ಶಿವಶರಣ ಗ್ರಾಫಿಕ್ಸ್ ಮತ್ತು ಈ ದಿವಸ ದಿನ ಪತ್ರಿಕೆಯ ಬಳಗದಿಂದ ಸನ್ಮಾನಿಸಲಾಯಿತು. 

ಸಹ ನಿರ್ದೇಶಕ ಮಲ್ಲಿಕಾರ್ಜುನ್, ರುದ್ರಪ್ಪ ಮಣೂರ, ರೂಪಾಂಜಲಿ ಬಡಿಗೇರ, ಶ್ರೀಕಾಂತ ಮಣೂರ, ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರು, ಸಹ ನಿರ್ಮಾಪಕ ಉಮೇಶ ಸುರೇಬಾನ್, ಗೀತ ರಚನೆಕಾರ ಸುನೀಲಕುಮಾರ ಸುಧಾಕರ, ನಾಯಕಿ ನಟಿ ಐಶ್ವರ್ಯ ಸಿಂಧೋಗಿ, ನಾಯಕ ನಟರಾದ ಸಮರ್ಥ ನರಸಿಂಹರಾಜು, ಗಣೇಶ ರಾಜ್, ರವಿ ಕಿರಣ, ಅಮೋಘ ರಾಹುಲ, ಗೌತಮ್ ಎಚ್.ಸಿ, ಸಿದ್ದು ಎರಲಬನ್ನಿಕೊಡು, ರಿಷಿ, ಸಿದ್ದಪ್ಪ ಬಿಂಜಗೇರಿ, ಇವರೊಂದಿಗೆ ಸ್ಥಳೀಯ ಕಲಾವಿದರಾದ ಪರಶುರಾಮ ಶಿವಶರಣ, ವಿನೋದ ರಾಠೋಡ, ಮಹೇಶ ಶಿವಶರಣ, ನಾಗೇಶ ಸಾಗರ, ಲಕ್ಷ್ಮಣ, ಕಲ್ಲಪ್ಪ ಶಿವಶರಣ, ವಿಜು ಕರಾಬಿ, ಉಮೇಶ ಶಿವಶರಣ ಮುಂತಾದವರು ಪಾಲ್ಗೊಂಡಿದ್ದರು. ವಿಜಯಪುರ ಆಕಾಶವಾಣಿ ಕಲಾವಿದರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.