‘ಶ್ರೀ ಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ: ಸಂಚರಿಸುತ್ತಿರುವ ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಗೆ ಸ್ವಾಗತ

Centenary of 'Shri Siddharudh' Kathamitra Granth: Welcome to the Traveling 'Jagadguru Sri Siddharud

‘ಶ್ರೀ ಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ: ಸಂಚರಿಸುತ್ತಿರುವ ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಗೆ ಸ್ವಾಗತ 


ಗದಗ 05: ಎಲ್ಲ ಧರ್ಮಿಯರು ಎಲ್ಲ ಜಾತಿಯವರು ಒಂದು ಎಂದು ನಡೆದುಕೊಳ್ಳುವ ಶ್ರದ್ಧಾಕೇಂದ್ರ ಅದು ಸಿದ್ಧಾರೂಢ ಮಠ. ಎಲ್ಲ ಮಠಮಾನ್ಯಗಳೊಂದಿಗೆ ಮೆಚ್ಚುಗೆ ಪಡೆದು ಸಮಾಜದಲ್ಲಿ ಭ್ರಾತೃತ್ವ ಭಾವನೆ ಮೂಡಿಸಿರುವ ಸಿದ್ಧಾರೂಢ ಮಠವು ಮನುಕುಲ ಒಂದಾಬೇಕು ಎಂಬ ಸಂದೇಶ ನೀಡುತ್ತ ರಾಜ್ಯ-ದೇಶದಲ್ಲಿ ಪ್ರಖ್ಯಾತಿ ಪಡೆದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.  

ಸದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ತಾವು ಜೀವಂತವಿದ್ದಾಗಲೇ ಬರೆಯಿಸಿದ ‘ಶ್ರೀ ಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ ನಗರದ ತೋಂಟದಾರ್ಯ ಮಠದಲ್ಲಿ ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು. 

ಬಸವ ತತ್ವದಲ್ಲಿ ವಿಶ್ವಾಸವಿರುವವರೆಲ್ಲರೂ ಸಿದ್ಧಾರೂಢರ ತತ್ವಸಿದ್ಧಾಂತಗಳನ್ನು ಒಪ್ಪಲೇಬೇಕು. ಅಂತಹ ಮಹಾನ್ ತಪಸ್ವಿ ಸಿದ್ಧಾರೂಢರ ಜ್ಯೋತಿಯ ಉದ್ದೇಶ ಸ್ಪಷ್ಟವಾಗಿದೆ. ಸಮಾಜದಲ್ಲಿ ಸೌಹಾರ್ದ, ಪ್ರೀತಿ, ಭ್ರಾತೃತ್ವ ಇರಬೇಕು. ಬದುಕು ಸದ್ಭಾವನೆಯಿಂದ ಕೂಡಿರಬೇಕು ಎಂದು ಜಾಗೃತಿ ಮೂಡಿಸುವ ಸಲುವಾಗಿ ಸಿದ್ಧಾರೂಢರ ಜ್ಯೋತಿ ನಮ್ಮ ಭಾಗದಲ್ಲಿ ಸಂಚರಿಸುತ್ತಿದೆ ಎಂದರು.  

ದುಂದೂರು, ಹುಲಕೋಟಿ, ಬಿಂಕದಕಟ್ಟಿ ಗ್ರಾಮದಲ್ಲಿ ಅದ್ದೂರಿಯಿಂದ ಜ್ಯೋತಿರಥಯಾತ್ರೆಯನ್ನು ಬರಮಾಡಿಕೊಳ್ಳಲಾಗಿದ್ದು, ಜ್ಯೋತಿಯನ್ನು ಪ್ರಾರಂಭಿಸುವ ಉದ್ದೇಶ ಈಡೇರಬೇಕು. ಮನುಕುಲ ಒಂದಾಗಬೇಕು. ಸರ್ವರಲ್ಲಿ ಸದ್ಭಾವ, ಸಮಭಾವ ಬೆಳೆಯುವಂತಹ ವಾತಾವರಣ ಉಂಟಾಗಲಿ ಎಂದು ಹಾರೈಸಿದರು.    

ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ಧಾರೂಢರು ನಾಡುಕಂಡ ಅಪೂರ್ವ ತತ್ವಜ್ಞಾನಿಗಳು. ವೇದಾಂತ ಕ್ಷೇತ್ರದ ಸರ್ವೋಚ್ಛ ನಾಯಕರಗಿದ್ದಾರೆ. ಸಿದ್ಧಾರೂಢರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೊಟ್ಟಮೊದಲಿಗೆ ವೆದಾಂತವನ್ನು ಪ್ರಸಾರ ಮಾಡಿದ ಪುಣ್ಯಪುರುಷರು. ಜ್ಞಾನದ ಸಾಧನಗಳು ಇಲ್ಲದಿರುವ ಕಾಲದಲ್ಲಿ ಶಾಸ್ತ್ರಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳ ಸಾರವನ್ನು ಜನಮನಕೆ ತಲುಪಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿ ಆತ್ಮೋದ್ದಾರ ಮಾಡಿಕೊಳ್ಳುವ ಅಪೂರ್ವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.  

ಮನುಷ್ಯ ಅರಿವಿನ ಪ್ರಾಣಿಯಾಗಿದ್ದು, ಮನುಷ್ಯರಾಗಿ ನಾವು ಹುಟ್ಟಿಬಂದ ಮೇಲೆ ಜ್ಞಾನವನ್ನು ಸಂಪಾದನೆ ಮಾಡುವುದೇ ನಮ್ಮ ಕತೃವ್ಯ ಎಂಬುದನ್ನು ಸಿದ್ಧಾರೂಢರು ತಮ್ಮ ಬದುಕಿನುದ್ದಕ್ಕೂ ಹೇಳಿಕೊಂಡು ಬಂದಿದ್ದಾರೆ. ಜ್ಞಾನವನ್ನು ಸಂಪಾದನೆ ಮಾಡಿಕೊಂಡಾಗ ಮೋಕ್ಷ ಪಡೆಯುತ್ತಾನೆ ಎಂದು ತಮ್ಮ ಜ್ಞಾನದ ಮೂಲಕ ತೋರಿಸಿಕೊಟ್ಟರು. ಜಾತಿ, ಮತ, ಪಂಥಗಳ ಬೇಧವಿಲ್ಲದೇ ಸರ್ವರಿಗೂ ಜ್ಞಾನವನ್ನು ತಲುಪಿಸುವ ಕಾರ್ಯ ಮಾಡಿದ ಸಿದ್ಧಾರೂಢರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಾತ್ಯಾತೀತ ಪರಂಪರೆಯನ್ನು ಹುಟ್ಟುಹಾಕಿದರು.  

ಶರಣರು, ಸಂತರು, ಮಹಾತ್ಮರು ಯಾವುದನ್ನು ನಮ್ಮದಲ್ಲ ಎಂದು ಹೇಳಿದ್ದಾರೆ. ಅವುಗಳನ್ನು ಇಂದು ನಾವು ನಮ್ಮ ಅಜ್ಞಾನದಿಂದ ನಮ್ಮದು ನಮ್ಮದು ಎಂದು ಹೇಳುತ್ತಿದ್ದೇವೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ನಾವು ನಮ್ಮ ಇಡೀ ಬದುಕನ್ನು ಸವೆಸುತ್ತಿದ್ದೇವೆ. ನಾವು ನಿಜವಾಗಿ ಗಳಿಸಬೇಕಾಗಿರುವುದು ಜ್ಞಾನ. ಭೌತಿಕವಾಗಿರುವ ಸಂಪತ್ತು ಇಲ್ಲದಿದ್ದರೂ ಜ್ಞಾನವನ್ನು ಸಂಪಾದನೆ ಮಾಡಿದಾಗ ಶ್ರೀಮಂತನಾಗಿ ರೂಪುಗೊಳ್ಳುತ್ತಾನೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.  

ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್‌. ಪಾಟೀಲ, 

ನರಗುಂದ ಶಾಸಕ ಸಿ.ಸಿ. ಪಾಟೀಲ, ಶ್ರೀ ಸಿದ್ಧಾರೂಢ ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಡಿ.ಆರ್‌. ಪಾಟೀಲ, ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್ಲ, ಜಿ.ಎಸ್‌. ಗಡ್ಡದೇವರಮಠ, ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಕಲ್ಯಾಣಶೆಟ್ಟರ, ರುದ್ರಮ್ಮ ಕೆರಕಲಮಟ್ಟಿ, ನೀಲಮ್ಮ ಬೋಳನವರ ಸೇರಿ ಹಲವರು ಪಾಲ್ಗೊಂಡಿದ್ದರು.