ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ


ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ  

ಕಾರವಾರ 05:  ಕುಮಟಾ ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯತ್ನ ಆವರಣ, ಸಾರ್ವಜನಿಕ ಸಂತೆ ಹಾಗೂ ಬಸ್ ನಿಲ್ದಾಣ ಹಾಗೂ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ , ಗ್ರಾಮ ಆರೋಗ್ಯ ತರಬೇತಿ ಕಾರ್ಯಗಾರ , ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ, ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ಅಳಕೋಡ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ ಮಾತನಾಡಿ, ಜನಸಾಮಾನ್ಯರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮ ಮಟ್ಟದಲ್ಲಿ ಹಳ್ಳಿಗಾಡು ಜನರ ಅಗತ್ಯಕ್ಕೆ ತಕ್ಕಂತೆ ಕೂಲಿ ಕೆಲಸ ಹಾಗೂ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದು, ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದೆ ಎಂದು ಹೇಳಿದರು.  

 ಜಿಲ್ಲಾ ಪಂಚಾಯತ್ನ ಜಿಲ್ಲಾ ಐಇಸಿ ಸಂಯೋಜಕ ಫಕೀರ​‍್ಪ ತುಮ್ಮಣ್ಣನವರ ಮಾತನಾಡಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ನರೇಗಾ ಯೋಜನೆಯಡಿ ಜನಸಾಮಾನ್ಯರಿಗೆ ಅಗತ್ಯವಿರುವ ಕಾಮಗಾರಿ ಹಾಗೂ ಕೂಲಿ ಕೆಲಸ ಪಡೆಯಲು ಡಿಜಿಟಲ್ ತಂತ್ರಜ್ಞಾನದ ಸ್ಪರ್ಶ ನೀಡಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಬಳಸಿ ಆನ್ಲೈನ್ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿಗಳಿಗೆ ಭೇಟೀನೀಡಿ ಅಗತ್ಯ ಮಾಹಿತಿ ಪಡೆದು ತಮಗೆ ಬೇಕಾದ ಕಾಮಗಾರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಬಹುದು ಎಂದರು.  

ಇದೇ ವೇಳೆ ಗ್ರಾಮ ಆರೋಗ್ಯ ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಣ, ಆರೋಗ್ಯ ಹಾಗೂ ಸಿಡಿಪಿಒ ಇಲಾಖೆಯ ಅಧಿಕಾರಿಗಳಿಗೆ ನರೇಗಾ ಮಾಹಿತಿ ಹಾಗೂ ಕ್ಯೂಆರ್ ಕೋಡ್ಯುಳ್ಳ ಕರಪತ್ರಗಳನ್ನು ವಿತರಿಸಿ , ತಮ್ಮ ಇಲಾಖೆ ಒಗ್ಗೂಡಿಸುವಿಕೆಯಡಿ ಲಭ್ಯವಿರುವ ಸಮುದಾಯ ಕಾಮಗಾರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಯಿತು. ಹಾಗೇ ಸಾರ್ವಜನಿಕ ಸ್ಥಳಗಳಲ್ಲಿ ನರೇಗಾ ಮಾಹಿತಿ ಹಾಗೂ ಕ್ಯೂಆರ್ ಕೋಡ್ಯುಳ್ಳ ಕರಪತ್ರಗಳನ್ನು ಅಂಟಿಸಲಾಯಿತು.  

ಈ ಸಂದರ್ಭದಲ್ಲಿ ಅದ್ಯಕ್ಷ ದೇವು ಗೌಡ, ಸಿಆರ​‍್ಿ ಲೋಕೇಶ್ ಭಟ್ಟ, ಸವಿತಾ ಪಟಗಾರ, ಕತಗಾಲನ ಎಸ್ಕೆಪಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಕ ಎಸ್‌.ಎಸ್‌. ಕೋರ್ವಕರ, ಅಂಗನವಾಡಿ ಮೇಲ್ವಿಚಾರಕಿ ಭಾರತಿ ಪಟಗಾರ, ಗ್ರಾಮ ಪಂಚಾಯತಿಯ ಬಿಎಫ್ಟಿ ನಯನಾ ಪಟಗಾರ, ಕ್ಲರ್ಕ ಕಂ ಡಿಇಒ ದೀಪಕ ನಾಯ್ಕ್‌, ಬಿಲ್ ಕಲೆಕ್ಟರ್ ಅಶ್ವಿನಿ ಗೌಡ, ಸಿಬ್ಬಂದಿ ಸವಿತಾ ಗೌಡ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಆಶಾ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.