ಬಿ.ಎಲ್‌.ಓ ಕೆಲಸದಿಂದ ವಿನಾಯಿತಿಗೆ ಆಗ್ರಹಿಸಿ ಸಿ.ಐ.ಟಿ.ಯು ಪ್ರತಿಭಟನೆ

ಬಿ.ಎಲ್‌.ಓ ಕೆಲಸದಿಂದ ವಿನಾಯಿತಿಗೆ ಆಗ್ರಹಿಸಿ ಸಿ.ಐ.ಟಿ.ಯು ಪ್ರತಿಭಟನೆ CITU protests demanding exemption from BLO work


ಬೆಳಗಾವಿ 06: ಅಂಗನವಾಡಿ ಕಾರ್ಯಕರ್ತೆಯರಿಗೆ ಬಿ.ಎಲ್‌.ಓ ಕೆಲಸದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಸಿ.ಐ.ಟಿ.ಯು ವತಿಯಿಂದ  ಜಿಲ್ಲಾಧಿಕಾರಿಗಳ ಕಾರ್ಯಾಲಯದೆದುರು ಪ್ರತಿಭಟನೆಯನ್ನು ನಡೆಸಲಾಯಿತು. 

 ತಹಶೀಲ್ದಾರರು ಪದೇ ಪದೇ ಜಾರಿಗೊಳಿಸುತ್ತಿರುವ ನೋಟಿಸ್‌ಗಳ ಇಂದು ಬೆಳಗಾವಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿ.ಎಲ್‌.ಓ ಕೆಲಸದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಯಿತು.  

ಸಿಐಟಿಯು ಅಧ್ಯಕ್ಷೆ ಮಂದಾ ನೇವಗಿ ಮಾತನಾಡಿ ಬೆಳಗಾವಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಜೈಲ್ ಜಾಮರ್‌ಗಳ ಪ್ರಭಾವದಿಂದಾಗಿ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ತೀವ್ರವಾಗಿ ವ್ಯತ್ಯಯಗೊಂಡಿದ್ದು, ಬಿಎಲ್‌ಒ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇಂಟರ್ನೆಟ್ ಕೊರತೆಯಿಂದಾಗಿ ಮಾಹಿತಿ ಅಪ್‌ಲೋಡ್ ಮಾಡುವುದು ಮತ್ತು ಪರೀಶೀಲನಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ವಂತ ವೆಚ್ಚದಲ್ಲಿ ಇಂಟರ್ನೆಟ್ ವ್ಯವಸ್ಥೆ ಮಾಡಿಕೊಂಡು, ತಮ್ಮ ನಿಯಮಿತ ಐಸಿಡಿಎಸ್ ಕೆಲಸಗಳ ನಡುವೆಯೂ ಬಿಎಲ್‌ಒ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ.  

ಆದರೂ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳದ ಬೆಳಗಾವಿ ತಹಶೀಲ್ದಾರ್ ಅವರು ಕೆಲಸ ವಿಳಂಬವಾಗುತ್ತಿದೆ ಎಂಬ ಆರೋಪ ಮಾಡುತ್ತ  ಅಂಗನವಾಡಿ ಶಿಕ್ಷಕರಿಗೆ ಪದೇ ಪದೇ ಶೋಕಾಸ್ ನೋಟಿಸ್ ಜಾರಿ ಮಾಡುತ್ತಿರುವುದು ಸರಿಯಲ್ಲ. ಅದರಲ್ಲೂ ವಿಶೇಷವಾಗಿ ಉನ್ನತ ತಾಂತ್ರಿಕ ಸಾಧನಗಳು ಹಾಗೂ ನಿರಂತರ ಇಂಟರ್ನೆಟ್ ಅಗತ್ಯವಿರುವ ‘ಮ್ಯಾಪಿಂಗ್‌’ ಕೆಲಸವನ್ನು ಅಂಗನವಾಡಿ ಶಿಕ್ಷಕರಿಗೆ ಹೇರಿರುವುದು ಅವೈಜ್ಞಾನಿಕವಾಗಿದೆ. ಇದು ಅಂಗನವಾಡಿ ಶಿಕ್ಷಕರಿಗೆ ಅನ್ಯಾಯ ಮಾಡಿದಂತಾಗಿದೆ. ಶಿಕ್ಷಕರಿಗೆ ನೀಡಲಾಗುತ್ತಿರುವ ಅನಗತ್ಯ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು, ಮ್ಯಾಪಿಂಗ್ ಕೆಲಸದಿಂದ ವಿನಾಯಿತಿ ನೀಡಬೇಕು ಅಥವಾ ಸೂಕ್ತ ತರಬೇತಿ ಮತ್ತು ಸರ್ಕಾರಿ ಸಾಧನಗಳನ್ನು ಒದಗಿಸಬೇಕು ಹಾಗೂ ತಾಂತ್ರಿಕ ಕಾರಣಗಳಿಗಾಗಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.  

ಒಂದು ವೇಳೆ ಈ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಂದಾ ನೇವಗಿ ಎಚ್ಚರಿಕೆಯನ್ನು ನೀಡಿದರು.  

ಪ್ರತಿಭಟನೆಯಲ್ಲಿ ಎಂ.ಎಸ್‌. ಬಡಿಗೇರ್, ಎಂ.ಬಿ. ಮೋರೆ, ಕೆ.ಎಂ. ಬದ್ರಿ, ಪಿ.ಎಸ್‌. ಹಿರೇಮಠ, ಉಲಕಾ ಕೇಪರಕರ, ಎಸ್‌.ಎ. ಡೋಂಗರಗಾಂವಿ. ಎಲ್‌.ಕೆ. ತಾಶೀಲ್ದಾರ, ಸಿ.ಎನ್‌. ಗಡಕರಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.