ಬುದ್ಧಂ ಶರಣಂ ಗಚ್ಚಾಮಿ

"ನೀವು ಯಾವ ಪ್ರಾಣಿಗೂ ಜೀವ ಕೊಡಲಾರಿರಿ. ಜೀವ ಕೊಡುವ ಶಕ್ತಿ ಇಲ್ಲ ನಿಮಗೆ. ಜೀವ ತೆಗೆಯುವ ಹಕ್ಕೂ ಇಲ್ಲ. ನಾವು ನಮ್ಮ ದೇಹವನ್ನೂ, ಪ್ರಾಣವನ್ನೂ ಪ್ರೀತಿಸುವ ಹಾಗೆಯೇ ಇತರ ಪ್ರಾಣಿಗಳನ್ನು ಪ್ರೀತಿಸಬೇಕು". ಯಜ್ಞಮಾಡಿ ಮೇಕೆಗಳನ್ನು ಬಲಿ ಕೊಡಬೇಕೆಂದಿದ್ದ ರಾಜ ಬಿಂಬ ಸಾರನಿಗೆ ಹೀಗೆಂದು ಹೇಳಿ ಜ್ಞಾನೋದಯವನ್ನುಂಟು ಮಾಡಿದವರು ಗೌತಮಬುದ್ಧ.

"ಅರಿವಿನ ದಾರಿ ಕಾಣದೆ ಜನಸಮುದಾಯ ನರಳುವಾಗ ಅರಿತು ದಾರಿ ತೋರುವ ಮಹಾಪುರುಷರು ಅವತರಿಸುತ್ತಾರೆ" ಎಂಬ ನಂಬಿಕೆ ಇದೆ. ಅಂತಹ ನಂಬಿಕೆಯನ್ನು ದೃಡಪಡಿಸಿದ ಮಹಾಪುರುಷರಲ್ಲಿ ಬೌದ್ಧ ಧರ್ಮ ಪ್ರವರ್ತಕ ಗೌತಮ ಬುದ್ಧನೂ ಒಬ್ಬ. ಎರಡು ಸಾವಿರದೈನೂರು ವರ್ಷಗಳ ಕೆಳಗೆ ಈಗಿನ ನೇಪಾಳ ಭಾರತದ ಒಂದು ಭಾಗವಾಗಿತ್ತು. ಆ ಪ್ರದೇಶದ ರಾಜ್ಯದ ದೊರೆ ಶುದ್ಧೋದನ, ರಾಣಿ ಮಾಯಾ ದೇವಿ ಕ್ರಿ.ಪೂ, 563ರಲ್ಲಿ ವೈಶಾಖ ಶುದ್ಧ ಹುಣ್ಣಿಮೆಯ ದಿನ ಲುಂಬಿನಿ ಕಾಡಿನಲ್ಲಿ ಮಾಯಾದೇವಿಗೆ ಗಂಡು ಮಗು ಹುಟ್ಟಿತು. ಅವನಿಗೆ ಸಿದ್ಧಾರ್ಥನೆಂದು ಹೆಸರಿಟ್ಟರು. ಹುಟ್ಟಿದ ಏಳನೆಯ ದಿನ ತಾಯಿ ಕಾಲವಾದರು. ಮಲತಾಯಿ ಮಹಾಪ್ರಜಾಪತಿ ಗೌತಮಿ ಅವನನ್ನು ಸಾಕಿದುದರಿಂದ ಅವನಿಗೆ ಗೌತಮನೆಂದೂ ಹೆಸರಾಯಿತು.

ಶುದ್ಧೋದನ ಮಹಾರಾಜನ ಮಗ ಸಿದ್ಧಾರ್ಥ ಸನ್ಯಾಸಿಯಾಗುತ್ತಾನೆಂದು ಒಬ್ಬ ವಿದ್ವಾಂಸ ಭವಿಷ್ಯ ನುಡಿದ. ಇದಕ್ಕೆ ಹೆದರಿ ರಾಜ, ಮಗನು ಹೊರಗಿನ ಪ್ರಪಂಚದ ಕಷ್ಟಗಳನ್ನು ನೋಡಲು ಬಿಡದೆ. ಆತನನ್ನು ಅರಮನೆಯಲ್ಲೇ ಬೆಳೆಸಿದ. ಸಿದ್ಧಾರ್ಥನಿಗೆ ಸುಪ್ರಬೋಧನ ಮಗಳು ಯಶೋಧರೆಯೊಡನೆ ವಿವಾಹವಾಯಿತು. ಅವರ ಮಗ ರಾಹುಲ.

ಅರಮನೆಯ ಒಳಗಿದ್ದ ಸಿದ್ಧಾರ್ಥನಿಗೆ ಹೊರಗಿನ ಪ್ರಪಂಚವನ್ನು ನೋಡಿಬರುವ ಆಸೆಯಾಯಿತು. ನಗರ ಸಂದರ್ಶನಕ್ಕೆ ಹೋದಾಗ ಯಾವ ರೀತಿಯ ನೋವಿನ ದೃಶ್ಯವನ್ನೂ ಮಗನು ಕಾಣಬಾರದೆಂದು ರಾಜ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೂ, ಮುಪ್ಪಿನಿಂದ ಕುಗ್ಗಿದವನನ್ನೂ ರೋಗದಿಂದ ನರಳುತ್ತಿದ್ದವನ್ನೂ, ಒಂದು ಶವವನ್ನೂ ಸಿದ್ದಾರ್ಥ ನೋಡಿದ. ಮುಪ್ಪು, ರೋಗ, ಸಾವು ಯಾರಿಗೂ ತಪ್ಪಿದ್ದಲ್ಲವೆಂಬುವುದನ್ನು ಅರಿತ, ಆಗ ಅವನಿಗೆ ಪ್ರಪಂಚದಲ್ಲಿ ಸುಖ ಎಂಬುದು ಸುಳ್ಳು ಎಂದು ತೋರಿತು. ವೈರಾಗ್ಯ ಹುಟ್ಟಿತು. ಹುಟ್ಟು ಸಾವುಗಳಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಹುಡುಕಬೇಕೆನ್ನಿಸಿತು.

ಸಿದ್ಧಾರ್ಥ ರಾಜಪುತ್ರನಾಗಿರಲು ಇಷ್ಟಪಡದೆ, ಸನ್ಯಾಸಿಯಾಗಿ ಪ್ರಪಂಚದ ಕಷ್ಟಗಳಿಗೆ ಪರಿಹಾರ ಹುಡುಕಲು, ಒಂದು ರಾತ್ರಿ ಯಾರಿಗೂ ಹೇಳದೆ ಅರಮನೆ ಬಿಟ್ಟು ಹೊರಟ. ಕಾಡಿನಲ್ಲಿ ತಪಸ್ಸು ಮಾಡಿದ. ಉಪವಾಸ, ಬಳಲಿಕೆಯಿಂದ ಜ್ಞಾನ ತಪ್ಪುವಷ್ಟು ದೇಹವನ್ನು ದಂಡಿಸಿದ. ಆರು ವರ್ಷ ಧ್ಯಾನ ಮಾಡಿದ. ಆದರೆ ಜ್ಞಾನೋದಯವಾಗಲಿಲ್ಲ.

ಕೊನೆಗೆ ಭೋಧಿವೃಕ್ಷದ ಕೆಳಗೆ ಕುಳಿತು ಧ್ಯಾನಮಗ್ನನಾದ, ವೈಶಾಖ ಪೂರ್ಣಮೆಯ ಮಧ್ಯರಾತ್ರಿ ಅವನಿಗೆ ಜ್ಞಾನೋದಯವಾಯಿತು. ಅಲ್ಲಿಯವರೆಗೂ ಸಿದ್ದಾರ್ಥನಾಗಿದ್ದವನು ಅಂದು 'ಬುದ್ಧ'ನಾದ. ಬುದ್ಧ ಎಂದರೆ ಜ್ಞಾನವನ್ನು ಪಡೆದವನು ಎಂದರ್ಥ.

ಪ್ರಪಂಚದ ಕಷ್ಟಗಳಿಗೆ ಏನು ಮಾಡಿದರೆ ಪರಿಹಾರ ಸಿಕ್ಕುತ್ತದೆ, ಮನಸ್ಸಿಗೆ ಶಾಂತಿ ದೊರೆಯುತ್ತದೆ. ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಸಿದ್ಧಾರ್ಥ ತಪಸ್ಸು ಮಾಡಿದ, ಜ್ಞಾನೋದಯದೊಂದಿಗೆ ಅವನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಅವನಿಗೆ ತಿಳಿವಳಿಕೆ ಬಂದಿತು.

ಸಿದ್ದಾರ್ಥ ಬುದ್ಧನಾದ ನಂತರ ವಾರಣಾಸಿಗೆ ಹೋಗಿ ತಾನು ಕಂಡ ಸತ್ಯವನ್ನು ಜನರಿಗೆ ಉಪದೇಶಿಸಿದ. ಹಲವರು ಇವನ ಮತವನ್ನು ಸ್ವೀಕರಿಸಿದರು. ಅಲ್ಲಿಂದ ಧರ್ಮ ಪ್ರಸಾರಕ್ಕಾಗಿ ದೇಶದಲ್ಲೆಲ್ಲ ಸುತ್ತಾಡಿದ. ಕಪಿಲವಸ್ತುವಿಗೂ ಹೋಗಿ ಶುದ್ಧೋದನ, ಯಶೋಧರೆ, ರಾಹುಲರನ್ನು ಕಂಡ. ರಾಹುಲ ಸನ್ಯಾಸಿಯಾದ, ಇನ್ನೂ ಕೆಲವರು ಸ್ತ್ರೀಯರೂ ಪುರುಷರೂ ಸನ್ಯಾಸಿಗಳಾದರು. ಆನಂದ, ಸಾರಿಪುತ್ರ, ಮೌದ್ಗಲ್ಯಾಯನ ಬುದ್ಧನ ಶಿಷ್ಯರಲ್ಲಿ ಮುಖ್ಯರು. ಬೌದ್ಧ ಸನ್ಯಾಸಿಗಳು, ಭಿಕ್ಷುಗಳು ವಾಸಿಸಲು ವಿಹಾರಗಳೆಂಬ ಮಠಗಳನ್ನು ಸ್ಥಾಪಿಸಲಾಯಿತು. ಅಂಗುಲಿ ಮಾಲ ಎನ್ನುವ ದರೋಡೆಕಾರ ಬುದ್ಧನ ಕಾರುಣ್ಯಕ್ಕೆ ಸೋತು ಅವನ ಶಿಷ್ಯನಾದ. ಬುದ್ಧ, ಕುಶಿನಗರದಲ್ಲಿ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ನಿವರ್ಾಣ ಹೊಂದಿದ.

ಸಿದ್ಧಾರ್ಥ ಹುಟ್ಟಿದ್ದು ವೈಶಾಖ ಹುಣ್ಣಿಮೆಯಂದು, ಬುದ್ಧ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನಮಗ್ನನಾದ ವೈಶಾಖ ಪೂಣರ್ಿಮೆಯ ಮಧ್ಯರಾತ್ರಿ ಅವನಿಗೆ ಜ್ಞಾನೋದಯವಾಯಿತು, ಬುದ್ಧ ಕುಶಿನಗರದಲ್ಲಿ ತನ್ನ ಎಂಬತ್ತನೆ ವಯಸ್ಸಿನಲ್ಲಿ ನಿವರ್ಾಣ ಹೊಂದಿದ ಅದು ವೈಶಾಖ ಹುಣ್ಣಿಮೆಯಂದು.

ಬುದ್ಧ ಪ್ರಚಾರ ಮಾಡಿದ ಧರ್ಮ ಬೌದ್ಧ ಧರ್ಮವೆಂದು ಪ್ರಸಿದ್ಧವಾಯಿತು. ಭಾರತದಾಚೆಗೂ ಸಿಂಹಳ, ಚೀನ, ಬರ್ಮ, ಥೈಲೆಂಡ್ಗಳಿಗೂ ಹರಡಿತು. ಇಂದು ಭಾರತದಲ್ಲಿ ಬೌದ್ಧಮತಾವಲಂಬಿಗಳು ಕೆಲವೇ ಮಂದಿ ಇದ್ದರೂ ನೇಪಾಳ, ಟಿಬೆಟ್, ಚೀನ, ಮಂಗೊಲಿಯ, ಕೊರಿಯ, ಜಪಾನಗಳಲ್ಲಿ ಬೌದ್ಧ ಧರ್ಮ ನೆಲಿಸಿದೆ.

ಬುದ್ಧ ಹೇಳಿದ ನಾಲ್ಕು ಸತ್ಯಗಳು, ದುಃಖ, ದುಃಖ ಸಮುದಾಯ, ದುಃಖ ನಿರೋಧ, ದುಃಖನಿರೋಧಗಾಮಿನಿ ಪ್ರತಿಪತ್.

ಅಂದರೆ, ಪ್ರಪಂಚದಲ್ಲಿ ದುಃಖವಿದೆ, ನಾವು ನಮ್ಮ ಸೂತ್ತಲೂ ಇರುವ ವಸ್ತುಗಳು ಬೇಕು ಎಂದು ಆಸೆಪಡುವುದೇ ದುಃಖಕ್ಕೆ ಕಾರಣ, ಆಸೆಯನ್ನು ಬಿಟ್ಟರೆ ದುಃಖ ಇರುವುದಿಲ್ಲ, ಎಂಟು ಮುಖ್ಯ ವಿಷಯಗಳನ್ನು ನಾವು ಜ್ಞಾಪಕದಲ್ಲಿಟ್ಟುಕೊಂಡು ಆ ರೀತಿ ನಡೆದರೆ ದುಃಖದಿಂದ ಬಿಡುಗಡೆ ಹೊಂದುತ್ತೇವೆ.

ಬುದ್ಧನ ಅಷ್ಟಾಂಗ ಮಾರ್ಗಗಳು - 1) ಒಳ್ಳೆಯ ಯೋಚನೆಗಳು. 2) ಒಳ್ಳೆಯ ಉದ್ದೇಶದಿಂದ ಕೆಲಸ ಮಾಡುವುದು. 3) ಸತ್ಯವಾದ ಮಾತನ್ನಾಡುವುದು. 4) ಒಳ್ಳೆಯ ಕೆಲಸವನ್ನು ಮಾಡುವುದು.  5) ಶುದ್ಧವಾದ ರೀತಿಯಲ್ಲಿ ಜೀವನ ನಡೆಸುವುದು. 6) ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು. 7) ಇತರರ ವಿಷಯದಲ್ಲಿ ಒಳ್ಳೆಯದನ್ನು ಯೋಚಿಸುವುದು. 8) ಒಳ್ಳೆಯ ವಿಷಯಗಳಲ್ಲಿ ಮನಸ್ಸನ್ನು ನಿಶ್ಚಲವಾಗಿ ನಿಲ್ಲಿಸುವುದು.

ಬುದ್ಧ ಜಾತಿಬೇದಗಳನ್ನು ಎಣಿಸಲಿಲ್ಲ. ಎಲ್ಲರಿಗೂ ಐದು ವೃತಗಳನ್ನು ಉಪದೇಶಿಸಿದ  1) ಹಿಂಸೆ ಮಾಡದಿರುವುದ, ಎಲ್ಲ ಜೀವಗಳ ಸಂರಕ್ಷಣೆ. 2) ಕಳ್ಳತನ ಮಾಡದೇ ಇರುವುದು, ದಾನ ಮಾಡುವುದು. 3) ಸುಳ್ಳು ಹೇಳದಿರುವುದು, ಸದಾ ಸತ್ಯವನ್ನು ನುಡಿಯುವುದು. 4) ಮದ್ಯಪಾನ ಮಾಡದಿರುವುದು, ಆಹಾರ ಪಾನೀಯಗಳಲ್ಲಿ ಸಂಯಮವನ್ನು ಪಾಲಿಸುವುದು. 5) ಶೀಲವನ್ನು ಕಾಪಾಡಿಕೊಳ್ಳುವುದು. ಇವು ಬುದ್ಧ ಬೋಧಿಸಿದ ಪಂಚಶಿಲ. "ಇತರರ ಕೋಪವನ್ನು ತಾಳ್ಮೆಯಿಂದ, ದ್ವೇಷವನ್ನು ಒಳ್ಳೆಯತನದಿಂದ ಗೆಲ್ಲಿರಿ. ನೀವು ಜಯಗಳಿಸಿದರೂ ನಿಮ್ಮ ಎದುರಾಳಿ ನಿಮ್ಮನ್ನು ದ್ವೇಷಿಸುತ್ತಾನೆ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಆತ ಉಪದೇಶಿಸಿದ. ಹುಟ್ಟು ಸಾವುಗಳು ಬಂಧನದಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿ ತೋರಿತು ಅವನಿಗೆ, ದೇವರಿರುವನೆ, ಆತ್ಮವುಂಟೆ, ಪ್ರಪಂಚ ಹೇಗೆ ಸೃಷ್ಟಿಯಾಯಿತು, ಇಂಥ ಪ್ರಶ್ನೆಗಳು ಅಪ್ರಕೃತ ಎಂದು ಭಾವಿಸಿದ. ಸದಾಚಾರಕ್ಕೆ ಅವನು ಪ್ರಾಶಸ್ತ್ಯ ಕೊಟ್ಟ.

ಬುದ್ಧನ ಅನಂತರ ಸುಮಾರು ಇನ್ನೂರು ವರ್ಷಗಳಲ್ಲಿ ಬೌದ್ಧಮತ ಭಾರತದಲ್ಲಿ ಬೇರೂರಿತು. ಸಾಮ್ರಾಟ ಅಶೋಕ ಹೆಸರಿಸಿದ ಐದು ಮುಖ್ಯ ಧರ್ಮಗಳಲ್ಲಿ ಬೌದ್ಧ ಧರ್ಮ ಮುಖ್ಯವಾದದ್ದು.

ಬೌದ್ಧ ಗ್ರಂಥಗಳೆಲ್ಲ ಪಾಲಿ ಭಾಷೆಯಲ್ಲಿವೆ. ಅವನ್ನು ಜಗತ್ತಿನ ಹಲವು ಭಾಷೆಗಳಿಗೆ ಭಾಷಾಂತರ ಮಾಡಿದ್ದಾರೆ. ಬುದ್ಧ, ಧರ್ಮ ಮತ್ತು ಸಂಘ ಈ ಮೂರು ರತ್ನಗಳಲ್ಲಿ ಬೌದ್ಧ ಯತಿಗಳು ಆಶ್ರಯವನ್ನು ಪಡೆದರು.

ಬುದ್ಧಂ ಶರಣಂ ಗಚ್ಚಾಮಿ

ಸಂಘಂ ಶರಣಂ ಗಚ್ಚಾಮಿ

ಧರ್ಮಂ ಶರಣಂ ಗಚ್ಚಾಮಿ

ಎಂಬುವುದು ಬೌದ್ಧಯತಿಗಳ ಮಂತ್ರಗಳಾಗಿದ್ದವು. 

ಭಾರತೀಯ ಸಮಾಜ, ಧರ್ಮ, ಚಿಂತನೆ, ಸಂಸ್ಕೃತಿಯ ಮೇಲೆ ಹೇರಳ ಪ್ರಭಾವ ಬೀರಿ ಶತಮಾನಗಳ ಕಾಲ ಬಾಳಿ ಬದುಕಿದ ಬೌದ್ಧ ಧರ್ಮವು ವಿದೇಶಗಳಲ್ಲಿ ಇಂದಗೂ ಹಚ್ಚಹಸಿರಾಗಿದೆ. ಬುದ್ಧ ಶುದ್ಧ ಚಾರಿತ್ರ್ಯದ, ಎಣೆಯಿಲ್ಲದ ಕಾರುಣ್ಯ ಮೂತರ್ಿ; ತಪ್ತ ಪೃಥ್ವಿಗೆ ಅಹಿಂಸೆಯ ಜಲಸೇಚನ ಮಾಡಿದ ಮಹಾನುಭಾವ.

- ಜಗದೀಶ ವಡ್ಡಿನ, ಕಾರವಾರ

          ಮೊ: 9632332185