ರಕ್ತದಾನಿಗಳು ದೇವರಿಗೆ ಸಮಾನರು : ಬ್ಯಾರಿಸ್ಟರ್ ಅಮರಸಿಂಹ

ರಕ್ತದಾನಿಗಳು ದೇವರಿಗೆ ಸಮಾನರು : ಬ್ಯಾರಿಸ್ಟರ್ ಅಮರಸಿಂಹ Blood donors are equal to God: Barrister Amarasimha


ಹಾರೂಗೇರಿ, 22 : ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಒಬ್ಬರು ನೀಡಿದ ರಕ್ತ ನಾಲ್ವರ ಜೀವ ಉಳಿಸುತ್ತದೆ. ಅದಕ್ಕಾಗಿ ರಕ್ತದಾನಕ್ಕೆ ಹಿಂಜರಿಯಬಾರದು ಎಂದು ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಅಧ್ಯಕ್ಷ ಬ್ಯಾರಿಸ್ಟರ ಅಮರಸಿಂಹ ಪಾಟೀಲ ಹೇಳಿದರು. 

  ಪಟ್ಟಣದ ಹಾವಿ ಆವರಣದಲ್ಲಿ ಬೆಳಗಾವಿ ಕೆಎಲ್‌ಇ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಕ್ತದಾನ ಮಾಡುವವರು ದೇವರಿಗೆ ಸಮಾನರು. ಯುವಕರು ರಕ್ತದಾನ ಮಾಡಲು ಮುಂದೆ ಬಂದು ಸಾವಿನಂಚಿನಲ್ಲಿರುವ ಜೀವಗಳನ್ನು ಕಾಪಾಡಿ, ದೇಶದ ಆರೋಗ್ಯ ವರ್ಧನೆಗೆ ನೇರವಾಗಬೇಕೆಂದರು.  

   ಸಸಿಗೆ ನೀರೆರೆದು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಸವಬ್ಯಾಕೂಡದ ಪೂಜ್ಯಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಸಂದೇಹಗಳಿದ್ದು, ರಕ್ತ ಸಹಜವಾಗಿ ಮನುಷ್ಯನ ಶರೀರದಲ್ಲಿ ಹುಟ್ಟುತ್ತಿರುತ್ತದೆ. ನಿಯಮಿತವಾಗಿ ವೈದ್ಯಕೀಯ ನಿಯಮಗಳಿಗೆ ತಕ್ಕಂತೆ ರಕ್ತದಾನ ಮಾಡಿದರೆ ಯಾವ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಅಲ್ಲದೇ ಹಲವು ಬದುಕುಗಳಿಗೆ ಜೀವದಾನ ಮಾಡಿದಂತಾಗುತ್ತದೆ. ಕಾಲೇಜು ಯುವಕರು, ವಯಸ್ಕರರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು. 

  ಬೆಳಗಾವಿ ಕೆಎಲ್‌ಇ ಸಂಸ್ಥೆ ಅಧಿಕಾರಿ ವಿಠ್ಠಲ ಮಾನೆ ಮಾತನಾಡಿ ಕೆಎಲ್‌ಇ ಸಂಸ್ಥೆಯಿಂದ ಹೊರರೋಗಿಗಳಿಗೆ ಕನಿಷ್ಠ ಬೆಲೆಯಲ್ಲಿ ವಿತರಿಸಲಾಗುತ್ತಿದ್ದು, ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ರಕ್ತವನ್ನು ನೀಡಲಾಗುತ್ತದೆ ಎಂದರು. ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗದ ಅಂಗಸಂಸ್ಥೆಗಳ ಸುಮಾರು 500ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.  

  ಚಿಕ್ಕಮಕ್ಕಳ ತಜ್ಞ ಡಾ.ಗೀರೀಶ ನಾರಗೊಂಡ, ತ್ರೀಕಾಲ ಪಾಟೀಲ, ಭಾಗ್ಯಶ್ರೀ ಪಾಟೀಲ, ಬಸನಗೌಡ ಆಸಂಗಿ, ಸಂಸ್ಥೆ ಕಾರ್ಯದರ್ಶಿ ಎಸ್‌.ಎಸ್‌.ಶಿಂಗಾಡಿ, ಡಾ.ಸಂಜು ಬಾನೆ, ರಾಜಶೇಖರ ಪಾಟೀಲ, ಹಣಮಂತ ಯಲಶೆಟ್ಟಿ, ಜಯಪಾಲ ನಾಗನೂರ, ಶ್ರೀಶೈಲ ಪಾಲಭಾವಿ ಹಾಗೂ ಅಂಗಸಂಸ್ಥೆಗಳ ಎಲ್ಲ ಪ್ರಾಚಾರ್ಯರು, ಬೋದಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.