ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ

Best NCC Unit Award for Lingaraja College

ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ 

ಬೆಳಗಾವಿ 05: ಬೆಂಗಳೂರಿನ ಕ್ರೈಸ್ಟ್‌ ಯುನಿರ್ವ್ಹಸಿಟಿಯಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು 2024-25ನೇ ಸಾಲಿನ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿಯನ್ನು ಲಿಂಗರಾಜ ಕಾಲೇಜಿಗೆ ನೀಡಿ ಗೌರವಿಸಿದೆ. 

24-25ನೇ ಸಾಲಿನಲ್ಲಿ ಕಾಲೇಜಿನ ಎನ್‌ಸಿಸಿ ಘಟಕದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಜರುಗಿದ ವಿವಿಧ ಶಿಬಿರಗಳಲ್ಲಿ ಆಯ್ಕೆಯಾಗಿ, ಪಾಲ್ಗೊಂಡು ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಚಿನ್ನದ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಹಲವು ಎನ್‌ಸಿಸಿ ಕೆಡೆಟ್‌ಗಳು ಅಗ್ನಿವೀರ ಮೊದಲ್ಗೊಂಡು ಶಸಸ್ತ್ರಪಡೆಗೆ ಆಯ್ಕೆಯಾಗಿ ರಾಷ್ಟ್ರಸೇವೆಗೆ ತೊಡಗಿದ್ದಾರೆ. ಇದರೊಂದಿಗೆ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ವನಮಹೋತ್ಸವ, ವೃದ್ಧಶ್ರಾಮ ಭೇಟಿ, ಕ್ಯಾನ್ಸರ್, ಎಡ್ಸ್‌ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ. ಹೀಗೆ ತಮ್ಮ ರಚನಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಗಳಿಂದ ಮಾದರಿಯೆನಿಸಿರುವ ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದ ಕೊಡುಗೆಯನ್ನು ಪರೀಶೀಲಿಸಿದ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 

ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯದ ಉಪನಿರ್ದೇಶಕ   

ಏರ್ ಕಮಾಂಡೋರ ಬಿ. ಅರುಣಕುಮಾರ ವಿಎಸ್‌ಎಂ ಅವರು ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿ ಹಾಗೂ ಎನ್‌ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.  

ಕಾಲೇಜಿನ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಬೆಳಗಾವಿ ಎನ್‌ಸಿಸಿ ಗ್ರುಪ್ ಕಮಾಂಡರ್ ಕರ್ನಲ್ ಮೋಹನ್ ನಾಯಕ, 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡರ್ ಕರ್ನಲ್ ಸುನೀಲ ದಾಗರ, ಲೆ.ಕರ್ನಲ್ ಸಿದ್ಧಾರ್ಥ ರೆಡೂ ಎಸ್‌ಎಂ, ಕೆಎಲ್‌ಇ ಜಂಟಿ ಕಾರ್ಯದರ್ಶಿಗಳಾದ ಡಾ.ಪ್ರಕಾಶ ಕಡಕೋಳ, ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿ, ಪಿಯು ಪ್ರಾಚಾರ್ಯ ಗಿರಿಜಾ ಹಿರೇಮಠ, ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.