ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಪಾರ ಜನಮೆಚ್ಚುಗೆ ಗಳಿಸಿದ ನಾಟಕೋತ್ಸವ

ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಪಾರ ಜನಮೆಚ್ಚುಗೆ ಗಳಿಸಿದ ನಾಟಕೋತ್ಸವ Belgaum District 17th Kannada Sahitya Sammelana a drama festival that garnered immense appreciation

ಹಾರೂಗೇರಿ, 16 : ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಜರುಗಿದ ಸಾಣೆಗಳ್ಳಿಯ ಶಿವಸಂಚಾರ ನಾಟಕೋತ್ಸವ ತಂಡವು ಜನೇವರಿ 10, 11 ಮತ್ತು 12 ರಂದು ಜಂಗಮದೆಡೆಗೆ, ಕಳ್ಳರ ಸಂತೆ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ನಾಟಕಗಳು ಅಪಾರ ಜನಮನ್ನಣೆ ಗಳಿಸಿದವು. 

ಜಂಗಮದೆಡೆಗೆ : ಜಂಗಮದೆಡೆಗೆ ಬಸವಣ್ಣನ ಆದರ್ಶವನ್ನು ಬಿಂಬಿಸುವ ಅಪೂರ್ವ ನಾಟಕವಾಗಿದ್ದು, ಜಾತಿ ವ್ಯವಸ್ಥೆಯ ಅನಾಹುತಗಳನ್ನು ಬಿಂಬಿಸುವ ಜಂಗಮದೆಡೆಗೆ ನಾಟಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿನ ಸಂದರ್ಭದಲ್ಲಿ ಅಂತರ್ಜಾತಿ ವಿವಾಹಗಳ ಪ್ರಸ್ತುತತೆಯನ್ನು ಬಿಂಬಿಸಿತು. 

ಕಳ್ಳರ ಸಂತೆ : ಕಳ್ಳರ ಸಂತೆ ಹಾಸ್ಯ ನಾಟಕವಾಗಿದ್ದು, ಇವತ್ತಿನ ಕಾಲದಲ್ಲಿ ಎಲ್ಲರೀ ಕಳ್ಳರಾಗಿರುವಾಗ ಒಳ್ಳೆಯವರನ್ನು ಹುಡುಕುವುದು ದುರ್ಲಭವಾಗಿದೆ. ಆದರೆ ಇಂದಿಗೂ ಪ್ರಾಮಾಣಿಕವಾಗಿ ದುಡಿದು ಸಮಾಜಕ್ಕೆ ಅನ್ನ ನೀಡುವ ನೇಗಿಲಯೋಗಿ ಮಾತ್ರ ಭ್ರಷ್ಟಾಚಾರ ಮುಕ್ತನಾಗಿದ್ದು, ಸಮಾಜಕ್ಕೆ ಸಂದೇಶ ಕೊಡುವ ಯೋಗಿಯಾಗಿದ್ದಾನೆಂಬುದು ಕಳ್ಳರ ಸಂತೆ ನಾಟಕ ಬಿಂಬಿಸಿತು. 

ಶಿವಯೋಗಿ ಸಿದ್ಧರಾಮೇಶ್ವರ : ಈ ನಾಟಕ ರಾಘವಾಂಕನ ಸಿದ್ಧರಾಮ ಚಾರಿತ್ರ್ಯಕ್ಕಿಂತಲೂ ಭಿನ್ನವಾಗಿತ್ತು. ಸಿದ್ಧರಾಮ ಕರ್ಮಯೋಗಿಯಾಗಿರುವುದರ ಜೊತೆಗ ಶಿವಯೋಗಿಯಾದಾಗಲೇ ಬದುಕು ಸಾರ್ಥಕತೆ ಎಂಬುದನ್ನು ಕಲಾವಿದರು ತಮ್ಮ ಅಭಿನಯದ ಮೂಲಕ ಜನಮನದಲ್ಲಿ ಅಚ್ಚೊತ್ತುವಂತೆ ಬಿಂಬಿಸಿದರು. ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನಾಟಕಗಳ ಕಲಾವಿದರ ಅಭಿನಯದಲ್ಲಿ ತಲ್ಲಿಣರಾದರು. ಕಲಾವಿದರು ಅದ್ಭುತ ಪ್ರದರ್ಶನ ನೀಡಿದರು. 

  ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ರಸ ವಿಮರ್ಶಕ ಸಾಹಿತಿ ಡಾ.ವಿ.ಎಸ್‌.ಮಾಳಿ ನಾಟಕೋತ್ಸವದ ಕುರಿತು ಮಾತನಾಡಿ ಸಾಮಾಜಿಕವಾಗಿ ಸಾರ್ವಕಾಲಿಕ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಮೂಡಿಸುವಲ್ಲಿ ಈ ನಾಟಕಗಳು ಪ್ರೇಕ್ಷಕರ ಮನದಲ್ಲಿ ಗಾಢ ಪರಿಣಾಮವನ್ನುಂಟು ಮಾಡಿವೆ. ಗಾಂಧೀಜಿಯವರನ್ನು ಪ್ರಭಾವಿಸಿರುವುದು ಒಂದು ನಾಟಕ ಎಂಬುದನ್ನು ನಾವು ನೆನಪಿಡಬೇಕಿದೆ ಎಂದು ಹೇಳಿದರು. 

  ನಾಟಕಗಳ ಪ್ರಾಯೋಜಕತ್ವವನ್ನು ವಹಿಸಿದ ಬೆಳಗಾವಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ವಿದ್ಯಾವತಿ ಭಜಂತ್ರಯವರನ್ನು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‌ ವತಿಯಿಂದ ಸತ್ಕರಿಸಿ, ಗೌರವಿಸಲಾಯಿತು.  ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಈ ಮೂರು ಮಾಟಕಗಳನ್ನು ಆಯೋಜಿಸಲಾಯಿತು. 

ರಾಯಬಾಗ ತಾಲೂಕು ಕಸಾಪ ಘಟಕ ಅಧ್ಯಕ್ಷ ಈರನಗೌಡ ಪಾಟೀಲ, ಆಯ್‌.ಆರ್‌.ಮಠಪತಿ, ಎಸ್‌.ಬಿ.ಕ್ಯಾಸ್ತಿ, ರವೀಂದ್ರ ಪಾಟೀಲ, ಲಕ್ಷ್ಮಣ ಜಾಯಗೋಣಿ, ಟಿ.ಎಸ್‌.ವಂಟಗೂಡಿ, ಆರ್‌.ಎನ್‌.ಮುರಾರಿ, ಎಂ.ಎಸ್‌.ಬಳವಾಡ, ಮಲ್ಲಿಕಾರ್ಜುನ ಯಡವನ್ನವರ, ರವೀಂದ್ರ ಭಾವಿ, ಬಿ.ಎಲ್‌.ಘಂಟಿ, ಧರ್ಮಣ್ಣ ನಡಟ್ಟಿ, ಅಜಯ ಬಿದರಿ, ಶ್ರೀಕಾಂತ ಕಂಬಾರ, ಬಿ.ಆಯ್‌.ಬಳೋಲ, ಎಂ.ಬಿ.ಮಧಬಾವಿ, ಪಿ.ಬಿ.ಮಗದುಮ್, ವಿ.ಪಿ.ಗಲಗಲಿ, ಸಿ.ಎಂ.ಜಾಯಗೋಣಿ, ಶಿವಾನಂದ ಹಣಸಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.