ಕಾರವಾರ 8: ಬಸವಣ್ಣನವರ ಕಾಯಕ ಪ್ರಜ್ಞೆಯನ್ನು ಮನುಷ್ಯರ ಬದುಕಿನಲ್ಲಿ ಅನುಸರಿಸಬೇಕಿದೆ. ಶೋಷಕ ಸಮಾಜದಲ್ಲಿ ಜನಿಸಿ, ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಕಾರಣವಾಗಿ ಬಸವಣ್ಣ ಸಮಾಜದಲ್ಲಿ ಬಹು ಎತ್ತರಕ್ಕೆ ಬೆಳೆದರು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ್ಲಬಸವ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶೋಷಕನಿಗೆ ಶೋಷಣೆ ಮಾಡುವುದು ಒಂದು ರೀತಿಯ ಖುಷಿ ನೀಡಿದರೆ, ಶೋಷಣೆಗೆ ಒಳಗಾಗುವವನಿಗೆ ಶೋಷಣೆ ಪ್ರತಿಭಟಿಸುವುದರಲ್ಲೇ ಒಂದು ಬಗೆಯ ಪ್ರತಿರೋಧವಿದೆ. ಶೋಷಣೆಗೆ ಎದುರು ನಿಲ್ಲುವ ಪ್ರತಿರೋಧದ ಗುಣವನ್ನು ಬಸವಣ್ಣ ಸಮಾಜದ ಮುಂದಿಟ್ಟರು. ಅಲ್ಲದೇ ರಾಜಾಶ್ರಯದಲ್ಲಿದ್ದರೂ ಸರಳವಾಗಿ ಬದುಕಿದರು. ರಾಜನ ಆಶ್ರಯದಲ್ಲಿರುವವರು ಸರಳವಾಗಿ ಬದುಕುವುದು ಅಷ್ಟು ಸುಲಭದ ಕೆಲಸವಲ್ಲ. ಬಸವಣ್ಣ ಸರಳವಾಗಿ, ಪ್ರಾಮಾಣಿಕವಾಗಿ ಬದುಕಿದ ಕಾರಣ ಇವತ್ತು ಸಕರ್ಾರ ಅವರ ಜನ್ಮದಿನವನ್ನು ಜನರಿಗೆ ಆದರ್ಶವಾಗಲಿ ಎಂದು ಆಚರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಬಸವಣ್ಣನವರ ತತ್ವಗಳು, ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಬಗ್ಗೆ ಸಂದೇಶ ಸಾರುತ್ತವೆ. ಅವರ ವಚನಗಳು ಸರಳವಾದ ಭಾಷೆಯಲ್ಲಿದ್ದವು, ಅವುಗಳನ್ನು ಜನಸಾಮಾನ್ಯ ವ್ಯಕ್ತಿಯೂ ಅರ್ಥ ಮಾಡಿ ಕೊಳ್ಳಬಹುದಾಗಿತ್ತು. ತಮ್ಮ ಅರಿವಿನ ವಚನಗಳ ಮೂಲಕ ಸಮಾನತೆಯ ಸಮಾಜ ತರಲು ಶ್ರಮಿಸಿದರು ಎಂದರು. ಬಸವಣ್ಣನವರು ಕಾಯಕ ಮತ್ತು ದಾಸೋಹವನ್ನು ಪ್ರತಿಪಾದಿಸಿದರು. ಜನರು ದೇವರನ್ನು ಕಾಣಲು ತಪಸ್ಸು ಮಾಡಬೇಕು ಎಂದೇನಿಲ್ಲ, ತಾವು ಮಾಡುವ ಕಾಯಕವನ್ನು ನಿಷ್ಠೆಯಿಂದ ಮಾಡಿದಾಗ ಕಾಯಕವೇ ಕೈಲಾಸವಾಗುತ್ತದೆ ಹಾಗೂ ದಾಸೋಹ ಮಾಡುವುದರಿಂದ ಸಂತೋಷ ದೊರೆಯುತ್ತದೆ ಎಂಬ ಮಾರ್ಗವನ್ನು ತೋರಿಸಿದವರು. ಇದನ್ನು ಅನುಸರಿಸಿದ ಅನೇಕ ಶರಣರು ಅನ್ನ ದಾಸೋಹ, ಅಕ್ಷರ ದಾಸೋಹ ಮಾಡಿ ಯಶಸ್ಸು ಕೂಡಾ ಕಂಡರು. ಮಹಾವೀರ, ಬುದ್ದ, ಅಂಬೇಡ್ಕರ್ , ಗಾಂಧಿಜೀಯನ್ನು ನೆನೆಯುವಂತೆ, ಇಂದು ವಿದೇಶಗಳಲ್ಲಿ ಬಸವಣ್ಣರನ್ನೂ ಕೂಡಾ ನೆನೆಯುಲಾಗುತ್ತದೆ. ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಸಮಾಜಕ್ಕೆ ಒತ್ತು ಕೊಟ್ಟಂತೆ ಬಸವಣ್ಣನವರು 12ನೇ ಶತಮಾನದಲ್ಲೇ ತಾರತಮ್ಯ ರಹಿತ ಮಾನವೀಯ ಸಮಾಜ ಮಾಡಲು ಕ್ರಾಂತಿಯನ್ನು ಮಾಡಿದರು. ಅವರ ಅನುಭವ ಮಂಟಪ, ಇಂದಿನ ನಮ್ಮ ಸಂವಿಧಾನಕ್ಕೆ ಪ್ರೇರಣೆಯಾಗಿ ಒಂದು ಸ್ವರೂಪ ಪಡೆದಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು ಬಸವಣ್ಣನವರು ಎಂದು ಅಭಿಪ್ರಾಯ ಪಟ್ಟರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ ಸಮಾಜ ಸುಧಾರಕ ಬಸವಣ್ಣನವರ ವಚನಗಳು ಧರ್ಮ, ಜಾತಿ ಎಲ್ಲವೂ ಒಂದೇ ಎಂದು ಹೇಳಿವೆ. ದಯವೇ ಧರ್ಮದ ಮೂಲವಯ್ಯಾ ಎನ್ನುವಂತಹ ಅವರ ಮಾತು, ಮಾನವರೆಲ್ಲರೂ ಒಂದೇ ಜಾತಿಯವರು, ಮಾನವತಾವಾದವೇ ಮುಖ್ಯವಾಗಿದೆ ಎಂದು ತಿಳಿಸಿಕೊಟ್ಟಿದೆ. ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವದ ಕಣ್ಣು ತೆರೆಯಿಸಿದ ನೇತಾರರಾಗಿದ್ದಾರೆ ಎಂದರು
ನಗರ ಸಭೆ ಪೌರಾಯುಕ್ತ ಎಸ್ ಯೋಗೇಶ್ವರ ಅವರು ಮಾತನಾಡಿ ಬಸವಣ್ಣನವರ ಕಲ್ಪನೆಗಳೇ ವಿಶಿಷ್ಟವಾಗಿದ್ದವು. ತಾರತಮ್ಯ ತಾಂಡವಾಡುತ್ತಿದ್ದ 12ನೇ ಶತಮಾನದಲ್ಲಿ ಪಂಚಾಕ್ಷರಿ ಮಂತ್ರಕ್ಕೆ ನಾಂದಿ ಹಾಡಿದವರು ಬಸವಣ್ಣ, ಕೇವಲ ಬಿಲ್ವಪತ್ರೆಯನ್ನು ಲಿಂಗಕ್ಕೆ ಅಪರ್ಿಸಿ, ಪೂಜೆ ಸಲ್ಲಿಸುವ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟವರು. ಮೋಕ್ಷ ಪ್ರಾಪ್ತಿಗಾಗಿ ಕಾಯಕವನ್ನೇ ನಿಷ್ಠೆಯಿಂದ ಮಾಡಿ ಕೈಲಾಸ ಕಾಣಿರಿ ಎಂದವರು. ಇಂದು ನಮ್ಮ ರಾಷ್ಟ್ರ , ಜಾತ್ಯಾತೀತ ರಾಷ್ಟ್ರವಾಗಿದ್ದರೆ ಬಸವಣ್ಣನವರ ಕೊಡುಗೆಯೂ ಅದರಲ್ಲಿದೆ ಎಂದರು. ಕನ್ನಡ ಮತ್ತು ಸಂಕೃತಿ ಇಲಾಖೆ ಪ್ರಭಾರಿ ಸಹಾಯಕ ನಿದರ್ೇಶಕರಾದ ಹಿಮಂತರಾಜು.ಜಿ. ಬಸವಣ್ಣನವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರವಾರ ಉಪವಿಭಾಗಾಧಿಕಾರಿ ಅಭಿಜಿನ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.