ಡಾಕಾ, ನ 28- ಸುಂದರ್‍ಗಂಜ್‍ನ ಗೈಬಂದಾ ಲೋಕಸಭಾ ಕ್ಷೇತ್ರದ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಮಂಜುರಲ್ ಇಸ್ಲಾಮ್ ಲಿಟೊನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಬಾಂಗ್ಲಾದೇಶ ನ್ಯಾಯಾಲಯವೊಂದು ಗುರುವಾರ ಏಳು ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮಾಜಿ ಸಂಸದ ಹಾಗೂ ಜಾತಿಯಾ ಪಕ್ಷದ ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಖಾನ್, ಅವರ ಆಪ್ತ ಕಾರ್ಯದರ್ಶಿ ಶಂಸುಜೊಹಾ, ಚಾಲಕ ಅಬ್ದುಲ್ ಹನ್ನನ್, ಮನೆ ಕೆಲಸಗಾರ, ಶಹಿನ್ ಮಿಯಾ, ಮೆಹಿದಿ ಹಸನ್, ಅನ್ವರುಲ್ ಇಸ್ಲಾಮ್ ರಾಣಾ ಮತ್ತು ಚಂದನ್ ಕುಮಾರ್ ಸರ್ಕಾರ್ ಅವರನ್ನು ತಪ್ಪಿತಸ್ಥರೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದಿಲೀಪ್ ಕುಮಾರ್ ಭೌಮಿಕ್ ತೀರ್ಪು ನೀಡಿ, ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಹತ್ಯೆ ನಂತರ ಏಳು ಆರೋಪಿಗಳ ಪೈಕಿ ಆರು ಮಂದಿ ಜೈಲಿನಲ್ಲಿದ್ದಾರೆ. ಆದರೆ, ಚಂದನ್ ಕುಮಾರ್ ಸರ್ಕಾರ್ ದೇಶದಿಂದ ಪಲಾಯನಗೈದಿದ್ದಾನೆ.
2016ರ ಡಿಸೆಂಬರ್ 31ರಂದು ಮಂಜುರಲ್ ಇಸ್ಲಾಮ್ ಅವರನ್ನು ದುಷ್ಕರ್ಮಿಗಳು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ನಿನ್ನೆಯಷ್ಟೇ ಇದೇ 2016ರಲ್ಲಿ ಡಾಕಾದಲ್ಲಿ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಾಂಗ್ಲಾದೇಶ ನ್ಯಾಯಾಲಯವೊಂದು ಏಳು ಉಗ್ರರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಉಗ್ರರ ಗುಂಡಿನ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದರು. ಇವರಲ್ಲಿ ಹೆಚ್ಚಿನವರು ವಿದೇಶಿಯರಾಗಿದ್ದರು.