ಬಾಳಾಚಾರ್ಯರು ಕನ್ನಡಕ್ಕೆ ಕಾಳಿದಾಸನ ಸಂಸ್ಕೃತ ಮೇಘದೂತವನ್ನು ಅನುವಾದಿಸಿದವರಲ್ಲಿ ಮೊದಲಿಗರು
ಧಾರವಾಡ 19 : ವಿರಹದ ಶಾಪವನ್ನು ಪಡೆದ ಯಕ್ಷನೊಬ್ಬನ ಕಲ್ಪನಾ ವಿಲಾಸವೇ ಕಾಳಿದಾಸನ ಮೇಘದೂತ. ಈ ಕಾವ್ಯಕ್ಕೆ ವಸ್ತು, ಕತೆ ಎಂಬುದಿಲ್ಲ. ಅನೇಕರು ಕನ್ನಡಕ್ಕೆ ಇದನ್ನು ಅನುವಾದಿಸಿದರು. ಅದರಲ್ಲಿ ಮೊದಲಿಗರು ಶಾಂತ ಕವಿಗಳು ಎಂಬುದು ಹೆಮ್ಮೆಯ ವಿಚಾರ ಎಂದು ಖ್ಯಾತ ವಿದ್ವಾಂಸ ಡಾ. ಶ್ರೀರಾಮ ಭಟ್ ಹೇಳಿದರು.ಇಂದು ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಆಯೋಜಿಸಿದ್ದ ಕನ್ನಡದ ಆದ್ಯ ನಾಟಕಕಾರ ಹಾಗೂ ಕೀರ್ತನಕಾರ ಸಕ್ಕರಿ ಬಾಳಾಚಾರ್ಯ “ಶಾಂತಕವಿ” ರವರ 169ನೇ ಜನ್ಮದಿನೋತ್ಸವದ ಅಂಗವಾಗಿ 2025ರ ದಿನದರ್ಶಿಕೆ ಬಿಡುಗಡೆಗೊಳಿಸಿ, ಅವರು ಉಪನ್ಯಾಸ ನೀಡಿದರು. ಶಾಂತಕವಿಗಳು 1892ರಲ್ಲಿ ರಚಿಸಿದ ಅನುವಾದಿತ “ಮೇಘದೂತ” ಕಾವ್ಯದಲ್ಲಿ ನಲ್ಲೆಗೆ ಕಳುಹಿಸುವ ಸಂದೇಶವನ್ನು ವರ್ಣಿಸಲಾಗಿದೆ. ಜನರ ಸಂವೇದನೆ, ಸಂಸ್ಕೃತಿ, ಆಹಾರ, ವಿಚಾರಗಳು ಸೇರಿದಂತೆ ಹಲವಾರು ವಿಷಯಗಳು ಮೇಘದೂತದಲ್ಲಿವೆ. ದೇಶೀಯ ಭಾಷೆಯ ಮೂಲಕ ಓದುಗರಿಗೆ ಕಾವ್ಯವನ್ನು ವರ್ಣರಂಜಿತವಾಗಿ ಸವಿಯುವಂತೆ ಬಾಳಾಚಾರ್ಯರು ಅನುವಾದಿಸಿದ್ದಾರೆ ಎಂದು ಅವರು ಹೇಳಿದರು. ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಅವರು ಮಾತನಾಡಿ, ಸಂಸ್ಕೃತದಿಂದ ರಚಿತವಾದ ಕಾವ್ಯ, ನಾಟಕ ಹಾಗೂ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಸಾಹಿತ್ಯಕ್ಕೆ ಬಾಳಾಚಾರ್ಯರು ನೀಡಿದ ವಿಚಾರಗಳು ವಿಸ್ತಾರ ಸ್ವರೂಪವನ್ನು ಪಡೆದಿವೆ. ಅನೇಕ ಕವಿಗಳು ಕನ್ನಡಕ್ಕೆ ಕೃತಿಗಳನ್ನು ಅನುವಾದಿಸುವ ಮೂಲಕ ಸುಲಭವಾಗಿ ಕಾವ್ಯ, ಕೃತಿಗಳನ್ನು ಕನ್ನಡಿಗರು ಓದಿ ಅವುಗಳನ್ನು ಆಸ್ವಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸಕ್ಕರಿ ಬಾಳಾಚಾರ್ಯರು ಕೃತಿಗಳು, ಕಾವ್ಯಗಳು ಹಾಗೂ ನಾಟಕಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್‌ನ ಅಧ್ಯಕ್ಷರಾದ ಬಾಬುರಾವ್ ಸಕ್ಕರಿ, ಸದಸ್ಯರಾದ ಅರವಿಂದ ಕುಲಕರ್ಣಿ, ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ವೀ ಹುಡೇದ ಸೇರಿದಂತೆ ಇತರರು ಉಪಸ್ಥಿತರಿದ್ದರು. ರಂಗ ನಿರ್ದೇಶಕ ಡಾ.ಪ್ರಕಾಶ ಗರುಡ ಅವರು ದಿನದರ್ಶಿಕೆ ಕುರಿತು ತಿಳಿಸಿದರು. ಅನಿತಾ ಹನುಮೇಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಘವ ಕಮ್ಮಾರ ಹಾಗೂ ಸಂಗಡಿಗರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿ, ಭಾವನಾ ಸೌರವ ಸಕ್ಕರಿ ವಂದಿಸಿದರು.