ಬೆಂಗಳೂರು 15: ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ, ಕೋಲಾಹ ಎಬ್ಬಿಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.
ಸೋಮವಾರ ಬೆಳಿಗ್ಗೆ ಸದನ ಸೇರುತ್ತಿದ್ದಂತೆ ಉಪಸಭಾಪತಿ ಧಮರ್ೆಗೌಡ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾದರು. ಆಗ ಎದ್ದುನಿಂತ ಬಿಜೆಪಿ ಸದಸ್ಯರು ಪ್ರಶ್ನೋತ್ತರಕ್ಕೆ ಅಡ್ಡಿಪಡಿಸಿದರು. ಆಗ ಒಮ್ಮೆ ಕಲಾಪವನ್ನು ಅರ್ದಗಂಟೆ ಕಾಲ ಮುಂದೂಡಲಾಗಿತ್ತು. ಬಳಿಕ ಮತ್ತೊಮ್ಮೆ ಸದನ ಸೇರಿದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದಕ್ಕೆ ಹಾಕಲಾಯಿತು.
ಆರಂಭದಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಮಾರಸ್ವಾಮಿ ಅವರು ಸರಕಾರ ನಡೆಸುವಷ್ಟು ಬಹುಮತ ಹೊಂದಿಲ್ಲ. ಸರಕಾರ ನಡೆಸುವ ಶಕ್ತಿಯೂ ಅವರಿಗಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಕುಮಾರಸ್ವಾಮಿ ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ನ ಐವಾನ್ ಡಿಸೋಜಾ, ವಿರೋಧ ಪಕ್ಷದ ನಾಯಕರು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕಲಾಪ ಮುಂದುವರೆಸುವಂತೆ ಸಭಾಪತಿ ಪೀಠದಲ್ಲಿದ್ದ ಧಮರ್ೆಗೌಡ ಅವರಿಗೆ ಮನವಿ ಮಾಡಿದರು.
ಸಭಾನಾಯಕಿ ಜಯಮಾಲಾ ಮಾತನಾಡಿ, ಬಿಜೆಪಿ ಸದಸ್ಯರು ಸೂಚನಾಪತ್ರ ನೀಡದೇ ಕಲಾಪದ ಸಮಯ ವ್ಯರ್ಥಗೊಳಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಕಲಾಪ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದಾಗ ಉಪಸಭಾಪತಿ ಧರ್ಮೆಗೌಡ ಪೀಠದಿಂದಲೇ ಎದ್ದುನಿಂತು ನಿಯಮವನ್ನು ಉಲ್ಲಂಘನೆ ಮಾಡಬೇಡಿ. ಯಾವುದೇ ವಿಚಾರದ ಚರ್ಚೆಗೆ ಸೂಚನಾಪತ್ರ ಕೊಡದ ಹೊರತು ಚರ್ಚೆಗೆ ಅವಕಾಶ ಕೊಡುವುದಿಲ್ಲ. ಸೂಚನಾಪತ್ರ ಕೊಟ್ಟನಂತರ ಪರಿಶೀಲಿಸಲಾಗುವುದು ಎಂದರು. ಉಪಸಭಾಪತಿಗಳ ಮಾತಿಗೆ ಕಿವಿಗೊಡದೇ ಬಿಜೆಪಿ ಸದಸ್ಯರು ತಮ್ಮ ಗದ್ದಲ ಮುಂದುವರೆಸಿದರು. ಬಿಜೆಪಿಯ ಆಯನೂರು ಮಂಜುನಾಥ ಮಾತನಾಡಿ, ಉಪಸಭಾಪತಿಗಳಿಗೆ ಸ್ವಲ್ಪ ತಾಳ್ಮೆ ಇರಬೇಕು ನಮ್ಮ ಮಾತು ಕೇಳಿ ಎಂದರು.
ಇದಕ್ಕೆ ಕಾಂಗ್ರೆಸ್ ನ ಐವಾನ್ ಡಿಸೋಜಾ ಹಾಗೂ ಇತರ ಸದಸ್ಯರು ಆಯನೂರು ಮಾತಿಗೆ ಆಕ್ಷೇಪ ವ್ಯಕ್ತಮಾಡಿ, ಪ್ರಶ್ನೋತ್ತರ ನಡೆಸಿ ಎಂದರು. ಆಗ ಕೋಟಾ ಶ್ರೀನಿವಾಸಪೂಜಾರಿ ಮತ್ತು ಇತರ ಬಿಜೆಪಿ ಸದಸ್ಯರು ಸಚಿವರು ರಾಜೀನಾಮೆ ನೀಡಿದ್ದಾರೆ. ಸರಕಾರವೂ ರಾಜೀನಾಮೆ ನೀಡಿದೆ.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಾವು ಯಾರ ಬಳಿ ನಮ್ಮ ಕಷ್ಟ ಹೇಳುವುದು ಎಂದು ಪ್ರಶ್ನಿಸಿದರು. ಇದಕ್ಕೆ ಧನಿಗೂಡಿಸಿದ ಆಯನೂರು ಮಂಜುನಾಥ್, ಸಚಿವರೇ ರಾಜೀನಾಮೆ ನೀಡಿದ ಮೇಲೆ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ಕೊಡುವವರು ಯಾರು ಎಂದು ಕಿಡಿಕಾರಿದರು. ರಾಜೀನಾಮೆ ಕೊಟ್ಟ ಸರಕಾರ ಕಲಾಪ ಹೇಗೆ ನಡೆಸುತ್ತದೆ. ಮಂತ್ರಿಗಳೇ ಇಲ್ಲ ಸರಕಾರ ಹೇಗೆ ನಡೆಯುತ್ತದೆ ಎಂದ ಆಯನೂರು ಮತ್ತು ತೇಜಸ್ವಿನಿ ರಮೇಶ್ ಕಿಡಿಕಾರಿದರು. ಈ ವೇಳೆ ಬಿಜೆಪಿ ಮತ್ತು ಮೈತ್ರಿಕೂಟ ಸದಸ್ಯರ ನಡುವೆ ಸದನದಲ್ಲಿ ತೀವ್ರ ವಾಗ್ವಾದ ಉಂಟಾಯಿತು.
ಜೆಡಿಎಸ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಲು ಮುಂದಾದಾಗ ಅವರ ಮಾತಿಗೆ ಬಿಜೆಪಿ ಅವಕಾಶ ಕೊಡಲಿಲ್ಲ. ಆಗ ಪೀಠದಿಂದ ಮತ್ತೆ ಎದ್ದುನಿಂತ ಧರ್ಮೆಗೌಡರು. ತಾವು ನಿಂತ ಮೇಲೂ ಸದಸ್ಯರು ಮಾತನಾಡುವುದು, ಗದ್ದಲ ಮಾಡುವುದು ಸರಿಯಲ್ಲ. ಸೂಚನಾಪತ್ರ ಕೊಡದೇ ಮಾತನಾಡುವುದು ಸರಿಯಲ್ಲ. ಸದನದ ಗೌರವ ಕಾಪಾಡಿ. ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡ ಮೇಲೂ ಅವಕಾಶ ಮಾಡಿಕೊಡದೇ ಇರುವುದು ಸರಿಯಲ್ಲ. ನಿಯಮ ಗೊತ್ತಿದ್ದರೂ ಸಮಯವ್ಯರ್ಥ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗಲೂ ಬಿಜೆಪಿ ತನ್ನ ಪಟ್ಟನ್ನು ಸಡಿಲಿಸದೇ ಇದ್ದಾಗ ಉಪಸಭಾಪತಿ ಅವರು ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಿದರು.
ಮತ್ತೆ ಸದನ ಸೇರಿದಾಗ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರರು ಈ ಸರಕಾರ ಅಸ್ಥಿತ್ವದಲ್ಲಿಲ್ಲ. ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಆಗ ಉಪಸಭಾತಿ ಅವರು ಸೂಚನಾ ಪತ್ರ ನೀಡದ ಹೊರತು ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಸದನಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಘನತೆ ಎತ್ತಿ ಹಿಡಿಯುವ ಕೆಲಸ ಮಾಡಿ. ಮೊದಲು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಆಗ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ವರ್ತನೆಯನ್ನು ಖಂಡಿಸಿದರು. ಈ ಹಂತದಲ್ಲಿ ಆಯನೂರು ಮಂಜುನಾಥ್ ಕ್ರಿಯಾ ಲೋಪ ಎತ್ತಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಸಕರ್ಾರ ಅಸ್ಥಿತ್ವದಲ್ಲಿಲ್ಲ. ಇಂತಹ ಸಕರ್ಾರದಿಂದ ಯಾವ ರೀತಿಯ ಉತ್ತರ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆಗ ಉಳಿದ ಬಿಜೆಪಿ ಸದಸ್ಯರು ಮೊದಲು ಸರಕಾರ ಬಹುಮತ ನಿರೂಪಿಸಲಿ. ಬಳಿಕ ಪ್ರಶ್ನೋತ್ತ ಕೈಗೆತ್ತಿಕೊಳ್ಳಿ ಎಂದರು. ಮತ್ತೊಂದೆಡೆ ಆಡಳಿತ ಪಕ್ಷದ ಸದಸ್ಯರು ಒಕ್ಕೊರಲಿನಿಂದ ಮಾತನಾಡಿ, ಬಿಜೆಪಿ ನಾಯಕರು ರಾಜ್ಯದಲ್ಲಿ ಮೈತ್ರಿ ಸರಕಾರ ವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಬಿಜೆಪಿಯ ಆಪರೇಷನ್ ಕಮಲ ಕಾರ್ಯಚರಣೆಗೆ ಧಿಕ್ಕಾರ ಎಂದರು. ಆರೋಪ, ಪ್ರತ್ಯಾರೋಪ, ಗದ್ದಲ ಕೋಲಾಹಲದ ಮಧ್ಯೆ ಉಪ ಸಭಾಪತಿ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.