ಬೆಂಗಳೂರು 22: ವಿಶ್ವಾಸಮತ ಯಾಚನೆ ವಿಳಂಬ ಮಾಡಿದರೆ ಅನೈತಿಕತೆ ಯಾಗುತ್ತದೆ, ಆದರೆ ನಮ್ಮ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ನೀಡುವುದು ನೈತಿಕತೆಯೇ ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಿಧಾನಸಭೆಯಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.
ವಿಶ್ವಾಸಮತ ನಿರ್ಣಯದ ಮೇಲೆ ನಡೆದ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವಾಸಮತ ಒಂದೇ ಇಲ್ಲಿನ ಚರ್ಚೆ ಎಂಬಂತೆ ವಿರೋಧ ಪಕ್ಷದವರೂ, ಮಾಧ್ಯಮದವರು ಬಿಂಬಿಸುತ್ತಿದ್ದಾರೆ. ಆದರೆ ಕೆಲವು ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆಯೂ ಚರ್ಚೆಯಾಗಲಿ, ಈ ಬಗ್ಗೆ ಸದನ ಬೆಳಕು ಚೆಲ್ಲಲಿ, ನಿಮಗೆ ವಿಶ್ವಾಸಮತ ಯಾಚನೆ ಬಗ್ಗೆ ಅವಸರವಿರಬಹುದು, ಆದರೆ ನಮಗೆ ಈ ಎಲ್ಲಾ ವಿಷಯಗಳು ಬೆಳಕಿಗೆ ಬರಬೇಕು ಎಂಬ ಉದ್ದೇಶವಿದೆ ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಕಳೆದ ಏಳೆಂಟು ತಿಂಗಳಿಂದ ನಿರಂತರವಾಗಿ ಬಿಜೆಪಿ ಸಂಪರ್ಕದಲ್ಲಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಅವರು ಬಿಜೆಪಿ ಅಭ್ಯಥರ್ಿಗೆ ಬೆಂಬಲ ನೀಡಿದ್ದಾರೆ.
ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈಗಾಗಲೇ ದೂರು ನೀಡಲಾಗಿದೆ. ಜಾರಕಿಹೊಳಿ ಮತ್ತು ಬಿಜೆಪಿ ನಡುವೆ ಅನ್ಯೋನ್ಯತೆ ಇತ್ತು ಎಂಬುದು ಇದರಿಂದ ಸ್ಪಷ್ಟಗೊಂಡಿದೆ ಎಂದು ಹೇಳಿದರು. ಮತ್ತೊಬ್ಬ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದರು. ಅವರನ್ನು ಕೂಡ ಬಿಜೆಪಿ ಸಂಪಕರ್ಿಸಿ 25 ಕೋಟಿ ರೂಪಾಯಿ ಆಮಿಷ ಒಡ್ಡಿತ್ತು. ಈಗ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಇವೆಲ್ಲಾ ನನ್ನ ಕಲ್ಪನೆಗಳಲ್ಲ, ಇವೆಲ್ಲವೂ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿ. ಬಿ.ಸಿ.ಪಾಟೀಲ್ ಮತ್ತು ಬಿಜೆಪಿ ಮುಖಂಡರೊಬ್ಬರು ಮಾತನಾಡಿದ ಆಡಿಯೋ ಬಹಿರಂಗವಾಗಿದೆ ಎಂದರು.
ಬಡವರು ಕಷ್ಟಪಟ್ಟು ದುಡಿದ, ಮನೆಗಳನ್ನು ಲೀಸ್ಗೆ ಹಾಕಿ ಪಡೆದ ದುಡ್ಡನ್ನು ಬಂಡವಾಳ ಹೂಡಿದ ಐಎಂಎ ಕಂಪನಿಯ ಮಾಲೀಕ ಸಾರ್ವಜನಿಕರಿಗೆ ವಂಚನೆ ಮಾಡಿ ಪರಾರಿಯಾಗುವಾಗ ಬಿಡುಗಡೆ ಮಾಡಿದ ಆಡಿಯೋದಲ್ಲಿ 'ಒಬ್ಬ ಶಾಸಕ' ತಮ್ಮಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪಿತ ಶಾಸಕ ಕೂಡ ತಾವು ಬಿಜೆಪಿಗೆ ಸೇರುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೂ ಬಿಜೆಪಿ ಪ್ರೇರಣೆ ಇಲ್ಲವೇ ? ಇದು ಬಿಜೆಪಿಯ ನೈತಿಕತೆಯೇ ? ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು. ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ, ಅವರೆಲ್ಲರೂ ಸಂತೋಷದಲ್ಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ಶಾಸಕ ಸಿ.ಎಂ.ಉದಾಸಿ ಇದೇ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹಾಗಾದರೆ ಅತೃಪ್ತ ಶಾಸಕರನ್ನು ಮುಂಬೈಗೆ ಕರೆದೊಯ್ದದ್ದು ಯಾರು ? ಎಂದು ಕೇಳಿದರು. ರಾಜೀನಾಮೆ ಕೊಡಲು ಯಾವುದೇ ಶಾಸಕರಿಗೆ ಅಧಿಕಾರವಿದೆ. ಆದರೆ ಅದು ನೈಜವೇ ಮತ್ತು ಸ್ವಯಂಪ್ರೇರಣೆಯಿಂದ ಆಗಿದೆಯೇ ಎಂಬುದನ್ನು ಸ್ಪೀಕರ್ ಖಾತರಿಪಡಿಸಿಕೊಳ್ಳಬೇಕು, ಓರ್ವ ಶಾಸಕ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಇನ್ನೊಬ್ಬ ಶಾಸಕನ ನಿಧರ್ಾರ ನೋಡಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.
ಇದು ಸ್ವಯಂ ಪ್ರೇರಣೆಯ ರಾಜೀನಾಮೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕರು ವಿಮಾನದಲ್ಲಿ ಹೋಗುವಾಗ ಅವರೊಂದಿಗೆ ಯಾರಿದ್ದರು ಎಂಬುದು ಎಲ್ಲರಿಗೂ ಗೊತ್ತು. ಮಾಧ್ಯಮಗಳು ಈ ವಿಷಯವನ್ನು ಚಿತ್ರ ಸಹಿತ ಪ್ರಕಟಿಸಿವೆ. ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿ ಮುಖಂಡ ಆರ್. ಅಶೋಕ್ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಅತೃಪ್ತ ಶಾಸಕರನ್ನು ಕರೆದೊಯ್ದ ವಿಮಾನ ಬಿಜೆಪಿಯ ಮುಖಂಡರೊಬ್ಬರಿಗೆ ಸೇರಿದ್ದು. ಹಾಗಾದರೆ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಸಂಚು ಇಲ್ಲವೇ ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ ?, ಒಮ್ಮೆಲೇ 13- 14 ಶಾಸಕರು ರಾಜೀನಾಮೆ ನೀಡುವುದು ಎಂದರೆ ಏನರ್ಥ ? ಇವೆಲ್ಲಾ ಆಕಸ್ಮಿಕವೇ ? ಎಂದು ಪ್ರಶ್ನಿಸಿದರು. ಈ ಮಧ್ಯೆ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್, ನೀವು ಯಾವುದೇ ವ್ಯಕ್ತಿಯ ಬಗ್ಗೆ ಆರೋಪ ಮಾಡುವುದಾದರೆ ಮೊದಲು ನೋಟಿಸ್ ಕೊಟ್ಟು ಸೂಕ್ತ ದಾಖಲೆಗಳನ್ನು ಕೊಡಬೇಕಾಗುತ್ತದೆ. ಮೇಲಾಗಿ ಬಿ.ಸಿ.ಪಾಟೀಲ್ ಅವರು ಈಗ ಸದನದಲ್ಲಿ ಇಲ್ಲ. ತಮ್ಮನ್ನು ಸಮಥರ್ಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಹಾಗಾಗಿ ಇಂತಹ ಆರೋಪಗಳಿಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ನೋಟಿಸ್ ಕೊಡಬೇಕು ಎಂಬ ನಿಯಮಾವಳಿ ಇದೆ. ಆದರೆ ಇಲ್ಲಿ ಅವರು ಗೈರು ಹಾಜರಾಗಿರುವುದು ನಿಜ. ಅವರನ್ನು ಜನ ಆರಿಸಿ ಕಳಿಸಿರುವುದು ಇಲ್ಲಿ ಬಂದು ಕೂತು ಚಚರ್ೆ ನಡೆಸಲಿ ಎಂಬ ಉದ್ದೇಶದಿಂದ, ಅವರಿಗೆ ಸದನಕ್ಕೆ ಬರುವ ಹಕ್ಕು ಇದೆ. ಅವರನ್ನು ಯಾರೂ ತಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವ ಸಭಾಧ್ಯಕ್ಷರಿಗೂ ನನಗೆ ಬಂದಂತಹ ದಯನೀಯ ಸ್ಥಿತಿ ಬಂದಿಲ್ಲ. ಅವರು ರಾಜೀನಾಮೆ ಕೊಟ್ಟಿದ್ದಾರೆ, ಅಂಗೀಕಾರವಾಗಿಲ್ಲ, ಇಲ್ಲಿಗೆ ಬರಬೇಕು, ಅವರು ಬರುತ್ತಿಲ್ಲ, ಜನ ಅನಾಥರಾಗುತ್ತಿದ್ದಾರೆ, ಅರ್ಥ ಮಾಡಿಕೊಳ್ಳಿ ಎಂದು ಬಹಳ ಬೇಸರದಿಂದ ಹೇಳಿದರು.