ಮಹಿಳೆಯರ ರಕ್ಷಣೆಗೆ ಜಾಗೃತಿ ಅಗತ್ಯ: ನ್ಯಾ. ತ್ಯಾಗರಾಜ ಇನವಳ್ಳಿ

ಮಹಿಳೆಯರ ರಕ್ಷಣೆಗೆ ಜಾಗೃತಿ ಅಗತ್ಯ: ನ್ಯಾ. ತ್ಯಾಗರಾಜ ಇನವಳ್ಳಿ Awareness is needed for the protection of women: Justice Thyagaraja Inavalli

ಮಹಿಳೆಯರ ರಕ್ಷಣೆಗೆ ಜಾಗೃತಿ ಅಗತ್ಯ: ನ್ಯಾ. ತ್ಯಾಗರಾಜ ಇನವಳ್ಳಿ 


ಬೆಳಗಾವಿ 06: ಮಹಿಳಾ ದೌರ್ಜನ್ಯ, ಅಪಹರಣ, ಲೈಂಗಿಕ ಕಿರುಕುಳ ಪ್ರಕರಣ ತಡೆಯಬೇಕಿದೆ. ಹೀಗಾಗಿ ಮಹಿಳೆಯರ ರಕ್ಷಣೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ, ಅವರಿಗೆ ಕಾನೂನಿನ ಅರಿವು ಮೂಡಿಸಬೇಕಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್‌.ಇನವಳ್ಳಿ ಅವರು ಹೇಳಿದರು. 

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೂರು ನಿರ್ವಾಹಣ ಸಮಿತಿಯ, ಪಿಎಂ ಉಷಾ ಮೆರು ಯೋಜನೆಯ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಮಹಿಳೆಯರ ಕಾನೂನು ಹಕ್ಕುಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 

ಕಾನೂನಿನ ಪ್ರಕಾರ ಸಮಾಜದಲ್ಲಿ ಸರ್ವರೂ ಸಮಾನರು. ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯವಿದೆ. 

ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದು ಹೇಳಿದರು. 

ಪಿಎಂ ಉಷಾ ಯೋಜನೆಯಡಿ, ಕೇಂದ್ರ ಸರ್ಕಾರವು ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಸಹಾಯವನ್ನು ಸಂಸ್ಥೆಗಳ ಅಭಿವೃದ್ಧಿ, ಸಂಶೋಧನೆ, ಬೋಧನಾ ವಿಧಾನಗಳ ಸುಧಾರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲ. ಮಹಿಳೆಯರು ಇದರ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಕುಲ ಸಚಿವರಾದ ಸಂತೋಷ ಕಾಮಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ವಿದ್ಯಾರ್ಥಿಗಳು ಪ್ರತಿ ದಿನ ತಾವು ಮಾಡಿದ ಪ್ರಗತಿಯನ್ನು ಒಂದು ಕಡೆಗೆ ದಾಖಲಿಸಬೇಕೆಂದರು. ಭಾರತದ ಸಂವಿಧಾನವು ಎಲ್ಲರಿಗೂ ಶಿಕ್ಷಣದ ಹಕ್ಕು ನೀಡಿದೆ. ಅಪಘಾನಿಸ್ತಾನದಲ್ಲಿ ಇವತ್ತಿಗೂ ಸಹಿತ ಹೆಣ್ಣು ಮಕ್ಕಳು ವಿದ್ಯೆ ಕಲಿಯುವ ಹಾಗಿಲ್ಲ. ಆದರೆ ಭಾರತದಲ್ಲಿ ಶಿಕ್ಷಣ ಎನ್ನುವುದು ಮೂಲಭೂತ ಹಕ್ಕು ಆಗಿದೆ ಎಂದು ಹೆಮ್ಮೆಯಿಂದ ನುಡಿದರು.