ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ಕೊಪ್ಪಳ 12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ನೇಹ ಸಂಸ್ಥೆಗಳ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕಿನ ಸಾಮೂಹಿಕ ವಿವಾಹ ಆಯೋಜಕರಿಗೆ ಹಾಗೂ ಪೂಜಾರಿಗಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ-2012ರ ಕುರಿತು ಜಾಗೃತಿ ಕಾರ್ಯಕ್ರಮವು ಗುರುವಾರದಂದು ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ನಡೆಯಿತು.
ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಬಾಲ್ಯವು ಅತ್ಯಮೂಲ್ಯವಾದದ್ದು, ಬಾಲ್ಯವನ್ನು ಮಕ್ಕಳು ಅನುಭವಿಸುವಂತಾಗಬೇಕು, ಅದಕ್ಕೆ ಅವಶ್ಯಕವಾದ ಪೂರಕ ವಾತಾವರಣವನ್ನು ನಿರ್ಮಿಸಲು ನಾವುಗಳೆಲ್ಲರೂ ಕಾರ್ಯನಿರ್ವಹಿಸಬೇಕು. ಸರಕಾರವು ಮಕ್ಕಳ ರಕ್ಷಣೆ, ಅಪೌಷ್ಠಿಕತೆ ನಿವಾರಣೆ, ತಾಯಿ ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಿಸಿದೆ. ಕರ್ನಾಟಕ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು, 2016ರಲ್ಲಿ ತಿದ್ದುಪಡಿಯನ್ನು ತಂದಿದ್ದು, ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ 2018 ಮಾರ್ಚ 3 ರಿಂದ ರಾಜ್ಯದಲ್ಲಿ ಈ ಕಾಯ್ದೆಯು ಜಾರಿಯಲ್ಲಿರುತ್ತದೆ. ಈ ಕಾಯ್ದೆಯಡಿಯಲ್ಲಿ ದೇಶದಲ್ಲಿಯೇ ್ರ್ರಥಮವಾಗಿ ಪೊಲೀಸ್ ಅಧಿಕಾರಿಗಳಿಗೆ ಸೂ-ಮೂಟೋ ಅಧಿಕಾರದಡಿಯಲ್ಲಿ ಪ್ರಕರಣವನ್ನು ದಾಖಲಿಸುವ/ದಾಖಲಿಸಿಕೊಳ್ಳುವ ಅಧಿಕಾರವನ್ನು ನೀಡಿರುತ್ತದೆ. ಬಾಲ್ಯವಿವಾಹವನ್ನು ಮಾಡಿದ ಪಾಲಕರಿಗೆ ಇರುವಷ್ಟೇ ಶಿಕ್ಷೆ ಬಾಲ್ಯವಿವಾಹಕ್ಕೆ ಅವಕಾಶವನ್ನು ಕಲ್ಪಿಸಿದವರಿಗೆ, ಭಾಗವಹಿಸಿದವರಿಗೆ ಹಾಗೂ ಪ್ರೋತ್ಸಾಹಿಸಿದವರಿಗೆ ಕನಿಷ್ಠ 1 ವರ್ಷದಿಂದ 2 ವರ್ಷ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಯಾವುದೇ ವ್ಯಕ್ತಿಗಳಿಂದ ಪ್ರಭಾವ ಬಂದಲ್ಲಿ ನ್ಯಾಯಾಲಯದಿಂದ “ತಡೆಯಾಜ್ಞೆ”ಯನ್ನು ಪಡೆದು ಬಾಲ್ಯವಿವಾಹಗಳನ್ನು ತಡೆಗಟ್ಟಬಹುದಾಗಿದೆ, ಜಿಲ್ಲೆಯಲ್ಲಿ ಈಗಾಗಲೇ ಸುಮಾರು “ತಡೆಯಾಜ್ಞೆ”ಗಳನ್ನು ನ್ಯಾಯಾಲಯಗಳು ಹೊರಡಿಸಿವೆಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲೆಯಲ್ಲಿ “ಬಾಲ್ಯವಿವಾಹ ನಿಷೇಧ ಕಾಯ್ದೆ-2006”ನ್ನು ಪರಿಣಾಮಕಾರಿಯಾಗಿ ಜಾರಿಗೊಳಸಿದೆ. ಬಾಲ್ಯವಿವಾಹವನ್ನು ಮಾಡಿದ ಪಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದರ ಜೊತೆಗೆ ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹವನ್ನು ಮಾಡಿದ ದೇವಸ್ಥಾನದ ಸಮಿತಿಯ ವಿರುದ್ಧ ಹಾಗೂ ಕಲ್ಯಾಣ ಮಂಟಪದಲ್ಲಿ ಬಾಲ್ಯವಿವಾಹಕ್ಕೆ ಅವಕಾಶವನ್ನು ನೀಡಿದ ಕಲ್ಯಾಣ ಮಂಟಪದ ವ್ಯವಸ್ಥಾಪಕರ ವಿರುದ್ಧವು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. ನಿಮ್ಮ ಸಮಿತಿಗಳಿಂದ ಆಯೋಜಿಸುವ ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹಕ್ಕೆ ಅವಕಾಶವನ್ನು ನೀಡಬಾರದು ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಾಲ್ಯವಿವಾಹವನ್ನು ಮಾಡಲು ಸಹಕರಿಸಿದವರು ಮತ್ತು ಪ್ರೋತ್ಸಾಹಿಸಿದವರು ಸೇರಿದಂತೆ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸಾಮೂಹಿಕ ವಿವಾಹ ಆಯೋಜಕರಿಗೆ ಹಾಗೂ ಪೂಜಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ನೇಹ ಸಂಸ್ಥೆಯ ಸಂಯೋಜಕ ರಾಮಾಂಜನೇಯ, ಹನುಮಂತರಾವ್, ಶಿವಲೀಲಾ ವನ್ನೂರು ಸೇರಿದಂತೆ ಸ್ನೇಹ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂಧಿಗಳು, ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ದೇವಸ್ಥಾನಗಳ ಪೂಜಾರಿಗಳು ಭಾಗವಹಿಸಿದ್ದರು.