ಆಧ್ಯಾತ್ಮಿಕ ಪರಂಪರೆ ಹಾಗೂ ಹಿಂದೂ ನಂಬಿಕೆಗೆ ಧಕ್ಕೆ

ಆಧ್ಯಾತ್ಮಿಕ ಪರಂಪರೆ ಹಾಗೂ ಹಿಂದೂ ನಂಬಿಕೆಗೆ ಧಕ್ಕೆ Attack on spiritual heritage and Hindu faith

                        ವಿಜಯಪುರ 31: ಸಂತರಿಗೆ ನಿಷೇಧ, ಹಿಂದೂ ನಂಬಿಕೆಗೆ ದಾಳಿ ಹಿ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿ ಬಯಲು ಇತ್ತೀಚಿನ ದಿನಗಳಲ್ಲಿ ಕಾಡ ಸಿದ್ದೇಶ್ವರ ಸ್ವಾಮೀಜಿಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕ್ರಮಗಳು ಅತ್ಯಂತ ಆತಂಕಕಾರಿ ಮತ್ತು ಖಂಡನೀಯವಾಗಿವೆ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಎರಡು ಜಿಲ್ಲೆಗಳಲ್ಲಿ ಸ್ವಾಮೀಜಿಗಳ ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ಅದು ಒಂದು ಆಧ್ಯಾತ್ಮಿಕ ಪರಂಪರೆ ಹಾಗೂ ಹಿಂದೂ ನಂಬಿಕೆಯ ಮೇಲಿನ ನೇರ ದಾಳಿ. ಸ್ವಾಮೀಜಿಗಳ ಮಾತು ಅಥವಾ ವಿಚಾರಧಾರೆಯನ್ನು ಒಪ್ಪದಿದ್ದರೆ ಅದನ್ನು ತಾರ್ಕಿಕವಾಗಿ ಪ್ರಶ್ನಿಸುವ ಹಕ್ಕು ಸರ್ಕಾರಕ್ಕಿದೆ. ಆದರೆ ನಿಷೇಧದ ಮೂಲಕ ಧ್ವನಿಯನ್ನು ಮೌನಗೊಳಿಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧ.

                         ಇದು ಸ್ವಾಮೀಜಿಗಳಿಗೆ ಮಾತ್ರವಲ್ಲ, ಅವರ ಮೇಲೆ ನಂಬಿಕೆ ಇಟ್ಟಿರುವ ಲಕ್ಷಾಂತರ ಹಿಂದೂ ಭಕ್ತರು ಹಾಗೂ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ. ಈ ಕ್ರಮದಿಂದ ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟಾಗಿದೆ. ಒಂದೆಡೆ ಎಡಪಂಥೀಯ ವಿಚಾರಧಾರೆಯಿಂದ ಪ್ರಭಾವಿತ ಕೆಲವೊಂದಿಷ್ಟು ಸ್ವಾಮೀಜಿಗಳು “ದೇವರನ್ನು ಹೊರಗೆ ಎಸೆಯಬೇಕು” ಎನ್ನುವಂತಹ ಅತಿರೇಕದ ಹೇಳಿಕೆಗಳನ್ನು ನೀಡಿದಾಗ ಸರ್ಕಾರ ಮೌನ ವಹಿಸುತ್ತದೆ. ಮತ್ತೊಂದೆಡೆ ದೇವರ ನಂಬಿಕೆ, ಸಂಸ್ಕೃತಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಮಾತನಾಡಿದ ಕಾಡ ಸಿದ್ದೇಶ್ವರ ಸ್ವಾಮೀಜಿಗಳ ಮೇಲೆ ನಿಷೇಧ ಹೇರಲಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಯ ಸ್ಪಷ್ಟ ಉದಾಹರಣೆ. ಇನ್ನಷ್ಟು ವಿಷಾದಕರ ಸಂಗತಿ ಎಂದರೆ, ಕಾಡ ಸಿದ್ದೇಶ್ವರ ಸ್ವಾಮೀಜಿಗಳ ಹಿಂದೂ ನಿಲುವನ್ನು ಕಾಂಗ್ರೆಸ್ ಸರ್ಕಾರ ರಾಜಕೀಯ ಮತಬ್ಯಾಂಕ್ ದೃಷ್ಟಿಯಿಂದ ಬಳಸಿಕೊಳ್ಳುತ್ತಿರುವುದು.

                       ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಾರೆ ಎಂದು ಸದಾ ಇತರರ ಮೇಲೆ ಆರೋಪ ಮಾಡುವ ಕಾಂಗ್ರೆಸ್, ಇಂದು ಅದೇ ಕೆಲಸವನ್ನು ತಾನೇ ಮಾಡುತ್ತಿರುವುದು ನಾಚಿಕೆಗೇಡಿತನ. ಸಂತರನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸುವುದು ಸಮಾಜಕ್ಕೆ ಅಪಾಯಕಾರಿ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಬಸವಾದಿ ಶರಣ  ಹಿಂದೂ ಸಮಾವೇಶ ಬಬಲೇಶ್ವರದಲ್ಲಿ ಶಾಂತಿಯುತವಾಗಿ ಹಾಗೂ ಭಾರೀ ಯಶಸ್ಸಿನೊಂದಿಗೆ ಜರುಗಿರುವುದು ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದೆ. ಇದು ಯಾವುದೇ ಪಕ್ಷದ ವಿರುದ್ಧದ ಕಾರ್ಯಕ್ರಮವಲ್ಲ; ಅದು ಹಿಂದೂ ಸಮಾಜದ ಆತ್ಮಗೌರವ, ಏಕತೆ ಮತ್ತು ಜಾಗೃತಿಯ ಪ್ರತಿಬಿಂಬ. ಸರ್ಕಾರದ ಇದೇ ರೀತಿಯ ಅಸಹಿಷ್ಣು ಹಾಗೂ ದಮನಕಾರಿ ನೀತಿ ಮುಂದುವರೆದರೆ, ಬಬಲೇಶ್ವರದಲ್ಲಿ ನಡೆದಂತಹ ಸಮಾವೇಶಗಳು ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ, ಪ್ರತಿ ತಾಲ್ಲೂಕು ಮತ್ತು ಪ್ರತಿ ಜಿಲ್ಲೆಯಲ್ಲಿ ಜರುಗುವುದರಲ್ಲಿ ಯಾವುದೇ ಸಂದೇಹವಿಲ್ಲ.

                      ನಂಬಿಕೆಯನ್ನು ನಿಷೇಧಗಳಿಂದ ಕಟ್ಟಿ ಹಾಕಲು ಸಾಧ್ಯವಿಲ್ಲ; ಅದು ಒತ್ತಡಕ್ಕೆ ಒಳಗಾದಷ್ಟು ಇನ್ನಷ್ಟು ಬಲವಾಗುತ್ತದೆ. ಕಾಂಗ್ರೆಸ್ ಸರ್ಕಾರ ನಿಷೇಧ ಹಾಕುವುದರಿಂದ ಹಿಂದೂ ಸಮಾಜ ಮೌನವಾಗುವುದಿಲ್ಲ. ಆದರೆ ಸರ್ಕಾರದ ಮೇಲಿನ ವಿಶ್ವಾಸ ಮಾತ್ರ ದಿನೇ ದಿನೇ ಕುಸಿಯುತ್ತದೆ. ಪ್ರಜಾಸತ್ತಾತ್ಮಕ ಭಾರತದಲ್ಲಿ ಧಾರ್ಮಿಕ ನಂಬಿಕೆ, ಸಂತರ ಗೌರವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಸಂತರಿಗೆ ಗೌರವ ನೀಡುವುದು ಕೇವಲ ಧಾರ್ಮಿಕ ಕರ್ತವ್ಯವಲ್ಲ; ಅದು ಸಂವಿಧಾನಾತ್ಮಕ ಹಾಗೂ ನೈತಿಕ ಹೊಣೆಗಾರಿಕೆಯೂ ಹೌದು.?? ಬಸವರಾಜ್ ಹೂಗಾರ್ನಿಕಟ ಪೂರ್ವ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ, ವಿಜಯಪುರ ಜಿಲ್ಲೆ.