ಅಥಣಿ: ಪಿಎಲ್ಡಿ ಬ್ಯಾಂಕಿನ ನೂತನ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅಥಣಿ: ಪಿಎಲ್ಡಿ ಬ್ಯಾಂಕಿನ ನೂತನ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಅವಿರೋಧ ಆಯ್ಕೆ Athani: Unopposed election of new PLD Bank president and vice president

ಅಥಣಿ 13: ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಾನಸಿಂಗ್ ತಮ್ಮಣ್ಣ ಮಗರ್ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ ಗಾಣಿಗೇರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಇಲಾಖೆಯ ರಾಘವೇಂದ್ರ ನೂಲಿ ಘೋಷಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರ​‍್ಪ ಸವದಿ, ಬ್ಯಾಂಕಿನ ಮೊದಲ ಅವಧಿಯ ಅಧ್ಯಕ್ಷ ದುಂಡಪ್ಪ ಆಸ್ಕಿ ಅವರು ಪೂರ್ವ ಒಪ್ಪಂದದಂತೆ ಎರಡುವರೆ ವರ್ಷದ ನಂತರ ಅಧ್ಯಕ್ಷ ಸ್ಥಾನವನ್ನು ಮಾನಸಿಂಗ್ ಮಗರ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡನೇ ಅವಧಿಗೆ ಮಾನಸಿಂಗ್ ಮಗರ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.  

ದುಂಡಪ್ಪ ಆಸ್ಕಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಬ್ಯಾಂಕಿನ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದು, ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ಕೊಂಡೊಯ್ದಿದ್ದಾರೆ. ಅಲ್ಲದೆ, ಅವರ ಅವಧಿಯಲ್ಲೇ ನೂತನ ಕಟ್ಟಡ ನಿರ್ಮಾಣ ಯೋಜನೆಯೂ ಪೂರ್ಣಗೊಂಡಿದೆ ಎಂದು ಪ್ರಶಂಸಿಸಿದರು. ಅವರಿಗೆ ನೀಡಿದ ಸಹಕಾರವನ್ನೇ ನೂತನ ಅಧ್ಯಕ್ಷ ಮಾನಸಿಂಗ್ ಮಗರ್ ಅವರಿಗೂ ನೀಡುವಂತೆ ಆಡಳಿತ ಮಂಡಳಿ ಸದಸ್ಯರಿಗೆ ಮನವಿ ಮಾಡಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮಾನಸಿಂಗ್ ತಮ್ಮಣ್ಣ ಮಗರ್, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅವರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಹೇಳಿದರು. ಬ್ಯಾಂಕಿನ ಅಭಿವೃದ್ಧಿಗಾಗಿ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ, ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.  

ನಿಕಟಪೂರ್ವ ಅಧ್ಯಕ್ಷ ದುಂಡಪ್ಪ ಆಸ್ಕಿ ಮಾತನಾಡಿ, ತಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಬ್ಯಾಂಕಿನ ಆರ್ಥಿಕ ಸ್ಥಿತಿ ಹಾಗೂ ಕಟ್ಟಡ ಎರಡೂ ಶಿಥಿಲಾವಸ್ಥೆಯಲ್ಲಿದ್ದವು. ಸಾಲ ವಸೂಲಾತಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಸಾಲ ವಸೂಲಿ ಮಾಡಿದ್ದು, ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಕಾರಣವಾಯಿತು ಎಂದು ತಿಳಿಸಿದರು.  

ಅಲ್ಲದೆ, ಶಿಥಿಲಗೊಂಡಿದ್ದ ಕಟ್ಟಡದ ಬದಲಿಗೆ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿ, ಅಗತ್ಯ ಹಣಕಾಸು ವ್ಯವಸ್ಥೆ ಕಲ್ಪಿಸಿ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಬ್ಯಾಂಕಿಗೆ 11 ಕೋಟಿ ರೂ.ಗಳ ಹಣಕಾಸು ಅನುದಾನ ಮಂಜೂರಾಗಿದ್ದು, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ನಿರ್ದೇಶಕ ಮಂಡಳಿ ಸದಸ್ಯರಾದ ಅಶೋಕ್ ಪಡನಾಡ, ಶೀತಲ್ ಪಾಟೀಲ್, ಮಹದೇವ್ ಕೊರೆ, ವಿನಯ್ ಪಾಟೀಲ್, ರಾಜಗೌಡ ಪಾಟೀಲ್, ಸತ್ಯಪ್ಪ ಬಿರಾದಾರ್, ಅಪ್ಪಾಸಾಹೇಬ ವಾಘಮೋರೆ, ಶ್ರೀಶೈಲ್ ನಾಯಕ್, ತಂಗೆವ್ವ ಖೋತ್ ಹಾಗೂ ಸುಜಾತಾ ಖಡಕಿ ಉಪಸ್ಥಿತರಿದ್ದರು.  ಚುನಾವಣಾಧಿಕಾರಿಯಾಗಿ ರಾಘವೇಂದ್ರ ನೂಲಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.  

ಬ್ಯಾಂಕಿನ ವ್ಯವಸ್ಥಾಪಕ ರಾಜು ಬಂಡಿವಡ್ಡರ ಹಾಗೂ ಸಿಬ್ಬಂದಿಗಳಾದ ಸಂತೋಷ್ ಬನಸೋಡೆ, ಜಾವೀದ್ ಅತ್ತಾರ್, ಪರಶುರಾಮ್ ನಾವಿ, ಶ್ರೀಶೈಲ್ ಚೌದರಿ ಸೇರಿದಂತೆ ನೂರಾರು ಹಿತೈಷಿಗಳು ಭಾಗವಹಿಸಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸತ್ಕರಿಸಿದರು.