ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ: ಸಚಿವ ಲಾಡ್
Appropriate legal action against L&T Company: Minister Lad
ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ: ಸಚಿವ ಲಾಡ್
ಧಾರವಾಡ ಅ.27: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿಯು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು, ಸರ್ಕಾರಕ್ಕೂ ತೃಪ್ತಿ ಇಲ್ಲ. ಸಲಹೆ, ಸೂಚನೆಗಳನ್ನು ಸಾಕಷ್ಟು ಬಾರಿ ನೀಡಿದರು ಸುಧಾರಿಸಿದ ಈ ಕಂಪನಿ ವಿರುದ್ಧ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಹೇಳಿದರು. ಅವರು ಇಂದು (ಅ.27) ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2025-26 ನೇ ಸಾಲಿನ ಸಪ್ಟಂಬರ್ 2025 ರ ಅಂತ್ಯಕ್ಕೆ ಸಂಬಂಧಿಸಿದಂತೆ 2 ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕುಡಿಯುವ ನೀರಿನ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನೇಕ ಸಭೆಗಳನ್ನು ಜರುಗಿಸಿ, ನಿರ್ದೇಶನ ನೀಡಲಾಗಿದೆ. ಸೂಚನೆ ಪಾಲಿಸದೇ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡುತ್ತೀರುವದಕ್ಕೆ ದಂಡ ಸಹ ವಿಧಿಸಲಾಗಿದೆ. ಆದರೂ ಎಲ್ ಆ್ಯಂಡ್ ಟಿ ಕಂಪನಿಯ ಕಾರ್ಯವೈಖರಿಯಲ್ಲಿ ಬದಲಾವಣೆ, ಸುಧಾರಣೆ ಕಾಣುತ್ತಿಲ್ಲ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಜರುಗಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರೀಶೀಲನೆ ಮಾಡಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು. ಬೆಳೆ ಹಾನಿಯಲ್ಲಿ ರೈತರಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತಿಗಳ ಸೂಚನಾ ಫಲಕದಲ್ಲಿ ಮಾಹಿತಿಯನ್ನು ಅಳವಡಿಸಬೇಕು. ಯಾವ ರೈತರಿಗೆ ಪರಿಹಾರ ಜಮೆ ಆಗಿರುವುದಿಲ್ಲ ಅವರಿಗೆ ಸೂಕ್ತ ವಿವರಣೆ, ತಿಳುವಳಿಕೆ ನೀಡಬೇಕು ಎಂದು ಸಚಿವರು ಹೇಳಿದರು.
ಕೃಷಿ ಇಲಾಖೆಯಿಂದ ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಮತ್ತು ಕೃಷಿ ಉಪಕರಣಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಹಾಗೂ ಗೊಬ್ಬರಗಳು ದಾಸ್ತಾನು, ಮಾರಾಟದ ವಿವರಗಳನ್ನು ಪ್ರಕಟಿಸಬೇಕು. ಬೀಜ, ಗೊಬ್ಬರಗಳನ್ನು ಸಮರ್ಕವಾಗಿ ರೈತರಿಗೆ ಹಂಚಿಕೆ ಮಾಡಬೇಕು ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸಲು ರೈತರಿಗೆ ಪ್ರೋತ್ಸಾಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಿಕೆ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಬೆಳೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಅಡಿಕೆ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವಂತೆ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಕ್ರಮವಹಿಸಬೇಕೆಂದು ಅವರು ನಿರ್ದೇಶಿಸಿದರು. ಈರುಳ್ಳಿ ಬೆಳೆಯಲ್ಲಿ ಈ ಬಾರಿ ಬೆಲೆ ಏಕೆ ಕುಸಿತವಾಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ ಹಾಗೂ ಕಳೆದ ವರ್ಷಕ್ಕೂ ಮತ್ತು ಈ ವರ್ಷಕ್ಕೂ ಇರುವ ವ್ಯತ್ಯಾಸವೇನು? ಏನು ಬದಲಾವಣೆಗಳು ಆಗಿವೆ ಎಂಬುದನ್ನು ಸಮರ್ಕವಾಗಿ ಅಧ್ಯಯನ ಮಾಡಿ, ವರದಿ ನೀಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆಯ ಉಪನಿರ್ದೇಶಕರಿಗೆ ಅವರು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರೀಶೀಲನೆ ಮಾಡಿ, ಶೂನ್ಯ ಫಲಿತಾಂಶ ಮತ್ತು ವಿದ್ಯಾರ್ಥಿ ದಾಖಲಾತಿ ಶೂನ್ಯ ಇರುವ ಶಾಲೆಗಳಿಗೆ ನೋಟಿಸ್ ನೀಡಿ, ನಿಯಮಾನುಸಾರ ಅವುಗಳನ್ನು ಬಂದ್ ಮಾಡಬೇಕು. ಅಲ್ಲಿನ ಸಿಬ್ಬಂದಿಗಳನ್ನು ಸಿಬ್ಬಂದಿ ಅಗತ್ಯವಿರುವ ಸರ್ಕಾರಿ ಶಾಲೆಗಳಿಗೆ ತಕ್ಷಣ ವರ್ಗಾಯಿಸಬೇಕು. ಇದರಿಂದ ಸರ್ಕಾರದ ಅನುದಾನದ ಅಪವ್ಯಯ ತಪ್ಪುತ್ತದೆ ಎಂದು ಹೇಳಿದರು.
ಪ್ರತಿಯೊಂದು ಶಾಲೆಗಳಲ್ಲಿ ಅಗತ್ಯ ಮತ್ತು ಸುಸ್ಥಿತಿಯಲ್ಲಿ ಶೌಚಾಲಯಗಳು, ಕೋಠಡಿಗಳು ಇರುವಂತೆ ಮುಂಜಾಗ್ರತೆ ವಹಿಸಬೇಕು. ಸರಿಯಾದ ಶೌಚಾಲಯಗಳಿಲ್ಲದ ಶಾಲೆಗಳ ಮಾಹಿತಿಯನ್ನು ಸಲ್ಲಿಸಿದಲ್ಲಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಏಕೆ ಕಡಿಮೆಯಾಗುತ್ತಿದ್ದಾರೆ ಎಂಬುದನ್ನು ಪರೀಶೀಲಿಸಿ, ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಕೃಷಿ, ಪಂಚಾಯತ ರಾಜ್, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಎಲ್ಲರೂ ಸಮನ್ವಯದಿಂದ ಕ್ರಿಯಾಯೋಜನೆ ರೂಪಿಸಿ, ಜನರಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು. ಹಾಗೂ ನರೇಗಾದಲ್ಲಿ ನೋಂದಣಿ ಆಗಿರುವ ಜನರು ಕೆಲಸಕ್ಕೆ ಬಾರದೇ ಇದ್ದರೆ, ಅಂತಹವರು ನರೇಗಾ ಕೆಲಸದಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ನರೇಗಾ ಯೋಜನೆಯ ಕಾಮಗಾರಿಗಳ ನಿಗದಿತ ಭೌತಿಕ ಗುರಿಯನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಸಾಧಸಬೇಕೆಂದು ಎಂದು ಹೇಳಿದರು.
ವಿಧಾನ ಪರಿಷತ್ತ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮಾತನಾಡಿ, ಪ್ರಗತಿ ಪರೀಶೀಲನಾ ಸಭೆಗೆ ಬರುವ ಮೊದಲು ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ತರಬೇಕು. ಕೆಡಿಪಿ ಸಭೆಯು ಮಹತ್ವದಾಗಿರುವದರಿಂದ ಇಲಾಖಾವಾರು ಪ್ರಗತಿ ಪರೀಶೀಲನೆ, ಅನುದಾನ ಬಳಕೆ ಮತ್ತು ಯೋಜನೆ, ಕಾಮಗಾರಿಗಳ ಅನುಷ್ಠಾನದಲ್ಲಿ ಎದುರಿಸುವ ಅಡಚಣೆಗಳ ಕುರಿತು, ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಇವುಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಾಣಲು ಪ್ರಯತ್ನಿಸಲಾಗುತ್ತದೆ ಎಂದರು.
ಸಭೆಯಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಹಾಗೂ ನಿರಂತರ ಮಳೆಯಿಂದಾಗಿ ಈ ಬಾರಿ ಹೆಸರು, ಗೋವಿನಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಅತಿಯಾದ ಮಳೆಯಿಂದ ಬೆಳೆಗಳ ರಕ್ಷಣೆಗಾಗಿ ರೈತರು ಯೂರಿಯಾ ಹಾಗೂ ಇತರ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದಾರೆ. ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರ ಬಳಸುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಹೇಳಿದರು.
ಎಲ್ಲ ತಾಲೂಕುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ರೈತರನ್ನು ಒಗ್ಗೂಡಿಸಿ ಅವರಿಗೆ ಕೃಷಿ ಬೆಳೆಗಳ, ತೋಟಗಾರಿಕೆ ಬೆಳೆಗಳ, ಕೃಷಿಹೊಂಡಗಳ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಶೇ. 25 ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಪ್ರವೇಶದಲ್ಲಿ ಮೀಸಲಾತಿ ಇದ್ದರೂ, ಸರ್ಕಾರದ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ, ಆದಷ್ಟು ಬೇಗ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ತಂಡಾ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಪೂರೈಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿ ಅವಧಿ ಮುಗಿಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲು ಕ್ರಮವಹಿಸಿಲ್ಲ. ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಕ್ಷಣ ವಿದ್ಯಾರ್ಥಿಗಳಿಗೆ ಶೂ ವಿತರಿಸಲು ಕ್ರಮವಹಿಸಬೇಕೆಂದು ಅವರು ಹೇಳಿದರು.
ಕುಂದಗೋಳ ಶಾಸಕ ಎಂ. ಆರ್. ಪಾಟೀಲ ಅವರು ಮಾತನಾಡಿ, ಗೋವಿನಜೋಳ, ಸೊಯಾಬಿನ್ ಸೇರಿದಂತೆ ಇತರ ಕೃಷಿ ಬೆಳಗಳು ಹಾಗೂ ಅಡಿಕೆಯಂತಹ ತೋಟಗಾರಿಕಾ ಬೆಳೆಗಳು ಅತಿಮಳೆ ಹಾಗೂ ಗಾಳಿಯಿಂದ ಹಾನಿಯಾಗಿವೆ. ಈ ಕುರಿತು ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಪರೀಶೀಲಿಸಿ ಸರ್ಕಾರಕ್ಕೆ ಹಾನಿ ವರದಿ ಸಲ್ಲಿಸಬೇಕು. ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಇದ್ದು, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ತ ಸದಸ್ಯ ಎಫ್.ಹೆಚ್.ಜಕ್ಕಪ್ಪನವರ ಅವರು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿರುವ ಯೋಜನೆಗಳನ್ನು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಅನುಷ್ಠಾನಗೊಳಿಸಬೇಕು. ಮೀಸಲಾತಿಗೆ ಅನುಗುಣವಾಗಿ ಅನುದಾನವನ್ನು ಬಳಕೆ ಮಾಡಬೇಕು. ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಪ್ರತಿ ತಿಂಗಳು ಇಲಾಖಾವಾರು ಅಧಿಕಾರಿಗಳ ಸಭೆ ಜರುಗಿಸಿ, ಪ್ರಗತಿ ಪರೀಶೀಲನೆ ಮಾಡಲಾಗುತ್ತಿದೆ. ಪ್ರಗತಿಯಲ್ಲಿ ಬಾಕಿ ಇರುವ ಇಲಾಖೆಗಳಿಗೆ ಕಾಲಮಿತಿಯಲ್ಲಿ ಅಭಿವೃದ್ಧಿ ಸಾಧಿಸಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ನರೇಗಾ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ರಾಷ್ಟ್ರೀಯ ಹೆದ್ದಾರಿ, ಪಂಚಾಯತ ರಾಜ್ ಇಂಜನೀಯರಿಂಗ್, ಲೋಕೊಪಯೋಗಿ, ಸಹಕಾರಿ, ಸಾರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ, ಕೃಷಿ ಮಾರಾಟ ಮಂಡಳಿ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಮಾಡಲಾಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ತ ಸದಸ್ಯ ಪ್ರದೀಪ ಶೆಟ್ಟರ, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಇದ್ದರು. ಸಭೆಯಲ್ಲಿ ಜಿಲ್ಲಾ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 