ರಾಜ್ಯದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ

ರಾಜ್ಯದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ Appeal to the Honorable Chief Minister through the District Collector, demanding immediate issuance


ಕೊಪ್ಪಳ 01:   ರಾಜ್ಯದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬೆಳಗಾವಿ ಅಧಿವೇಶನದಲ್ಲಿ ಮುಖ್ಯ ಮಂತ್ರಿಗಳಾದ ತಾವು ಹೇಳಿದಂತೆಯೇ 56 ಸಾವಿರ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಗಳಾದ ಮಾನ್ಯ ಸಿದ್ದರಾಮೇಶ್ವರ ರವರ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು. 2025-26ನೇ ಸಾಲಿನಲ್ಲಿ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕೋವಿಡ್ ಕಾರಣವನ್ನು ಮುಂದಿಟ್ಟುಕೊಂಡು ನೇಮಕಾತಿಗಳ ಮೇಲೆ ನಿರ್ಬಂಧ ವಿಧಿಸಿತ್ತು.

ಹಾಗೆಯೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳ ಭರ್ತಿ ಮಾಡುವುದಾಗಿ ಯುವಜನತೆಗೆ ಭರವಸೆ ನೀಡಿತ್ತು. ಆದರೆ ತಮ್ಮ ಪಕ್ಷವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಂಡಿದೆ. ಆದರೂ ಕೂಡ ಒಳ ಮೀಸಲಾತಿಯ ನೆಪ ನೀಡುತ್ತಾ, ನೇಮಕಾತಿಗಳನ್ನು ಮಾಡದೆ ಸಮಯ ತಳ್ಳುತ್ತಿದೆ. ಇದರಿಂದ ಯುವಜನತೆ ತೀವ್ರವಾದ ನಿರಾಶೆಗೆ ಒಳಗಾಗಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳುಗಳ ಹಿಂದೆ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ನಿರಂತರವಾದ ಹೋರಾಟ ನಡೆಸಿದ ನಂತರ ತಮ್ಮ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಸ್ವತಃ ತಾವೇ ಹಂತ ಹಂತವಾಗಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹಾಗೂ 24,300 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದೀರಿ.  

ಆದರೆ ಅಧಿವೇಶನ ಮುಗಿದು ಹಲವು ದಿನ ಕಳೆದರೂ ಸಹ ಅಧಿಸೂಚನೆ ಹೊರಡಿಸುವ ಭರವಸೆ ಕಾಣದಂತಾಗಿದೆ. ಉದ್ಯೋಗಾಕಾಂಕ್ಷಿಗಳ ಒತ್ತಡದಿಂದಾಗಿ ತಮ್ಮ ಸರ್ಕಾರ ಯುವಜನರಿಗೆ ಆಶಾಕಿರಣವಾಗಿ ಐದು ವರ್ಷಗಳ ವಯೋಮಿತಿ ಸಡಲಿಕೆ ಮಾಡಿದೆ. ಆದರೆ ನೇಮಕಾತಿಗೆ ಅಧಿಸೂಚನೆ ಹೊರಡಿಸದೇ ಇದ್ದರೆ ಅದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.  ಬಹಳ ಕಷ್ಟಪಟ್ಟು ಸಾಲ-ಸೋಲ ಮಾಡಿಕೊಂಡು ತರಬೇತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಯುವಜನತೆ ನೇಮಕಾತಿ ನಡೆಯದೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಎಷ್ಟೋ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2023ರ ಅಂಕಿ ಸಂಖ್ಯೆಯ ಪ್ರಕಾರ ದೇಶದಲ್ಲಿ 10,786 ರೈತರು ಆತ್ಮಹತ್ಯೆಗೆ ಶರಣಾದರೆ ಅದೇ ವರ್ಷದಲ್ಲಿ 14,234 ನಿರುದ್ಯೋಗಿ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.  

ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಅತಿ ಶೀಘ್ರವಾಗಿ ನೇಮಕಾತಿ ಮಾಡುವುದಾಗಿ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳ ಸಚಿವರ ಹೇಳಿಕೆಗಳು ವರದಿಯಾಗುತ್ತಿವೆ. ಆದರೆ ಅತಿ ಶೀಘ್ರ ಎಂಬ ಪದಕ್ಕೆ ಅರ್ಥವನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 58 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ವಿಶೇಷ ಶಿಕ್ಷಕರಾದ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರನ್ನು ಕೇಳುವುದೇ ಬೇಡವೆನ್ನುವಂತಾಗಿದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇದರ ನಡುವೆಯೇ ರಾಜ್ಯ ಸರ್ಕಾರವು ಜಾರಿಗೊಳಿಸಿದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಿ ಹಳ್ಳಿಗಳ ಶಾಲೆಗಳನ್ನು ವೀಲೀನಗೊಳಿಸುವ ಪ್ರಕ್ರಿಯೆಯೂ ಕೂಡ ಮತ್ತಷ್ಟು ಶಿಕ್ಷಕರ ಹುದ್ದೆಗಳನ್ನು ನಾಶ ಮಾಡುತ್ತದೆ.

ಒಂದು ಕಡೆ ಹಳ್ಳಿಗಳ ಬಡ ಹಿಂದುಳಿದ ರೈತ, ಕೃಷಿ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ಹಕ್ಕನ್ನು ನಾಶ ಮಾಡಿದರೆ, ಇನ್ನೊಂದೆಡೆ ಹುದ್ದೆಗಳನ್ನು ನಾಶ ಮಾಡಿದಂತಾಗುತ್ತದೆ. ಆದ್ದರಿಂದ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೀತಿಯನ್ನು ಕೈಬಿಟ್ಟು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು.  ಅಲ್ಪ ಸ್ವಲ್ಪ ನಡೆಯುವ ನೇಮಕಾತಿಗೆ ದುಬಾರಿಯಾದ ಅರ್ಜಿ ಶುಲ್ಕಗಳನ್ನು ನಿಗದಿ ಮಾಡಲಾಗುತ್ತಿದೆ. ಒಬ್ಬ ಅಭ್ಯರ್ಥಿಯು ನಾಲ್ಕು-ಐದು ಇಲಾಖೆಗಳ ನೇಮಕಾತಿಗೆ ಅರ್ಜಿ ಹಾಕಿದರೆ, ನಾಲ್ಕು-ಐದು ಸಾವಿರ ಅರ್ಜಿ ಶುಲ್ಕವನ್ನು ತೆರಬೇಕಾಗಿದೆ. ಈಗಾಗಲೇ ನಿರುದ್ಯೋಗದಿಂದ ಜರ್ಝರಿತರಾದ ಯುವಜನತೆ ಈ ರೀತಿ ಅರ್ಜಿ ಶುಲ್ಕವನ್ನು ಭರಿಸಲು ಹೆಣಗಾಡಬೇಕಾಗಿದೆ. ಇನ್ನೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು, ಸಂದರ್ಶನಕ್ಕೆ ಒಂದು ಊರಿಂದ ಇನ್ನೊಂದು ಊರಿಗೆ ತೆರಳಲು ಕೂಡ ಸಾವಿರಾರು ರೂಪಾಯಿಗಳ ಹಣವನ್ನು ವ್ಯಯಿಸಬೇಕಾಗಿದೆ.

ಈಗಾಗಲೇ ಸಂಕಷ್ಟದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತೆ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಅರ್ಜಿ ಶುಲ್ಕ ನಿಗದಿ ಮಾಡುವುದು ನ್ಯಾಯವಾದ ಕ್ರಮವಾಗುವುದಿಲ್ಲ. ಆದ್ದರಿಂದ ಅರ್ಜಿ ಶುಲ್ಕಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕು ಹಾಗೂ ಪರೀಕ್ಷೆ ಮತ್ತು ಸಂದರ್ಶನಗಳಿಗೆ ತೆರಳಲು ಅಭ್ಯರ್ಥಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಈಗಾಗಲೇ ಮಹಿಳೆಯರಿಗೆ ಶಕ್ತಿ ಯೋಜನೆ ಇರುವುದರಿಂದ, ಇನ್ನರ್ಧ ಇರುವ ಪುರುಷ ಅಭ್ಯರ್ಥಿಗಳಿಗೆ ಯೋಜನೆ ಜಾರಿಗೊಳಿಸಲು ತಮ್ಮ ಸರ್ಕಾರಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆ ಆಗುವುದಿಲ್ಲ. ತಾವೇ ಅಧಿವೇಶನದಲ್ಲಿ ಹೇಳಿದಂತೆ ಆರ್ಥಿಕ ಅನುಮೋದನೆ ನೀಡಲಾಗಿರುವ 24,300 ಹುದ್ದೆಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಈ ಮೂಲಕ ತಮ್ಮನ್ನು ವಿನಯ ಪೂರ್ವಕವಾಗಿ ಆಗ್ರಹಿಸುತ್ತದೆ. 

ಹಕ್ಕೊತ್ತಾಯಗಳು:1. ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 2,84,881 ಹುದ್ದೆಗಳ ಭರ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು.2. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಮತ್ತು ಎಲ್ಲಾ ತೆರನಾದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು.3. ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು ಹಾಗೂ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.4. ಉದ್ಯೋಗಾವಕಾಶ ದೊರೆಯುವವರೆಗೆ ಗೌರವಯುತ ಜೀವನ ನಡೆಸಲು ಸೂಕ್ತವಾದ ನಿರುದ್ಯೋಗ ಭತ್ಯೆ ನೀಡಬೇಕು.5. ಕೆಪಿಎಸ್ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋಟಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು.6. ಬಡಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಹಾಗೂ ಶಿಕ್ಷಕ ಹುದ್ದೆಗಳನ್ನು ನಾಶಗೊಳಿಸುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೀತಿಯನ್ನು ಕೈಬಿಟ್ಟು, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಮನವಿ ಪತ್ರ ಸಲ್ಲಿಸುವ ವೇಳೆ ಂಋಙಓ ನ  ಸದಸ್ಯೆರಾದ ಸುಭಾನ್ ನೀರಲಗಿ, ಶಿವು ಗಾಂಧಿನಗರ, ಶರಣಬಸವ ಪಾಟೀಲ್ ಇದ್ದರು