ಗರ್ಭಿಣಿ ಕೊಲೆ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಮನವಿ

ಗರ್ಭಿಣಿ ಕೊಲೆ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಮನವಿ Appeal for severe punishment for pregnant murder accused

ಕೊಪ್ಪಳ 29: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವಿರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಎಂಬ ಗರ್ಭಿಣಿ ಕೊಲೆ ಆರೋಪಿಗಳಿಗೆ ಉಗ್ರವಾದ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮೂಲಕ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಜನಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.  ಮನವಿಯಲ್ಲಿ 22-12-2025ರಂದು ಹುಬ್ಬಳ್ಳಿ ತಾಲೂಕಿನ ಇನಾಂ ವಿರಾಪುರ ಗ್ರಾಮದಲ್ಲಿ ಏಳು ತಿಂಗಳ ಗರ್ಭಿಣಿ ಮಾನ್ಯ ಇವರನ್ನು ಅವರ ತಂದೆ ಪ್ರಕಾಶ ಗೌಡ ಪಾಟೀಲ್ ಹಾಗೂ ಅವರ ಕುಟುಂಬದ ಸದಸ್ಯರಾದ ವೀರನಗೌಡ ಪಾಟೀಲ್ ಸೇರಿ ಇತರರು ಅಮಾಯಕ ಮಹಿಳೆಗೆ ಮಾರಾಕಾಸ್ತ್ರಗಳಿಂದ ಕೊಲೆಗೈದಿದ್ದಾರೆ. ಕೊಲೆ ಮಾಡಿದ ಆರೋಪಿಗಳಿಗೆ ಉಗ್ರವಾದ ಶಿಕ್ಷೆಗೆ ಒಳಪಡಿಸಬೇಕು.  

ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಈ ಮೂಲಕ ತಮಗೆ ಒತ್ತಾಯ ಪಡಿಸುವುದೇನೆಂದರೆ, ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಹೆಸರಿನ ಯುವತಿಯು ಅದೇ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿದ ಯುವಕ ವಿವೇಕಾನಂದ ಇತನನ್ನು ಪ್ರೀತಿಸಿದ್ದಳು. 2025 ಮೇ ತಿಂಗಳಲ್ಲಿ ಇವರು ಮದುವೆಯಾಗಿದ್ದರು. ಮದುವೆ ನಂತರ ಇವರು ಪ್ರಾಣ ಭಯದಿಂದ ಹಾವೇರಿಯಲ್ಲಿ  ಜೀವನವನ್ನು ನಡೆಸುತಿದ್ದರು. ಸ್ವಲ್ಪ ದಿನಗಳಾದ ನಂತರ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಬಂದು ಕುಟುಂಬ ಸಮೇತವಾಗಿ ವಾಸವಾಗಿರುತ್ತಾರೆ. ಮಾನ್ಯ ಎಂಬ ಯುವತಿಯು ಏಳು ತಿಂಗಳ ಗರ್ಭಿಣಿಯಾಗಿರುತ್ತಾಳೆ. ಸದರಿ ಮಾನ್ಯಳು ಆರೋಗ್ಯ ತಪಾಸಣೆಗೆಂದು ಹುಬ್ಬಳ್ಳಿಯ ಆಸ್ಪತ್ರೆಗೆ ಹೋಗಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಾನು ವಾಸವಾಗಿರುವ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಹಿಂತುರುಗಿರುತ್ತಾಳೆ.

ಈ ವಿಷಯವನ್ನು ತಿಳಿದ ಮಾನ್ಯಳ ತಂದೆ ಪ್ರಕಾಶ್‌ಗೌಡ ಪಾಟೀಲ್ ಮನೆಯವರಾದ ಈರನಗೌಡ ಪಾಟೀಲ್‌. ಅರುಣಗೌಡ ಪಾಟೀಲ್ ಇವರುಗಳು ಮಾನ್ಯ ವಾಸವಾಗಿರುವ ಮನೆಗೆ ಏಕಾಏಕಿಯಾಗಿ ನುಗ್ಗಿ, ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಜಾತಿ ನಿಂದನೆ ಮಾಡಿ, ತಾವುಗಳು ತಂದಿರುವ ಕೊಡಲಿ, ಬಡಗಿ, ಮಚ್ಚಿನಿಂದ ಕೊಚ್ಚಿ ಮಾನ್ಯ ಎಂಬ ಯುವತಿಯನ್ನು ಮಾರಾಣಾಂತಿಕವಾಗಿ ಹಲ್ಲೆಗೈದಿರುತ್ತಾರೆ. ಅದೇ ಮನೆಯಲ್ಲಿದ್ದ ಮಾನ್ಯಳ ಪತಿ ವಿವೇಕಾನಂದ ಇತನ ತಂದೆ. ತಾಯಿ ಮತ್ತು ಅವರ ಕುಟುಂಬಸ್ಥರಿಗೆ ಕೊಡಲಿ ಮತ್ತು ಕಟ್ಟಿಗೆಯಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಮಾನ್ಯ ಮೃತಪಟ್ಟಿದ್ದು. ಮಿಕ್ಕವರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತಿದ್ದಾರೆ. ಇಂತಹ ಜಾತಿ ವಾದಿಗಳಿಗೆ ಕಾನೂನಾತ್ಮಕವಾಗಿ ಜೀವಾವಧಿ ಶಿಕ್ಷೆಯನ್ನು ನೀಡಬೇಕು.   

ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಜನಪರ ಸಂಘಟನೆಗಳ ಒಕ್ಕೂಟವು ಧ್ವನಿ ಎತ್ತುವ ಮೂಲಕ "ಮಾನ್ಯ" ಸಿದ್ದರಾಮಯ್ಯನವರೇ ಆ ಕುಟುಂಬದ ಕೂಗು ನಿಮ್ಮ ರಾಜ್ಯ ಸಕಾರಕ್ಕೆ ಕೇಳುತ್ತೀಲ್ಲವೇ, ನಾವು ದಲಿತರ ಪರ, ಹಿಂದೂ ಪರವೆಂದು ಖಾಲಿ ಭಾಷಣ ಮಾಡುವುದಲ್ಲ,ಆ ದಲಿತ ಕುಟುಂಬದ ಕಣ್ಣಿರೂ ರಾಜ್ಯದ ತುಂಬಾ ಹರಡಿದೆ.”ಮಾನ್ಯ ಜಿಲ್ಲಾಧಿಕಾರಿಗಳೇ,ಈ ನಮ್ಮ ಪ್ರತಿಭಟನಾ ಕೂಗನ್ನು ಮಾನ್ಯ ಸಿದ್ದರಾಮಯ್ಯ ಅವರಿಗೆ ಮುಟ್ಟಿಸಿ ಮುಗ್ಧ ಜೀವವನ್ನು ಹತ್ಯೆಗೈದ  ಜಾತಿವಾದಿಗಳಿಗೆ ಜೀವಾವದಿ ಶಿಕ್ಷೆ ವಿಧಿಸಬೇಕು. ಸದರಿ ಘಟನೆಗೆ ಮರ್ಯಾದಾ ಹತ್ಯೆ ಎಂಬ ಜಾತಿ ಭಯೋತ್ಪಾದನೆಗೆ ಬಲಿಯಾದ ಮಾನ್ಯಳ ಹೆಸರಿನಲ್ಲಿ ಉಗ್ರ ಶಿಕ್ಷೆಯ ಕಾನೂನು ರೂಪಿಸಬೇಕಾಗಿ ವಿನಂತಿ.      

ಸದರಿ ಪ್ರಕರಣಕ್ಕೆ ಸಂಬಂಧಿಸಿದ 34 ಜನರ ಪೈಕಿ 06 ಜನರನ್ನು ಮಾತ್ರ ಬಂಧಿಸಿರುತ್ತಾರೆ. ಇನ್ನೂಳಿದ 28 ಜನ ಕೊಲೆಗಾರರನ್ನು-ಜಾತಿವಾದಿಗಳನ್ನು ಬೇಗನೆ ಬಂಧಿಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆ ಕುಟುಂಬದ ಕಣ್ಣಿರಿಗೆ ನ್ಯಾಯ ಸಿಗಲಿ ಮತ್ತು ನೊಂದ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ರೂ.20,00,000/-(ಅಕ್ಷರಗಳಲ್ಲಿ: ಇಪ್ಪತ್ತು ಲಕ್ಷ ರೂಪಾಯಿಗಳು)ಗಳ ಸಹಾಯ ಧನವಾಗಿ ನೀಡಿ ಮತ್ತು ಆ ದಲಿತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಮತ್ತು ರಕ್ಷಣೆ ಕೊಡಿ ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಳ್ಳದಿದ್ದರೇ,

ಹಾಗೂ ಆ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದರೇ, ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್‌. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ.ಗಫಾರ್‌. ಕಾರಟಗಿ ತಾಲೂಕಿನ ಗುಂಡೂರಿನ ಯುವ ಮುಖಂಡ ಹನುಮೇಶ್ ಗುಂಡೂರು.ವಕೀಲರು. ವಸಂತ್ ದೊಡ್ಡಮನಿ ವಕೀಲರು.ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು ಮುಂತಾದವರು ತಿಳಿಸಿದರು.