ಕಾರ್ಖಾನೆ ವಿರೋಧಿ ಧರಣಿ 39ನೇ ದಿನ ಕಾರ್ಖಾನೆಗಳ ಮಣ್ಣು ತಿನ್ನುತ್ತಿದ್ದೇವೆ: ಬಾಧಿತ ಹಾಲವರ್ತಿ ಗ್ರಾಮಸ್ಥರು

ಕಾರ್ಖಾನೆ ವಿರೋಧಿ ಧರಣಿ 39ನೇ ದಿನ ಕಾರ್ಖಾನೆಗಳ ಮಣ್ಣು ತಿನ್ನುತ್ತಿದ್ದೇವೆ: ಬಾಧಿತ ಹಾಲವರ್ತಿ ಗ್ರಾಮಸ್ಥರು Anti-factory sit-in enters 39th day, eating factory soil: Affected Halavarthi villagers


         ಕೊಪ್ಪಳ 08:  ಈಗಿರುವ ಬಲ್ದೋಟಾ ಎಂ.ಎಸ್‌.ಪಿ.ಎಲ್‌. ಘಟಕ ನಮ್ಮ ಗ್ರಾಮದ ಪಕ್ಕದಲ್ಲಿದ್ದು, ಶಾಲೆಗೂ ಸೇರಿ ಮನೆಗಳಲ್ಲಿ ದೊಡ್ಡ ಪ್ರಮಾಣದ ದೂಳು ಬಂದುಬೀಳುತ್ತದೆ. ಈ ದೂಳು ತಿಂದ ಮನುಷ್ಯರು, ದನ ಕರುಗಳು ರೋಗಪೀಡಿತರಾಗಿ ಸಾಯುತ್ತಿದ್ದೇವೆ. ಕೆರೆಯ ನೀರು ಸಹಿತ ಕುಡಿಯಲು ಆಗುತ್ತಿಲ್ಲ ಎಂದು ಹಾಲವರ್ತಿ ಗ್ರಾಮದ ಬಾಧಿತ ಮಹಿಳೆಯರು ಅಳಲು ತೋಡಿಕೊಂಡರು. 

ಅವರು ಕೊಪ್ಪಳ ನಗರಸಭೆ ಮುಂದೆ ಬಲ್ದೋಟ ಬಿಎಸ್ಪಿಎಲ್ ಕಲ್ಯಾಣಿ ಸ್ಟೀಲ್ ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಬಸಾಪುರ ಕೆರೆ ಸಾರ್ವಜನಿಕರಿಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವಂದೋಲನ ಸಮಿತಿ ಹಾಗೂ ಪರಿಸರ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಇಲ್ಲಿನ ರೋಗರುಜಿನ ಕ್ಯಾನ್ಸರ್ ವರೆಗೂ ಹೋಗಿದೆ. ನಾವು ಇಲ್ಲಿ ಬದುಕಲಂತೂ ಆಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗ ನಮ್ಮ ಮಕ್ಕಳು ಹೇಗೆ ಬದುಕಬೇಕು? ಅವರ ಭವಿಷ್ಯ ಏನಾಗುತ್ತದೊ ಎಂದು ಭಯವಾಗುತ್ತಿದೆ. ಎಂ.ಎಸ್‌.ಪಿ.ಎಲ್‌. ಕಾರ್ಖಾನೆಇಲ್ಲಿಂದ ತೊಲಗಬೇಕು. ಆಗ ಮಾತ್ರ ನಾವು ನಮ್ಮೂರಿನಲ್ಲಿ ಇರಲು ಸಾಧ್ಯವಾಗುತ್ತದೆ ಎಂದು ಗ್ರಾಮದ ಶಾರದಮ್ಮ ಹೊಸಮನಿ, ನಿಂಗಮ್ಮ 39ನೇ ದಿನದಿಂದ ನಡೆದಿರುವ ಧರಣಿಗೆ ಬೆಂಬಲಿಸಿ ಗೋಳು ತೋಡಿಕೊಂಡರು. ಬಾಧಿತ ಗ್ರಾಮದ ಮಹಿಳೆಯರು ಮತ್ತು ಯುವಕರು ಬಂದು ಬೆಂಬಲಿಸಿದರು. 

ಕ.ರ.ವೇ. ಕನ್ನಡ ಸೇನೆ ರಾಜ್ಯ ಕಾರ್ಯಾಧ್ಯಕ್ಷರಾ ಉಮೇಶಗೌಡ ಅರಳಹಳ್ಳಿ ಬೆಂಬಲ ಸೂಚಿಸಿ ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ಬಾಧನೆ ಉಂಟು ಮಾಡಿರುವ ಈ ಕಾರ್ಖಾನೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಗಂಗಾವತಿ, ಸಿಂಧನೂರು, ರಾಯಚೂರು ಮತ್ತು ಬಲಭಾಗದಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜನರಿಗೆ ಕಾರ್ಖಾನೆಗಳ ಕಾರಣಕ್ಕೆ ಒಂದು ಬೆಳೆಗೆ ನೀರು ಸಿಗುವಂತೆ ಆಗಿದೆ. ಈ ಕಾರ್ಖಾನೆಗಳನ್ನು ಬಂದ್ ಮಾಡುವವರೆಗೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.  

ಧರಣಿಯಲ್ಲಿ ಕ.ರ.ವೇ. ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಬಿಟಿ ಮಂಜುನಾಥ, ಅಮರೇಶ್ ಹೇರೂರು, ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಖಾಜಾಸಾಬ್, ರಫಿ ಕುನ್ನಟಗಿ, ಈರ​‍್ಪ ಹೊಸಮನಿ, ಮಂಜಪ್ಪ ನಡಲಮನಿ, ಬಸವರಾಜ ಹಾಲವರ್ತಿ, ಗವಿಸಿದ್ದಪ್ಪ ಹಲಿಗಿ, ಡಿ.ಎಚ್‌. ಪೂಜಾರ, ಎಲ್ಲಮ್ಮ, ಹುಲಿಗೆಮ್ಮ, ಗುಂಡಮ್ಮ, ಗಾಳಮ್ಮ, ಜಗದೀಶ ಎಸ್ ವಿ ರಾಜೂರ ಚೆಂಬುಲಿಂಗಪ್ಪ ಹಲಗೇರಿ, ಎ.ಎಂ. ಮದರಿ, ಜಂಬಣ್ಣ, ಎಸ್ ಮಹದೇವಪ್ಪ, ಮಹಾದೇವಪ್ಪ ಸೋಂಪುರ, ಗಾಳೆಪ್ಪ ಮುಂಗೋಲಿ, ಬಿ.ಸಿ. ಕರಿಗಾರ್, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ ಇದ್ದರು.