ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಶ್ರಮಿಸಬೇಕು

ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ  ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಶ್ರಮಿಸಬೇಕು Anti-Corruption Awareness Week: Everyone should work towards eradicating corruption

 

ಹಾವೇರಿ 03:  ಭ್ರಷ್ಟಾಚಾರ ಸಮಾಜಕ್ಕೆ ಅಂಟಿಕೊಂಡ ದೊಡ್ಡ ಕಳಂಕ,  ಭ್ರಷ್ಟಾಚಾರ ನಿರ್ಮೂಲನೆಗೆ  ಎಲ್ಲರೂ ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ದೇವೆಂದ್ರ​‍್ಪ ಎನ್‌.ಬಿರಾದಾರ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಾವೇರಿ ಕರ್ನಾಟಕ ಲೋಕಾಯುಕ್ತ ಘಟಕದ ಸಹಯೋಗದಲ್ಲಿ ಜರುಗಿದ “ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.  

ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸಮಾಡಿ: ಭ್ರಷ್ಟಾಚಾರ ಎಲ್ಲಿ, ಯಾವಾಗ, ಹೇಗೆ ಆರಂಭವಾಯಿತು? ಇದರ ನಿರ್ಮೂಲನೆ ಸಾಧ್ಯವೇ” ಇದರಲ್ಲಿ ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಏನು? ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದು ಜನನ ಪ್ರಮಾಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರ ಪಡೆಯುವರೆಗೂ ಭ್ರಷ್ಟಾಚಾರ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬೇರೆಯವರೊಂದಿಗೆ ಹೊಲಿಕೆ,  ಬೇಗ ಶ್ರೀಮಂತನಾಗುವ ವ್ಯಾಮೋಹ ಹೀಗೆ ಹಲವಾರು ಆಸೆಗಳಿಂದ  ಭ್ರಷ್ಟಾಚಾರ ಮನೋಭಾವ ಉಂಟಾಗುತ್ತದೆ. ಹಾಗಾಗಿ  ಮೊದಲು ಬೇರೆಯವರೊಂದಿಗೆ ಹೊಲಿಕೆ ಮಾಡಿಕೊಳ್ಳುವುದು ಬಿಡಬೇಕು. ಇರುವುದರಲ್ಲಿ ನೆಮ್ಮದಿಯ ಜೀವನ ಮಾಡಬೇಕು.  ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಸಾರ್ವಜನಿಕ ಸೇವೆ ಮಾಡಬೇಕು.  ನಿಮ್ಮ ಪ್ರಾಮಾಣಿಕತೆ ನೋಡಿ ಬೇರೆಯವರಿಗೆ ನಾಚಿಕೆಯಾಗುವಂತೆ ಕೆಲಸಮಾಡಬೇಕು ಎಂದು ಹೇಳಿದರು.  

ದೇಶದ ಆರ್ಥಿಕತೆ ಹಿನ್ನಡೆ: ಭ್ರಷ್ಟಾಷಚಾರದಿಂದ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ. ಭ್ರಷ್ಟಚಾರ ಎಂದರೆ ಕೇವಲ ಹಣ ಪಡೆಯುವುದು ಮಾತ್ರ ಅಲ್ಲ,   ವಸ್ತುಗಳ ಬೇಡಿಕೆ, ಇತರೆ ಕೆಲಗಳಿಗೆ ವಸೂಲಿ,  ತಮ್ಮ ಕೆಲಸಕ್ಕೆ ಬೇಡಿಕೆ ಹೀಗೆ ಹಲವಾರು ಕ್ರಮಗಳನ್ನು ಅನುಸಿರುವುದು ಸಹ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರದಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ.  ಭ್ರಷ್ಟಚಾರ ತಡೆಗೆ ಸಾರ್ವಜನಿಕರೂ ಸಹ ಕೈಜೋಡಿಸಬೇಕು.  ಈ ಹಿನ್ನಲೆಯಲ್ಲಿ ಭ್ರಷ್ಟಚಾರ ತಡೆಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಎಂದು ಹೇಳಿದರು. ನ್ಯಾಯಾಲಯ, ಲೋಕಾಯುಕ್ತ ಪೊಲೀಸ್ ಹಾಗೂ ಪೊಲೀಸ್ ಇಲಾಖೆ  ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕೈಮಕೈಗೊಂಡಾಗ ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ  ಭಯ ಹುಟ್ಟಲು ಸಾಧ್ಯ ಎಂದು ಹೇಳಿದರು.   

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ,  ಭ್ರಷ್ಟಾಚಾರ ಕ್ಯಾನ್ಸರ್‌ನಂತೆ ಹರಡುತ್ತಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಸಾಕಷ್ಟು ಸದ್ದು ಮಾಡಿವೆ.  ಜಿಲ್ಲೆಯಲ್ಲಿ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸ್‌ರ ಕೈಗೆ ಸಿಕ್ಕುಬಿದ್ದಿದ್ದಾರೆ. ಉದಾಹರಣೆಗೆ ಹಾನಗಲ್ ತಾಲೂಕಿನಲ್ಲಿ ಆರ್‌.ಟಿ.ಸಿ. ಸರಿಮಾಡಲು ಲಂಚದ ಬೇಡಿಕೆ ಇಟ್ಟು  ಕಂದಾಯ ಇಲಾಖೆ ನೌಕರರು ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ತಾವೇ ತಪ್ಪುಮಾಡಿ, ಸರಿ ಮಾಡಲು ಹಣದ ಬೇಡಿಕೆ ಇಟ್ಟಿರುವುದು ವಿಷಾದಕರ ಸಂಗತಿಯಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ, ಕೆಲಸ ವಿಳಂಬಮಾಡುವುದು ಕಂಡುಬರುತ್ತಿದೆ.  ಅಧಿಕಾರಿ ಸಿಬ್ಬಂದಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸಾರ್ವಜನಿಕರಿಗೆ ಸರ್ಕಾರಿ ಸೇವೆಯನ್ನು ಕಾಲಮಿತಿಯೊಳಗೆ ಒದಗಿಸಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಎಂದು ಕರೆ ನೀಡಿದರು.  

ವಾಯು ಮಾಲಿನ್ಯದಂತೆ ಭ್ರಷ್ಟಾಚಾರದ ಮಧ್ಯ ನಾವು  ಬದುಕು ಸಾಗಿಸುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ಜಗತ್ತಿನ 186 ದೇಶಗಳ ಪೈಕಿ ಭಾರತ 56ನೇ ಸ್ಥಾನದಲ್ಲಿದೆ.   ಬೇರೆ ದೇಶಗಳ ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣದಲ್ಲಿ  ಪ್ಯಾರಿಸ್‌ನಂತ ರಸ್ತೆ  ಹಾಗೂ ಆಕ್ಸ್‌ಫರ್ಡ್‌ ಯುನಿವರ್‌ಸಿಟಿ ಸ್ಥಾಪಿಸಬಹುದು. ಭ್ರಷ್ಟಾಚಾರ ತಡೆಗೆ  ಲೋಕಾಯುಕ್ತ, ಎಸಿಬಿ  ಜಾರಿಗೆ ತರಲಾಗಿದ್ದು, ಭ್ರಷ್ಟಾಚಾರ  ತಡೆಯುವ ಕಾರ್ಯದಲ್ಲಿ  ಲೋಕಾಯುಕ್ತ ಗೌರವಕ್ಕೆಪಾತ್ರವಾದ ಸಂಸ್ಥೆಯಾಗಿದೆ.  ಒಂದು ಕಾಲದಲ್ಲಿ ವೆಂಕಟಾಚಲ ಅವರು ಮನೆ ಮನೆಗೆ ತೆರಳಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಿದರು. ಸಂತೋಷ ಹೆಗಡೆ ಅವರು  ಮೈನಿಂಗ್ ಭ್ರಷ್ಟಾಚಾರ ತಡೆಗೆ ಕ್ರಮವಹಿಸಿದರು.  ಭ್ರಷ್ಟಾಚಾರ ನಿರ್ಮೂಲನೆಮಾಡಿದಾಗ ಮಾತ್ರ “ವಿಕಸಿತ್ ಭಾರತ” ಸಾಧ್ಯ.  ಜಗತ್ತಿನಲ್ಲಿ ಬದಲಾವಣೆ ಬಯಸುತ್ತೇವೆ. ಆ ಬದಲಾವಣೆ ನಮ್ಮಿಂದ ಆರಂಭವಾಗಬೇಕು ಎಂದರು. 

ನಮ್ಮೆಲ್ಲರಿಗೂ ಜವಾಬ್ದಾರಿ ಇದೆ.  ಮನುಷ್ಯನ ಮನಪರಿವರ್ತನೆಯಾಗಬೇಕು.  ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸುವಲ್ಲಿ ಎಲ್ಲರೂ  ಭ್ರಷ್ಟಾಚಾರ ರಹಿತರಾಗಿ ಕೆಲಸಮಾಡಬೇಕು ಎಂದು ಸಲಹೆ ನೀಡಿದರು.  ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್‌.ಕೌಲಾಪುರೆ ಪ್ರತಿಜ್ಞಾವಿಧಿ ಬೋಧಿಸಿದರು. ಹಾವೇರಿ ಪೊಲೀಸ್ ಉಪ ಅಧೀಕ್ಷಕ ಮಧುಸೂದನ ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶ್ರೀಶೈಲಜಾ ಎಚ್‌.ಎ. ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ಪುನಿತ್  ಉಪಸ್ಥಿತರಿದ್ದರು.   ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್‌.  ಅವರು ಸ್ವಾಗತಿಸಿದರು. ಪಂಚಾಯತ್ ರಾಜ್‌ನ ಸಹಾಯಕ ನಿರ್ದೇಶಕ ನಾಗರಾಜ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.  ಹಾವೇರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ನೀರೀಕ್ಷಕ ವಿಶ್ವನಾಥ ಕಬ್ಬೂರಿ ವಂದಿಸಿದರು.