ಗುರುಮೂರ್ತಿ ಯರಗಂಬಳಿಮಠ
ಧಾರವಾಡ :*ದೂರದೂರಿನ ಎಲ್ಲ ವೇಗದೂತ ಬಸ್ಗಳಿಗೆ ಅಮ್ಮಿನಬಾವಿ ಗ್ರಾಮದಲ್ಲಿ ನಿಲುಗಡೆಗೆ ಆಗ್ರಹ ಧಾರವಾಡ 14: ನಗರದಿಂದ ಕೇವಲ 11 ಕಿ.ಮೀ. ದೂರದಲ್ಲಿರುವ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಸ್ ಸಂಚಾರ ವ್ಯವಸ್ಥೆ ಸುಧಾರಿಸದೇ ನಿತ್ಯವೂ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದು, ಧಾರವಾಡದ ಉಪನಗರ ಬಸ್ ನಿಲ್ದಾಣದಲ್ಲಿ ಸಂಜೆಯ ಹೊತ್ತಿನಲ್ಲಿ ಮೇಲಿಂದ ಮೇಲೆ ದಿಢೀರ್ ಮುಷ್ಕರಕ್ಕಿಳಿದು ಪ್ರತಿಭಟನೆ ಮಾಡಿ ಅಮ್ಮಿನಬಾವಿಗೆ ಬಸ್ ಬಿಡಿಸಿಕೊಂಡು ಹೋಗುವುದು ಈಗ ಸಾಮಾನ್ಯವಾಗಿಬಿಟ್ಟಿದೆ.
ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಡೀಪೋಕ್ಕೆ ಆಗಮಿಸುವ ವ್ಯವಸ್ಥಾಪಕರು ಹಾಗೂ ಇತರೇ ಸಾರಿಗೆ ಅಧಿಕಾರಿಗಳು ಕೈಕೊಳ್ಳುವ ವಿಚಿತ್ರ ನಿಧರ್ಾರಗಳಿಂದಾಗಿ ಅಮ್ಮಿನಬಾವಿ ಬಸ್ ಸಂಚಾರ ಸಮಸ್ಯೆ ಬಗೆಹರಿಯದೇ ದಿನದಿಂದ ದಿನಕ್ಕೆ ಕಗ್ಗಂಟಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ.
ಧಾರವಾಡದ ಹಳೆಯ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಅಲ್ಲಿ ಹೊಸ ಬಸ್ ನಿಲ್ದಾಣವನ್ನು ನಿಮರ್ಿಸುತ್ತಿದ್ದಾಗಂತೂ ಧಾರವಾಡ ಶಿವಾಜಿ ವೃತ್ತಕ್ಕೆ ಅಮ್ಮಿನಬಾವಿ ಬಸ್ ನಿಲ್ದಾಣವು ಸ್ಥ್ತಳಾಂತರಗೊಂಡ ಸಂದರ್ಭದಲ್ಲಿಯೂ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸಿದ್ದಾರೆ. ಈಗ ಹೊಸ ಬಸ್ ನಿಲ್ದಾಣ ಕಾಯರ್ಾರಂಭ ಮಾಡಿದ ಮೇಲೆ ಅಮ್ಮಿನಬಾವಿ ಬಸ್ ಸಂಚಾರ ವ್ಯವಸ್ಥೆ ಇನ್ನೂ ಹದಗೆಟ್ಟು ಹೋಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ನಿಲುಗಡೆಗೆ ಆದೇಶವಾಗಿಲ್ಲ : ಬಹಳ ಹಿಂದಿನಿಂದಲೂ ಧಾರವಾಡ ಡೀಪೋ ಮುಖ್ಯಸ್ಥರು ಅಮ್ಮಿನಬಾವಿಯ ಬಸ್ ಸಂಚಾರ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ರಸ್ತೆಗಿಳಿಸಿದು ಪ್ರತಿಭಟಿಸಿದಾಗ ಕೊಟ್ಟ ಭರವಸೆಗಳನ್ನು ಸರಿಯಾಗಿ ಈಡೇರಿಸಿಲ್ಲ. 'ಹುಬ್ಬಳ್ಳಿ-ಧಾರವಾಡದಿಂದ ಸವದತ್ತಿ, ರಾಮದುರ್ಗ, ವಿಜಯಪೂರ, ಕೊಲ್ಲಾಪೂರ, ಬಾಗಲಕೋಟ ಮುಂತಾದ ದೂರದೂರಿನ ವೇಗದೂತ ಬಸ್ಗಳಿಗೆ ಅಮ್ಮಿನಬಾವಿಯಲ್ಲಿ ನಿಲುಗಡೆ ಕಲ್ಪಿಸಲಾಗುವುದು' ಎಂಬ ಹಳೆಯ ಭರವಸೆ ಇಂದಿಗೂ ಈಡೇರಿಲ್ಲ. ರಾತ್ರಿ 10 ಗಂಟೆಯ ನಂತರ ಧಾರವಾಡದಿಂದ ಅಮ್ಮಿನಬಾವಿಗೆ ಬರುವಲ್ಲಿ ಸಾರ್ವಜನಿಕರು ವ್ಯಾಪಕ ತೊಂದರೆ ಅನುಭವಿಸುತ್ತಿದ್ದು, ದೂರದೂರಿನ ಎಲ್ಲ ವೇಗದೂತ ಬಸ್ಗಳಿಗೂ ಅಮ್ಮಿನಬಾವಿ ಗ್ರಾಮದಲ್ಲಿ ನಿಲುಗಡೆ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರನೇಕರು ಅಭಿಪ್ರಾಯ ಪಡುತ್ತಾರೆ.
ಈ ಹಿಂದೆ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಅಮ್ಮಿನಬಾವಿ ಬಸ್ ನಿಲ್ದಾಣದಲ್ಲಿ ಎಲ್ಲ ವೇಗದೂತ ಬಸ್ಗಳನ್ನು ನಿಲುಗಡೆ ಮಾಡುವ ಬಗ್ಗೆ ನಿಲುಗಡೆಯ ಸೂಚನಾ ಫಲಕವನ್ನೂ ಸಹ ಹಾಕಲಾಗಿತ್ತು. ಆದರೆ ಇದಕ್ಕೆ ಕ್ಯಾರೇ ಎನ್ನದಂತೆ ಬಸ್ ನಿವರ್ಾಹಕರು ಹಾಗೂ ಚಾಲಕರು ವೇಗದೂತ ಬಸ್ಗಳನ್ನು ಎಂದೂ ನಿಲುಗಡೆ ಮಾಡದೇ ಹಾಗೇ ಓಡಿಸುತ್ತಿರುವುದು ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉನ್ನತಾಧಿಕಾರಿಗಳ ಆದೇಶಗಳಿಗೆ ಕವಡೆಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ.
ಹೆಬ್ಬಳ್ಳಿಗೆ 4 ವಸ್ತಿ ಬಸ್ : ಹತ್ತಿರದಲ್ಲಿರುವ ಹೆಬ್ಬಳ್ಳಿ ಗ್ರಾಮಕ್ಕೆ ನಿತ್ಯವೂ 4 ವಸ್ತಿ ಬಸ್ಗಳು ಧಾರವಾಡ ಡೀಪೋದಿಂದ ಹಾಗೂ ಹುಬ್ಬಳ್ಳಿ ಡೀಪೋದಿಂದ 2 ವಸ್ತಿ ಬಸ್ಗಳ ವ್ಯವಸ್ಥೆ ಇದ್ದು, ಮುಂಜಾನೆ ಹೆಬ್ಬಳ್ಳಿಯಿಂದ ಹುಬ್ಬಳ್ಳಿ-ಧಾರವಾಡಕ್ಕೆ ಸಂಚರಿಸಲು ವ್ಯಾಪಕ ಅನುಕೂಲಗಳಿವೆ. ಹೆಬ್ಬಳ್ಳಿಯಷ್ಟೇ ಸಮನಾದ ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ಗ್ರಾಮವಾದ ಅಮ್ಮಿನಬಾವಿಯ ವಿಷಯದಲ್ಲಿ ಧಾರವಾಡ ಡೀಪೋ ಮ್ಯಾನೇಜರ್ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಗ್ರಾಮದ ಪ್ರಯಾಣಿಕರು ಮತ್ತು ವಿದ್ಯಾಥರ್ಿ ಬಳಗ ತೀವ್ರವಾಗಿ ಖಂಡಿಸಿದ್ದಾರೆ.
ಅಮ್ಮಿನಬಾವಿಗೂ ಹೆಬ್ಬಳ್ಳಿ ಗ್ರಾಮಕ್ಕೆ ಬಿಡುವಂತೆ 4 ವಸ್ತಿ ಬಸ್ಗಳನ್ನು ಬಿಡುವುದು, ಜೊತೆಗೆ ಸಿಂಗಲ್ ಡ್ಯೂಡಿ ಬಸ್ ಸೇರಿದಂತೆ ಯಾವುದೇ ಬಸ್ ಟ್ರಿಪ್ಗಳನ್ನು ಏಕಾಏಕಿ ರದ್ದು ಪಡಿಸದೇ ಸಮಯಕ್ಕೆ ಸರಿಯಾಗಿ ಬಸ್ ಓಡಿಸಿದರೆ ಯಾವುದೇ ತೊಂದರೆಯಾಗುವದಿಲ್ಲ. ಆದರೆ, ಅದೇಕೋ ಏನೋ ಯಾವುದಾದರೂ ಜಾತ್ರೆ, ಸಮ್ಮೇಳನ, ಸಮಾವೇಶ, ಚುನಾವಣೆ ಹಾಗೂ ಪ್ರಾಸಂಗಿಕ ಕರಾರು ಒಪ್ಪಂದದ ಮೇರೆಗೆ ಓಡಿಸುವ ವಿಶೇಷ ಬಸ್ಗಳ ವ್ಯವಸ್ಥೆ ಮಾಡುವಾಗ ಅಮ್ಮಿನಬಾವಿ ಬಸ್ ಸಂಚಾರದ ಟ್ರಿಪ್ಗಳನ್ನು ಏಕಾಏಕಿ ರದ್ದುಪಡಿಸಿ ಅಲ್ಲಿಯ ಬಸ್ಗಳನ್ನೇ ಬೇರೆಡೆಗೆ ಓಡಿಸುವ ಹುನ್ನಾರ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ವ್ಯಾಪಕ ಹಿಂಸೆಯನ್ನು ಅನುಭವಿಸುವಂತಾಗಿದೆ.
ಖಾಸಗಿ ವಾಹನಗಳ ಭರಾಟೆ : ಧಾರವಾಡ-ಅಮ್ಮಿನಬಾವಿ ಮಧ್ಯೆ ಖಾಸಗಿ ಸ್ವಾಮ್ಯದ ಟಂ ಟಂ ಮಿನಿ ವಾಹನಗಳ ಸಂಚಾರದ ಭರಾಟೆ ಹೆಚ್ಚಿದ್ದು, ಇದಕ್ಕೆ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳ ಸಂಚಾರ ಅಸ್ತವ್ಯಸ್ತವಿರುವುದೇ ಪ್ರಮುಖ ಕಾರಣವಾಗಿದೆ. ಜೊತೆಗೆ ಈ ಖಾಸಗಿ ವಾಹನಗಳ ಮಾಲಕರ ಅನುಕೂಲಕ್ಕಾಗಿ ಧಾರವಾಡ ಡೀಪೋ ಮ್ಯಾನೇಜರ್ ಈ ರೀತಿ ನಿರ್ಲಕ್ಷ್ಯ ವಹಿಸಿದ್ದಾರೇನೋ ಎಂಬ ಸಂಶಯ ಜನಸಾಮಾನ್ಯರಲ್ಲಿ ಕಾಡುತ್ತಿದೆ.
ಮುಂಜಾನೆ 7 ಗಂಟೆಯಿಂದ ಸುಮಾರು 11 ಗಂಟೆಯವರೆಗೆ ಶಾಲಾ-ಕಾಲೇಜು ವಿದ್ಯಾಥರ್ಿಗಳು, ಶಿಕ್ಷಕರು, ಇತರೇ ಸರಕಾರಿ ನೌಕರರು, ಕಟ್ಟಡ ಕಾಮರ್ಿಕರು, ಗೌಂಡಿಗಳು, ರೈತ ಕೂಲಿ ಕಾಮರ್ಿಕರು, ಅಂಗಡಿ ಮುಂಗಟ್ಟುಗಳಲ್ಲಿ ದಿನಗೂಲಿ ಮಾಡುವ ಕೆಲಸಗಾರರು, ಖಾಸಗಿ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ನೌಕರರು ತಿಂಗಳ ಬಸ್ ಪಾಸ್ ಪಡೆದು ಸಾರಿಗೆ ನಿಗಮದ ಬಸ್ಗಳನ್ನೇ ಅವಲಂಬಿಸಿದ್ದು, ಈ ಅವಶ್ಯಕ ಅವಧಿಯಲ್ಲಿಯೇ ಬಸ್ ಸಂಚಾರ ಇಲ್ಲವಾದರೆ ಎಂಥವರಿಗೂ ಬೇಸರ ತರಿಸುತ್ತದೆ. ಇದೇ ರೀತಿ ಸಂಜೆ 5.30 ರಿಂದ 8 ಗಂಟೆಯ ಒಳಗೆ ಬಸ್ ಸಂಚಾರ ಕ್ಷೀಣಿಸುತ್ತಿದ್ದು, ಇದರಿಂದ ಪ್ರಯಾಣಿಕರು ಗೋಳು ಅನುಭವಿಸುವಂತಾಗಿದೆ.
ಜನಪ್ರತಿನಿಧಿಗಳ ಅಲಕ್ಷ್ಯ: ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ಈ ಬಸ್ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಸಂಬಂಧಿಸಿದ ಕೆಲವು ಅಧಿಕಾರಿಗಳಿಗೆ ಪತ್ರಬರೆದು ಒತ್ತಾಯಿಸಿದ್ದನ್ನು ಬಿಟ್ಟರೆ ಅಮ್ಮಿನಬಾವಿ ಗ್ರಾಮದ ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗೆ ಆಯ್ಕೆಯಾದ ಯಾವೊಬ್ಬ ಜನಪ್ರತಿನಿಧಿಯೂ ಸಹ ಈ ಬಸ್ ಸಂಚಾರದ ತೊಂದರೆಯ ಬಗೆಗೆ ಕಿಂಚಿತ್ತೂ ತೆಲೆಕೆಡಿಸಿಕೊಳ್ಳದೇ ಈ ವಿಷಯ ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಂತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕ-ಸಂಸದರಿಗೆ ಆಗ್ರಹ : ಧಾರವಾಡ-71 ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಸೇರಿರುವ ಅಮ್ಮಿನಬಾವಿ ಗ್ರಾಮದ ಬಸ್ ಸಂಚಾರದ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸುವ ಮೂಲಕ ವ್ಯವಸ್ಥೆಯ ಸುಧಾರಣೆಗೆ ಶಾಸಕ ಅಮೃತ ದೇಸಾಯಿ, ಸಂಸದರು ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಈ ಕೂಡಲೇ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿದರ್ೆಶಕರೂ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಹೆಚ್ಚಿನ ಬಸ್ಗಳನ್ನು ನಿಯಮಿತವಾಗಿ ಅಮ್ಮಿನಬಾವಿ ಗ್ರಾಮಕ್ಕೆ ಓಡಿಸುವಂತೆ ಹಾಗೂ ಎಲ್ಲಾ ರೀತಿಯ ವೇಗದೂತ ಬಸ್ಗಳನ್ನು ಅಮ್ಮಿನಬಾವಿಯಲ್ಲಿ ನಿಲುಗಡೆಗೊಳಿಸಲು ಆದೇಶ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಬಾಕ್ಸ್ :
ಧಾರವಾಡದಿಂದ ಅಮ್ಮಿನಬಾವಿ ಗ್ರಾಮಕ್ಕೆ ಸರಿಯಾಗಿ ಬಸ್ ಓಡಿಸುವಂತೆ ವಿನಂತಿಸಿದರೆ ಧಾರವಾಡ ಡೀಪೋ ಮ್ಯಾನೇಜರ್ ಅವರು 'ನಾನೇ ಅಲ್ಲಿ ಬಸ್ ಸ್ಟ್ಯಾಂಡಿಗೆ ಬಂದು ಬಸ್ ಬಿಡಿಸಬೇಕೇನ್ರಿ? ಅಲ್ಲಿ ನಮ್ಮ ಸಿಬ್ಬಂದಿ ಇದ್ದಾರೆ ಅವರನ್ನೇ ಕೇಳಿ' ಎಂದು ಉಡಾಫೆ ಉತ್ತರ ನೀಡಿ ಜಾರಿಕೊಂಡು ತಮ್ಮ ಫೋನ್ ಕಟ್ ಮಾಡುತ್ತಾರೆ. ಹೀಗಾದಲ್ಲಿ ನಾವು ಯಾರನ್ನು ಕೇಳುವುದು?
? ಶಿವಾನಂದ ತಡಕೋಡ ಅಮ್ಮಿನಬಾವಿ ಪ್ರಯಾಣಿಕ