ಹನುಮಾನ ಮತ್ತು ಭೆಂಡವಾಡ ಏತ ನೀರಾವರಿ ಯೋಜನೆಗಳಿಗೆ ನೀರಿನ ಹಂಚಿಕೆ
ರಾಯಬಾಗ 15: ಮತಕ್ಷೇತ್ರದ ವ್ಯಾಪ್ತಿಯ ಹನುಮಾನ ಮತ್ತು ಭೆಂಡವಾಡ ಏತ ನೀರಾವರಿ ಯೋಜನೆಗಳಿಗೆ ನೀರಿನ ಹಂಚಿಕೆಯಾದ ನಂತರ ತಾಂತ್ರಿಕ ಶಕ್ಯತೆಯನುಸಾರ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಶಾಸಕ ದುರ್ಯೋಧನ ಐಹೊಳೆಯವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಕರಗಾಂವ ಏತ ನೀರಾವರಿ ಯೋಜನೆ ಮಂಜೂರಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ ಅವರು, ಚಿಕ್ಕೋಡಿ ತಾಲ್ಲೂಕಿನ 14 ಗ್ರಾಮಗಳ ಸುಮಾರು 8390 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕರಗಾಂವ ಏತ ನೀರಾವರಿ ಯೋಜನೆಯ ರೂ. 567 ಕೋಟಿಗಳ ವಿವರವಾದ ಯೋಜನಾ ವರದಿಗೆ 2023 ಮಾರ್ಚ್ 14 ರಲ್ಲಿ ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಈ ಯೋಜನೆಯ ಮೊದಲನೇ ಹಂತದ ರೂ.100 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಟೆಂಡರ್ ಪ್ರಕ್ರಿಯೆಯು ನಿಗಮದ ಹಂತದಲ್ಲಿ ಪರೀಶೀಲನೆಯಲ್ಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಯನ್ನು ಪ್ರಾರಂಭಿಸಿ ನಿಗದಿತ ಅಚ್ಚುಕಟ್ಟಿಗೆ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರನ್ನು ಮತ್ತು 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೆಲವು ಷರತ್ತುಗಳಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಇಲಾಖೆಯ ಮುಖಾಂತರ ಸೇವಾನಿರತ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಬರುವ ತಜ್ಞ ವೈದ್ಯರನ್ನು ತಜ್ಞ ಹುದ್ದೆಗೆ ನೇಮಿಸಲಾಗುತ್ತಿದೆ. ಎಂ.ಬಿ.ಬಿ.ಎಸ್/ಸ್ನಾತಕೋತ್ತರ ವ್ಯಾಸಂಗವನ್ನು ಪೂರೈಸಿ 1 ವರ್ಷದ ಕಡ್ಡಾಯ ಸೇವೆಗಾಗಿ ಬರುವ ವೈದ್ಯ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ವೈದ್ಯರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ ಗುಂಡೂರಾವ ಅವರು ಶಾಸಕ ದುರ್ಯೋಧನ ಐಹೊಳೆಯವರ ಪ್ರಶ್ನೆಗೆ ಉತ್ತರಿಸಿದ್ದಾರೆ.