ಹಿಂದಿ ಭಾಷೆ ಸೇರಿದಂತೆ ತ್ರಿ ಭಾಷಾ ಸೂತ್ರ ಅಳವಡಿಸಿಕೊಳ್ಳಿ, ಶಾಸಕ ಲಕ್ಷ್ಮಣ ಸವದಿ

ಹಿಂದಿ ಭಾಷೆ ಸೇರಿದಂತೆ ತ್ರಿ ಭಾಷಾ ಸೂತ್ರ ಅಳವಡಿಸಿಕೊಳ್ಳಿ, ಶಾಸಕ ಲಕ್ಷ್ಮಣ ಸವದಿ  Adopt the three-language formula including Hindi, says MLA Lakshman Savadi

ಹಿಂದಿ ಭಾಷೆ ಸೇರಿದಂತೆ ತ್ರಿ ಭಾಷಾ ಸೂತ್ರ ಅಳವಡಿಸಿಕೊಳ್ಳಿ, ಶಾಸಕ ಲಕ್ಷ್ಮಣ ಸವದಿ  

ಅಥಣಿ 01: ಮಾತೃಭಾಷೆ ಕನ್ನಡ, ದೇಶದ ಅತೀ ಹೆಚ್ಚು ಜನ ಮಾತನಾಡುವ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಇಂಗ್ಲೀಷ ಭಾಷೆ ಸೇರಿದಂತೆ ತ್ರಿ ಭಾಷೆಗಳಿಗೂ ಆದ್ಯತೆ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳುವ ಮೂಲಕ ಶಾಸಕ ಲಕ್ಷ್ಮಣ ಸವದಿ ತ್ರಿ ಭಾಷಾ ಸೂತ್ರವನ್ನು ಬೆಂಬಲಿಸಿದರು. ಅವರು ಅಲ್ಪ ಸಂಖ್ಯಾತ ಇಲಾಖೆಯಡಿ ಮಂಜೂರಾದ ಸರಕಾರಿ ಮೌಲಾನಾ ಆಝಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯವರೆಗೂ ಹಿಂದಿ ಪ್ರಾಭಲ್ಯ ಹೊಂದಿರುವ ಉತ್ತರ ಭಾರತದ ನಾಯಕರೇ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರನ್ನು ಹೊರತು ಪಡಿಸಿ ಬೇರೆ ಯಾವ ನಾಯಕರೂ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಬೆಳೆಯಲೇ ಇಲ್ಲ ಎಂದ ಅವರು ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲಗು, ಕೇರಳದಲ್ಲಿ ಮಲೆಯಾಳಿ  ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚು ಈ ಭಾಗದವರಿಗೆ ಹಿಂದಿ ಭಾಷೆ ಮೇಲೆ ಹಿಡಿತ ಇಲ್ಲದಿರುವ ಪರಿಣಾಮ ರಾಜಕೀಯವಾಗಿ ಹಿನ್ನಡೆಯಾಗಲು ಭಾಷೆಯೂ ಕೂಡ ಒಂದು ಕಾರಣ ಎಂದು ಅಭಿಪ್ರಾಯ ಪಟ್ಟರು.   ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಿ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಆಗ ಮಕ್ಕಳು ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ಆಸ್ತಿಗಳಾಗುತ್ತಾರೆ ಎಂದ ಅವರು ನಾವು ಪಡೆದ ಶಿಕ್ಷಣ ಖರ್ಚು ಮಾಡಿದಷ್ಟು ವೃದ್ಧಿಯಾಗುತ್ತದೆ ಇದರ ವಿರುದ್ಧವಾಗಿ ನಾವು ಹಣ ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ ಹೀಗಾಗಿ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮುಂದಾಗಬೇಕು ಹೊರತು ಸಂಪತ್ತು, ಹಣ ಅಲ್ಲ ಎಂದರು.      ಅಥಣಿಯೂ ಕೂಡ ಶೈಕ್ಷಣಿಕ ಕೇಂದ್ರವಾಗಿ ಇತ್ತೀಚಿಗೆ ಹೊರ ಹೊಮ್ಮಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ, ಡಿಪ್ಲೋಮಾ, ಸರಕಾರಿ ಪದವಿ ಮಹಾವಿದ್ಯಾಲಯಗಳು, ಚನ್ನಮ್ಮ ವಸತಿ ಶಾಲೆಗಳು  ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಮಂಜೂರಾಗಿರುವ ಕೃಷಿ ಮಹಾವಿದ್ಯಾಲಯ, ಕೇಂದ್ರಿಯ ವಿದ್ಯಾಲಯ, ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಸೇರಿದಂತೆ ಇನ್ನೂ ಅನೇಕ ಶೈಕ್ಷಣಿಕ ಕೇಂದ್ರಗಳು ಅಥಣಿಯಲ್ಲಿ ಪ್ರಾರಂಭಗೊಳ್ಳಲಿವೆ ಎಂದ ಅವರು ಅಥಣಿ ಸುತ್ತಮುತ್ತಲಿನ ಜಿಲ್ಲೆಗಳಿಗೂ ಶೈಕ್ಷಣಿಕ ಕೇಂದ್ರವಾಗಿ ಹೊರ ಹೊಮ್ಮಲಿದೆ ಎಂದರು.       ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಅಲ್ಪ ಸಂಖ್ಯಾತ ಮಕ್ಕಳಿಗಾಗಿ ಅಥಣಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಕೊರತೆ ಇತ್ತು. ಈ ಕೊರತೆಯನ್ನು  ಶಾಸಕ ಲಕ್ಷ್ಮಣ ಸವದಿಯವರು ನೀಗಿಸಿದ್ದಾರೆ ಎಂದ ಅವರು ಈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ ಸರಕಾರದ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು.      ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳ ಸಿದ್ಧ ಸ್ವಾಮೀಜಿ ವಹಿಸಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಆರ್‌.ಮುಂಜೆ, ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಫಕೀರ​‍್ಪ ಪೂಜಾರಿ, ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ಮುಕ್ತಿ ಹಬೀಬುಲ್ಲಾ ಮುಲ್ಲಾ, ಧುರೀಣರಾದ ಸೈಯ್ಯದಮೀನ್ ಗದ್ಯಾಳ, ಯುನ್ನೂಸ್ ಮುಲ್ಲಾ, ರಿಯಾಜ ಸನದಿ, ಆಸೀಫ ತಾಂಬೋಳಿ, ರಫಿಕ್ ಢಾಂಗೆ, ಐ.ಜಿ.ಬಿರಾದಾರ, ರಫಿಕ್ ಪಟೇಲ್, ಇರ್ಷಾದ ಬಾರಗೀರ, ಎಮ್‌.ಎ.ತರಡೆ, ಶಬ್ಬೀರ ದಾತಬಚ್ಚೆ, ಅರುಣಕುಮಾರ ಯಲಗುದ್ರಿ, ಶಾಂತಿನಾಥ ನಂದೇಶ್ವರ, ಡಾ.ಪದ್ಮಜಿತ್ ನಾಡಗೌಡ, ದುಂಡಪ್ಪ ಅಸ್ಕಿ, ಅಮರ ದುರ್ಗಣ್ಣವರ, ರಾಮಣ್ಣ ಧರಿಗೌಡ, ಸಲಾಂ ಕಲ್ಲಿ, ಸಿ.ಬಿ.ಪಡನಾಡ, ಅಸ್ಲಂ ನಾಲಬಂದ, ಸಿರಾಜ ಸನದಿ, ಪುರಸಭಾ ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಸಂತೋಷ ಸಾವಡಕರ, ಮಲ್ಲೇಶ ಹುದ್ದಾರ, ಬಸವರಾಜ ಹಳ್ಳದಮಳ, ಬಾಬು ಖೆಮಲಾಪುರ ಸೇರಿದಂತೆ ಜೈನ್ ಮತ್ತು ಮುಸ್ಲಿಂ ಅಲ್ಪ  ಸಂಖ್ಯಾತ ಬಂಧುಗಳು ಉಪಸ್ಥಿತರಿದ್ದರು.