ಶಿಕ್ಷಣವನ್ನು ಸವಾಗಿ ಸ್ವೀಕರಿ ಗುಣಮಟ್ಟದ ಶಿಕ್ಷಣ ನೀಡಿ- ಶಾಸಕರಾದ ರುದ್ರ್ಪ ಲಮಾಣಿ
ಹಾವೇರಿ 07: ಕಾಲ ಬದಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಪ್ರತಿ ಹಂತಗಳಲ್ಲಿಯೂ ಸಹ ಸವಾಲು ಎದುರಿಸಬೇಕಿರುವ ಈ ದಿನಗಳಲ್ಲಿ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗುಣಮಟ್ಟದ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಶಾಸಕರಾದ ರುದ್ರ್ಪ ಲಮಾಣಿ ಹೇಳಿದರು.
ಜಿಲ್ಲೆಯ ಅಕ್ಕಿಆಲೂರಿನಲ್ಲಿ ಜ್ಞಾನಭಾರತಿ ವಿದ್ಯಾವರ್ಧಕ ಸಂಘದ ಲಕ್ಷ್ಮಣ ಕೇಶಪ್ಪ ಶೇಷಗಿರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕವಾಗಿ ಸ್ಪರ್ಧೆ ಹೆಚ್ಚಿರುವ ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುವ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ಆಂಗ್ಲ ಮಾಧ್ಯಮ ಸಂಸ್ಥೆಗಳು ತಲೆ ಎತ್ತುತ್ತಿವೆ. ಸಂಸ್ಥೆಗಳನ್ನು ಆರಂಭಿಸುವುದು ಸುಲಭ, ಮುನ್ನಡೆಸುವುದು ಕಷ್ಟ. ಈ ಕಷ್ಟವನ್ನು ಎದುರಿಸಿ ಅಕ್ಕಿಆಲೂರಿನ ಜ್ಞಾನಭಾರತಿ ವಿದ್ಯಾವರ್ಧಕ ಸಂಘ ಉತ್ತಮ ಶಿಕ್ಷಣ ನೀಡಿ, ಮಾದರಿ ಎನಿಸಿದೆ ಎಂದು ಹೇಳಿದರು.
ಕಟ್ಟಡದ ನಾಮಫಲಕ ಅನಾವರಣಗೊಳಿಸಿದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ ನಗರ ಪ್ರದೇಶಗಳಲ್ಲಿ ಕೇವಲ ವ್ಯಾಪಾರದ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವರ ಸಂಖ್ಯೆಯೇ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಸೇವೆಯ ಉದ್ದೇಶದಿಂದ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಶಿಕ್ಷಣದ ಜೊತೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿವೆ. ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರದ ಅಮೂಲಾಗ್ರ ಸುಧಾರಣೆಗೆ ದೃಢಸಂಕಲ್ಪ ತೊಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ ಅವರು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಮುದಾಯದ ಸಹಭಾಗಿತ್ವ ಬೇಕಿದೆ. ಶಾಲೆ, ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಲು ಹಳೆಯ ವಿದ್ಯಾರ್ಥಿಗಳು ಮುಂದೆ ಬರಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಆರ್ಥಿಕ ಸಂಕಷ್ಟ ಇದ್ದರೂ ಕೂಡ ಪಾಲಕರು ಮಕ್ಕಳಿಗೆ ಶಿಕ್ಷಣ ದೊರಕಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕೇವಲ ಶಿಕ್ಷಣಕ್ಕಿದೆ ಎಂದು ಹೇಳಿದ ಅವರು ಜ್ಞಾನಭಾರತಿ ವಿದ್ಯಾವರ್ಧಕ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕೈಗೊಂಡ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿರುವುದು ಖುಷಿಯ ಸಂಗತಿ ಎಂದರು.
ಸಂಸ್ಥೆಯ ಅಧ್ಯಕ್ಷ ಲಕ್ಷಣ ಶೇಷಗಿರಿ ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಅಧ್ಯಕ್ಷ ಮಕ್ಬೂಲ್ ಅಹ್ಮದ ರುಸ್ತುಂಖಾನವರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೆಹಬೂಬ ಬ್ಯಾಡಗಿ, ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಡಾ.ಎಸ್.ಎಂ.ಹುಣಸಿಕಟ್ಟಿ, ಕಾರ್ಯದರ್ಶಿ ವಿ.ಪಿ.ಗುರ್ಪನವರ, ಕೋಶಾಧ್ಯಕ್ಷ ಆರ್.ಜಿ.ಗುಡಿಕೇರಿ, ಸದಸ್ಯರಾದ ಕೆ.ಎಸ್.ಕುಂಬಾರ, ಸದಾಶಿವ ಬೆಲ್ಲದ, ಕೆ.ವಿ.ಆಲದಕಟ್ಟಿ, ಎಸ್.ಎಸ್.ಪಸಾರದ, ಜಿ.ವಿ.ಬಡಿಗೇರ ಸೇರಿದಂತೆ ಅನೇಕರಿದ್ದರು.