ಬಾಕಿಯಿರುವ ಗೌರವಧನವನ್ನು ಬಿಡುಗಡೆ ಮಾಡಲು ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ

ಬಾಕಿಯಿರುವ ಗೌರವಧನವನ್ನು ಬಿಡುಗಡೆ ಮಾಡಲು ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ AIUTUC protests, demanding release of pending honorarium

ಬಾಕಿಯಿರುವ ಗೌರವಧನವನ್ನು ಬಿಡುಗಡೆ ಮಾಡಲು ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ 

ಹುಬ್ಬಳ್ಳಿ 16 : ಬಾಕಿಯಿರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಎಐಯುಟಿಯುಸಿ ಪ್ರತಿಭಟನೆ. ಇಂದು ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಹುಬ್ಬಳ್ಳಿ ತಾಲೂಕ ಸಮಿತಿ ವತಿಯಿಂದ ಬಾಕಿ ಗೌರವ ಧನ ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಹುಬ್ಬಳ್ಳಿ ಯ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಬಿಸಿಯೂಟ ತಾಯಂದಿರ ಒಗ್ಗಟ್ಟಿನ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ರೂ.1,000 ಗೌರವದನ ಏರಿಕೆ ಮಾಡಿದ್ದು ಹಾಗೂ 40 ಸಾವಿರ ನಿವೃತ್ತಿಯ ಇಡಿಗಂಟು ಘೋಷಣೆ ಮಾಡಿದ್ದು ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಈಗ ನೀಡುತ್ತಿರುವ ಮಾಸಿಕ ರೂ. 4,600 ಹುಬ್ಬಳ್ಳಿಯಲ್ಲಿ ಮನೆಗೆ ಒಂದು ತಿಂಗಳ ಬಾಡಿಗೆಯನ್ನೂ ನೀಡಲು ಸಾಲದು. ಅಲ್ಲದೇ ಕೇಂದ್ರ ಸರ್ಕಾರ ಕಳೆದ 15 ವರ್ಷಗಳಿಂದ ಒಂದು ರೂಪಾಯಿಯನ್ನೂ ಏರಿಕೆ ಮಾಡಿಲ್ಲ. ಆದ್ದರಿಂದ ಎರಡೂ ಸರ್ಕಾರಗಳು ಇಂದಿನ ಬೆಲೆಯೇರಿಕೆ ತಕ್ಕಂತೆ ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಬೇಕು, ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ,ಪಿಂಚಣಿ ಇತ್ಯಾದಿಗಳನ್ನು ನೀಡಬೇಕು ಎಂದು ರಾಜ್ಯ -ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದರು.ಅದೇ ರೀತಿ ಜಿಲ್ಲಾ ಅಧ್ಯಕ್ಷೆ ಭುವನಾ ಬಳ್ಳಾರಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಮಹಾತಾಯಂದಿರಿಗೆ ಬರುವ ಗೌರವಧನವೇ ಅತ್ಯಲ್ಪವಾಗಿದೆ. ಆ ಬಿಡಿಗಾಸು ಕೂಡ ನಿಯಮಿತವಾಗಿ ಬಿಡುಗಡೆಯಾಗುತ್ತಿಲ್ಲ. ಇದರಿಂದ ಅವರು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ. ಅಧಿಕಾರಿಗಳಿಗೆ ಕೇಳಿದರೆ ಕೇಂದ್ರದಿಂದಲೇ ಬಜೆಟ್ ಬಂದಿಲ್ಲ, ಬಂದಾಗ ತಡಮಾಡದೇ ಹಾಕುತ್ತೇವೆ ಎಂದು ಹೇಳುತ್ತಾರೆ. ಮತ್ತೊಂದೆಡೆ ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಮಾತ್ರ ಗಗನ ಮುಟ್ಟುತ್ತಿವೆ. ಅದರಲ್ಲೂ ಇದೀಗ ಹಬ್ಬಗಳ ದಿನಗಳು ಬೇರೆ! ಹಬ್ಬ ಮಾಡುವುದಿರಲಿ, ಮನೆ ಬಾಡಿಗೆಯನ್ನೂ ಕಟ್ಟಲಾಗುತ್ತಿಲ್ಲ.  ಈ ಮಹಿಳೆಯರೆಲ್ಲರೂ ವಿಧವೆಯರು, ಒಂಟಿ ಮಹಿಳೆಯರೂ ಆಗಿದ್ದು,ಕುಟುಂಬದ ಜವಾಬ್ದಾರಿ ಹೊತ್ತಿರುವರಾಗಿದ್ದಾರೆ. ಇಂದು ಸರ್ಕಾರಿ  ನೌಕರರೇ ಒಂದು ತಿಂಗಳ ವೇತನ ಬರೆದಿದ್ದರೆ ತೊಂದರೆ ಪಡುವ ಈ ದಿನಗಳಲ್ಲಿ  ಅಲ್ಪ ಗೌರವಧನವಿದ್ದರೂ ಅದೂ ಕೂಡ ಬರದೇ ಇರುವುದರಿಂದಾಗಿ ಇವರಗಳ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿ ಬೀದಿಯಂಚಿಗೆ ಬರುವಂತಾಗಿದೆ. ಆದ್ದರಿಂದ ಈ ಕೂಡಲೇ ಬಾಕಿ ಗೌರವಧನವನ್ನು ಪಾವತಿಸಬೇಕು ಹಾಗೂ ಪ್ರತಿ ತಿಂಗಳು ನಿಯಮಿತವಾಗಿ ಗೌರವದನ ಪಾವತಿಸಬೇಕು ಮತ್ತು ಇವರುಗಳ ಜ್ವಲಂತ  ಸಮಸ್ಯೆಗಳನ್ನು ಬಗೆಹರಿಸಿ ಎಂದು  ಸರ್ಕಾರವನ್ನು ಆಗ್ರಹಿಸಿದರು.  ಪ್ರತಿಭಟನೆಯಲ್ಲಿ ಲಲಿತಾ ಹೊಸಮನಿ, ನಾಗಮ್ಮ ನಾಗಶೆಟ್ಟಿ, ಹಸೀನಾ ಮುಂದಿನಮನಿ, ಕವಿತಾ ಚವ್ಹಾಣ, ಪವಿತ್ರಾ, ಲಲಿತಾ ಅರಕೇರಿ, ದ್ರಾಕ್ಷಾಯಣಿ ಹಡಪದ,ಪಾರ್ವತಿ ಚಡಚ್ಯಾಳ, ಕಲಾವತಿ ಮಾಶೆಟ್ಟಿ, ಸಾವಿತ್ರಿ ಮುದ್ದೇಬಿಹಾಳ್ ಮುಂತಾದವರು ನೇತೃತ್ವ ವಹಿಸಿದ್ದರು. ಮನವಿ ಪತ್ರವನ್ನು ತಹಶೀಲ್ದಾರರಿಗೆ ಮತ್ತು ಪಿಎಂ ಪೋಶನ್ ನಿರ್ಮಾಣ ಯೋಜನೆಯ ತಾಲೂಕ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಲಾಯಿತು. ಧನ್ಯವಾದಗಳು.