ನವಲಗುಂದ ಕಾಮಣ್ಣನ ದರ್ಶನ ಪಡೆದ ಪ್ರವಾಸ ಕಥನ ಬೇಡಿದ ವರ ಕರುಣಿಸುವ ನವಲಗುಂದದ ರಾಮಲಿಂಗ ಕಾಮಣ್ಣ

ನವಲಗುಂದ ಕಾಮಣ್ಣನ ದರ್ಶನ ಪಡೆದ ಪ್ರವಾಸ ಕಥನ ಬೇಡಿದ ವರ ಕರುಣಿಸುವ ನವಲಗುಂದದ ರಾಮಲಿಂಗ ಕಾಮಣ್ಣ A travelogue of a man who had a vision of Navalgund Kamanna. The Ramalinga Kamanna of Navalgund gra

ಧಾರವಾಡ 28 : ಇಡೀ ರಾಜ್ಯದಲ್ಲಿ ನವಲಗುಂದದ ರಾಮಲಿಂಗ ಕಾಮಣ್ಣ ವಿಶೇಷತೆಯನ್ನು ಹೊಂದಿದೆ.  ಬೇಡಿದ ವರವನ್ನು ಕರುಣಿಸುವಂತ ಕಾಮದೇವರು ಇಲ್ಲಿದ್ದಾನೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಅಲ್ಲದೆ ಹೊರ ರಾಜ್ಯದ ಭಕ್ತರು ಸಹ ರಾಮಲಿಂಗ ಕಾಮಣ್ಣನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ಕೆಲವು ವರ್ಷಗಳಲ್ಲಿ ಈಡೇರಿಸಿ ಭಕ್ತರ ಪ್ರೀತಿಗೆ ಪಾತ್ರವಾಗಿರುವ ಕಾಮಣ್ಣ. ಇಂತಹ ವಿಶಿಷ್ಟ ಮತ್ತು ವಿಶೇಷವಾಗಿರುವ ಕಾಮನನನ್ನು ದರ್ಶನ ಮಾಡುವುದೇ ಒಂದು ಸೌಭಾಗ್ಯ. ಇಂದು ನಾನು ನವಲಗುಂದದ ರಾಮಲಿಂಗೇಶ್ವರ ದೇವಸ್ಥಾನ ದರ್ಶನ ಪಡೆದ ಪ್ರವಾಸ ಕಥನದ ರೋಚಕ ಕಹಾನಿ ಇಲ್ಲಿದೆ.  

ಪ್ರತಿ ವರ್ಷದಂತೆ ದ್ವಾದಶದಂದು ನವಲಗುಂದದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರಾಮಲಿಂಗ ಕಾಮಣ್ಣ ಸಾರ್ವಜನಿಕರ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ.  ದರ್ಶನದ ವಿಷಯವನ್ನು ಈ ಮೊದಲೇ ತಿಳಿದುಕೊಂಡಿದ್ದೆ. ದರ್ಶನ ಮಾಡುವ ವಿಚಾರದ ಕುರಿತು ನಾನು ಕೆಲಸ ಮಾಡುವ ಕಚೇರಿಯಲ್ಲಿ ಚರ್ಚೆ ಮಾಡಲಾಯಿತು. ಆದರೆ ಯಾರೂ ಕೂಡ ನನ್ನ ಜೊತೆ ಬರಲು ಒಪ್ಪಿಗೆಯನ್ನು ಸೂಚಿಸಲಿಲ್ಲ. ಆದ್ದರಿಂದ ನಾನು ಒಬ್ಬನೇ ಹೋಗಲು ನಿರ್ಧಾರ ಮಾಡಿದೆ. ಅದರಂತೆ ನಾನು ಶನಿವಾರದಂದು ಬೆಳಿಗ್ಗೆ ಬೇಗನೆ ಎದ್ದು ದೇವಸ್ಥಾನಕ್ಕೆ ಹೊರಡಬೇಕು ಎಂದು ಯೋಚಿಸಿದೆ. ಶುಕ್ರವಾರದಂದು ರಾತ್ರಿ ಬೇಗನೆ ಮಲಗಿದೆ. ಶನಿವಾರ ಬೆಳಗ್ಗೆ ನಸುಕಿನ ಜಾವದಲ್ಲಿ ಎಚ್ಚರಗೊಂಡೆ. ನಂತರ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು, ಸ್ನಾನ ಮಾಡಿದೆ. ನನ್ನ ಅಂಬಾರಿಯನ್ನು ಹೊರ ತೆಗೆದು ಹೊರಡಲು ಅಣಿಯಾದೆನು. ಮನೆಯಲ್ಲಿ ಉಪಹಾರ ಸೇವಿಸಿಕೊಂಡು ಹೋಗು ಎಂದು ತಿಳಿಸಿದರು. ಆದರೆ ನಾನು ಮೊದಲೇ ತಡವಾಗಿದೆ ಎಂದು ಹೊರಡಲು ಮುಂದಾದೆ.  

ಬೈಕ್ ಸ್ಟಾರ್ಟ್‌ ಮಾಡಿ ನವಲಗುಂದದತ್ತ ಮುಖ ಮಾಡಿ ಹೊರಟೆನು. ಆದರೆ ವಾತಾವರಣದಲ್ಲಿ ಸ್ವಲ್ಪ ತಂಪಾದ ಗಾಳಿ ಬೀಸುತ್ತಿತ್ತು. ಚಳಿ ಸಹ ನನಗೆ ತಾಗುತ್ತಿತ್ತು. ಎಷ್ಟೇ ನಿಧಾನವಾಗಿ ಚಲಿಸಿದರೂ ಸಹ ಚಳಿ ಹೆಚ್ಚಾಗ ತೊಡಗುತ್ತಿತ್ತು. ಬೇರೆ ದಾರಿ ಇಲ್ಲದೆ ಬೈಕ್ ನ್ನು ನಿಧಾನವಾಗಿ ಓಡಿಸಿದೆ. ಸೂರ್ಯನ ಉದಯದಿಂದ ಚಳಿಯು ಕಡಿಮೆಯಾಯಿತು. ನವಲಗುಂದ ತಲುಪುವಷ್ಟರಲ್ಲಿ ಚಳಿಯು ಇಲ್ಲದಂತಾಯಿತು. ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ದಾರಿ ಹಿಡಿದು ಹೊರಟೆ. ದೇವಸ್ಥಾನ ಸಮೀಪಿಸುತ್ತಿದ್ದಂತೆ ನೂರಾರು ಭಕ್ತರು ದೇವಸ್ಥಾನಕ್ಕೆ ಹೊರಟಿರುವುದು ಕಂಡು ಬಂದಿತು. ಬೈಕನ್ನು ಎಲ್ಲಿ ನಿಲ್ಲಿಸಬೇಕೆಂದು ತಿಳಿಯದೆ ದೂರದಲ್ಲಿ ನಿಲ್ಲಿಸಿದೆ. ಬಳಿಕ ಕಾಲ್ನಡಿಗೆಯಲ್ಲಿ ದೇವಸ್ಥಾನದ ಕಡೆಗೆ ಧಾವಿಸಿದೆ. ದೇವಸ್ಥಾನದ ಹತ್ತಿರ ಸಾಕಷ್ಟು ಜನರು ಆಗಲೇ ಜಮಾಯಿಸಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿತ್ತು.

ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನೆ ನಿಂತಿದ್ದೆ. ನನ್ನ ಹತ್ತಿರ ಒಬ್ಬರು ಬಂದು ದೂರದಲ್ಲಿರುವ ಸರತಿ ಸಾಲಿನಲ್ಲಿ ನಿಂತು ಬರುವುದು ಉತ್ತಮ ಎಂದು ಗೊನಗುತ್ತಿದ್ದರು. ಅವರ ಮಾತು ಕೇಳಿ ನಾನು ಸಹ ಸರತಿ ಸಾಲಿನಲ್ಲಿ ನಿಲ್ಲಲು ಓಡಿದೆ. ಎರಡು ಮೂರು ಗಂಟೆಗಳ ಬಳಿಕ ದರ್ಶನ ಭಾಗ್ಯ ಬರುತ್ತದೆ ಎಂದುಕೊಂಡೆ. ಆದರೆ ಅಲ್ಲಿನ ಪರಿಸ್ಥಿತಿ ತುಂಬಾ ಬದಲಾಗಿತ್ತು. ಸಾಕಷ್ಟು ಜನರು ನಾವು ಬರುವ ಮೊದಲೇ ಅಲ್ಲಿ ಜಮಾಯಿಸಿದ್ದರು. ಅದು ಅಲ್ಲದೆ ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದರು. ವಯಸ್ಸಾದವರು ಸರತಿ ಸಾಲಿನಲ್ಲಿ ಕುಳಿತುಕೊಂಡು ಬಿಟ್ಟಿದ್ದರು. ಅವರನ್ನು ಕಂಡ ನಾನು ಇವತ್ತು ನನ್ನ ಸರದ ಬರುವುದಿಲ್ಲ ಎಂದುಕೊಂಡೆನು. ಕೊನೆಗೆ ದೂರದಿಂದಲೇ ದರ್ಶನ ಮಾಡಿ ಹೊರಡಬೇಕು ಎಂದುಕೊಂಡು ಸರತಿ ಸಾಲಿನಿಂದ ಹೊರ ಬಂದೆನು.  

ರಾಮಲಿಂಗ ಕಾಮದೇವ ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ್, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ-ವಸತಿ ಇಲ್ಲದವರು ಛತ್ರಿ-ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಸಾಕು ಬೇಡಿಕೆ ಫಲಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ನೂರಾರು ಭಕ್ತರು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಪೂಜೆ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು. ಹಲವಾರು ಸಂಘ ಸಂಸ್ಥೆಗಳು ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ, ಉಪಹಾರದ ವ್ಯವಸ್ಥೆ ಮಾಡುವ ದೃಶ್ಯಗಳು ಕಂಡು ಬಂದವು.  

ಸರತಿ ಸಾಲಿನಿಂದ ಪುನಃ ದೇವಸ್ಥಾನದ ಮುಖ್ಯ ದ್ವಾರದ ಕಡೆಗೆ ಹೆಜ್ಜೆ ಹಾಕಿದೆ. ದೇವಸ್ಥಾನದ ಬಳಿ ಸಾಕಷ್ಟು ಜನರು ಜಮಾಯಿಸಿದ್ದರು. ಅವರ ಮಧ್ಯೆ ನಾನು ಸಹ ನುಗ್ಗಿದೆ. ಹಾಗೋ ಹೀಗೋ ದೂರದಿಂದ ರಾಮಲಿಂಗ ಕಾಮಣ್ಣನ ದರ್ಶನ ಪಡೆದೆ. ಮನದಲ್ಲಿ ಬೇಡಿಕೆಗಳನ್ನು ದೇವರ ಮುಂದೆ ಇರಿಸಿದೆ. ಅಲ್ಲಿಂದ ದೂರ ಸರಿದು ಮರಳಿ ಬೈಕ್ ಇರುವ ಕಡೆಗೆ ಹೊರಟೆ. ದೇವಸ್ಥಾನದ ಹತ್ತಿರದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದವನ್ನು ಸೇವಿಸಿ ಊರ ದಾರಿ ಹಿಡಿದು ಮರಳಿದೆ.  ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷತೆ ಎಂದರೆ ರಾಮಲಿಂಗನನ್ನು ಪೂಜಿಸಲು ಯಾವುದೇ ರೀತಿಯ ಪೂಜಾರಿಗಳು ಇರುವುದಿಲ್ಲ. ಯಾವುದೇ ಜಾತಿ, ಧರ್ಮ ಭೇದಭಾವ ಇಲ್ಲದೆ ನಾನಾ ಧರ್ಮಗಳ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುವರು. ಹೀಗಾಗಿ ನವಲಗುಂದದ ರಾಮಲಿಂಗ ಕಾಮಣ್ಣ ಭಾವೈಕ್ಯತೆಯ ಸಂಕೇತವಾಗಿದೆ. ನೀವು ಕೂಡ ಒಮ್ಮೆ ರಾಮಲಿಂಗ ಕಾಮಣ್ಣನ ದರ್ಶನ ಪಡೆದು ಪುನೀತರಾಗಿರಿ....