ಅಭಿಮಾನಿಯಕುಂಚದಲ್ಲಿ ಅರಳಿದ ಗಜಾನನ ಮಂಗಸೂಳಿಯವರ ಭಾವಚಿತ್ರ

ಅಭಿಮಾನಿಯಕುಂಚದಲ್ಲಿ ಅರಳಿದ ಗಜಾನನ ಮಂಗಸೂಳಿಯವರ ಭಾವಚಿತ್ರ A portrait of Gajanana Mangasuli blossomed in the hands of fans

ಅಥಣಿ 26: ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿಯವರ ಭಾವಚಿತ್ರವನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅಭಿಮಾನಿ ಕಲಾವಿದನೋರ್ವ ತಮ್ಮ ಕುಂಚ ಕಲೆಯಲ್ಲಿ ಚಿತ್ರೀಸುವ ಮೂಲಕ ಅಭಿಮಾನ ಮೆರೆದಿದ್ದಾರೆ. 

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಆನಂದ ಹಿರೇಮಠ ಅವರು ಗಜಾನನ ಮಂಗಸೂಳಿಯವರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸೇವೆಯನ್ನು ಮೆಚ್ಚಿ ಅವರ ಅಪ್ಪಟ ಅಭಿಮಾನಿಯಾಗಿ  ಅಭಿಮಾನಪೂರ್ವಕವಾಗಿ ಗಜಾನನ ಮಂಗಸೂಳಿ ಅವರ ಚಿತ್ರವನ್ನು ಬಿಡಿಸಿ ಅಥಣಿ ಪಟ್ಟಣದ ಗಜಾನನ ಮಂಗಸೂಳಿ ಅವರ ಮನೆಗೆ ಭೇಟಿ ನೀಡಿ ಉಡುಗೊರೆಯಾಗಿ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಆನಂದ ಹಿರೇಮಠ, ಕಳೆದ ಹಲವಾರು ವರುಷಗಳಿಂದ ಗಜಾನನ ಮಂಗಸೂಳಿ ಅವರು ತಮ್ಮ ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ, ಧಾರ್ಮಿಕ, ಜನ ಸೇವಾ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರ ಜನಪರ, ಬಡವರ ಪರ, ರೈತ ಪರ ಕಾಳಜಿಯುಳ್ಳ ಸರಳ ಸ್ನೇಹ ಜೀವಿ ವ್ಯಕ್ತಿಯಾಗಿದ್ದು ಜನಮನದಲ್ಲಿ ಹೆಸರು ಗಳಿಸಿದ ನಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಇವರ ಅಭಿಮಾನಿಯಾಗಿದ್ದು, ಚಿತ್ರ ಕಲಾವಿದನಾಗಿದ್ದೇನೆ. ಅವರ ಜನ್ಮದಿನದಂದು ಸ್ಮರಣೀಯವಾಗಿ ಅವರಿಗೆ ನಾನು ನನ್ನ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದೆನು. ಆದರೆ, ಕಾರಣಾಂತರಗಳಿಂದ ನನಗೆ ಬರಲು ಆಗಿರಲಿಲ್ಲ. ಈಗ ನಾನು ಅಭಿಮಾನಪೂರ್ವಕವಾಗಿ ಅಥಣಿಗೆ ಬಂದು ಅವರಿಗೆ ನನ್ನ ಕೈಯಾರೆ ಬಿಡಿಸಿದ ಚಿತ್ರವನ್ನು ನೀಡಿದ್ದೇನೆ ಎಂದರು.       

ಈ  ಸಂದರ್ಭದಲ್ಲಿ ಮಾತನಾಡಿದ  ಗಜಾನನ ಮಂಗಸೂಳಿ ಅವರು ಮಾತನಾಡಿ, ಎಲ್ಲಿಯ ಅಥಣಿ, ಎಲ್ಲಿಯ ಹಗರಬೊಮ್ಮನಹಳ್ಳಿ. ಇಷ್ಟೊಂದು ದೂರದಿಂದ ಬಂದು ನನ್ನ ಚಿತ್ರವನ್ನು ಸುಂದರವಾಗಿ ಚಿತ್ರಕಲೆಯಲ್ಲಿ ರಚಿಸಿ ಉಡುಗೊರಯಾಗಿ ನೀಡಿದ ಆನಂದ ಹಿರೇಮಠ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರ ಚಿತ್ರಕಲೆ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ನಿಜಕ್ಕೂ ಅವರ ಬಗ್ಗೆ ನನಗೆ ಹೆಮ್ಮೆ ಮೂಡಿಸಿದೆ. ಇಂಥಹ ಅಭಿಮಾನಿಗಳಿಂದ ನಾನು ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಲು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು.