ಇಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಜನಾಧಿಕಾರ ಸಮಾವೇಶ ಹಾಗೂ ಬೃಹತ್ ಪ್ರತಿಭಟನೆ

ಇಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಜನಾಧಿಕಾರ ಸಮಾವೇಶ ಹಾಗೂ ಬೃಹತ್ ಪ್ರತಿಭಟನೆ A massive protest and a public meeting will be held at Freedom Park in Bengaluru today

              ಹಾವೇರಿ 28 :ರಾಜ್ಯದಲ್ಲಿ ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರು ನೇಮಕ ಮಾಡುವಂತೆ ಹಾಗೂ ಸ್ಥಳೀಯ ಸರ್ಕಾರಗಳ ಚುನಾವಣೆಯನ್ನು ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಿ ದಿ,29 ರಂದು ಗುರುವಾರ ಬೆಳಿಗ್ಗೆ 11 ಘಂಟೆಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ವತಿಯಿಂದ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಜನಾಧಿಕಾರ ಸಮಾವೇಶ ಹಾಗೂ ಬೃಹತ್ ಪ್ರತಿಭಟನೆ ಹೋರಾಟ ಹಮ್ಮಿಕೊಳ್ಳಲಾಗಿದ್ದು,ಜಿಲ್ಲೆಯ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ಹಾವೇರಿ ಜಿಲ್ಲಾಧ್ಯಕ್ಷರಾದ ಆನಂತರಾಜ ಹವಳಣ್ಣನವರ ತಿಳಿಸಿದ್ದಾರೆ.

               ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1)ಬಿ() ರನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನೊಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಲು ಅವಕಾಶವಿರುತ್ತದೆ.ರಾಜ್ಯ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳಿಗೆ ಅವಕಾಶ ನೀಡದೆ,ಅಧಿಕಾರಿಗಳಿಗೆ ಆಡಳಿತ ನಡೆಸುವ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವ ವಿರೋದಿ ನಡೆಯನ್ನು ನಡೆಯುತ್ತಿದೆ.ಈ ನಡೆಯನ್ನು ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟ ವಿರೋಧಿಸುತ್ತದೆ.

               ಈ ಹಿಂದೆ 2020 ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾಣೆ ನಡೆಸಲು ಸಾಧ್ಯವಾಗದೆ, ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾದ ಸಂದರ್ಭದಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದಂತಹ,ಇಂದಿನ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷರು, ಇಂದಿನ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ ರವರು ಮೇ 12, 2020 ರಂದು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ತಳಪಾಯ,ಅವುಗಳಿಗೆ ಅಢಳಿತಾಧಿಕಾರಿಗಳನ್ನು ನೇಮಿಸದೇ ಇರುವ ಆಡಳಿತ ಸಮಿತಿಯ ಅವಧಿಯನ್ನೇ 6 ತಿಂಗಳು ವಿಸ್ತರಿಸಬೇಕೆಂದು ಅಂದಿನ ಸಕಾರವನ್ನು ಒತ್ತಾಯಿಸಿದ್ದನ್ನು ಸರ್ಕಾರಕ್ಕೆ ನೆನಪಿಸ ಬಯಸುತ್ತದೆ. ಹಾಗೂ 90 ರ ದಶಕದಲ್ಲಿ ಗ್ರಾಮ ಪಂಚಾಯಿತಿಗಳ ಅವಧಿಯನ್ನು ವಿಸ್ತರಿಸಿದ್ದ ಉದಾಹರಣೆಯನ್ನು ಸರ್ಕಾರದ ಗಮನಕ್ಕೆ ತರಬಯಸುತ್ತದೆ.

              ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಜಾಪ್ರಭುತ್ವ ವಿರೋಧಿ ಆದೇಶವನ್ನು ಹಿಂಪಡೆದು ಕಾಯ್ದೆಯ ಅನ್ವಯ ಆಡಳಿತಾವಧಿ ಕೊನೆಗೊಳ್ಳುತ್ತಿರುವ ಆಡಳಿತ ಸಮಿತಿಯನ್ನು ಪುನರ್ ನೇಮಕ ಮಾಡಬೇಕೆಂದು ಹಾಗೂ ಶೀಘ್ರವಾಗಿ ಚುನಾವಣೆ ನಡೆಸುವಂತಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ದಿ,29 ರ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಇದು ರಾಜ್ಯ ಮಟ್ಟದ ಹೋರಾಟವಾಗಿದ್ದು,ಹಾವೇರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಗ್ರಾಪಂ ಜನಪ್ರತಿನಿಧಿಗಳು ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷ ಅನಂತರಾಜ ಹವಳಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.