ಉತ್ತರ ಕನ್ನಡದಲ್ಲಿ ಹೊಸದಾಗಿ 543 ಎಂಡೋಸಲ್ಫಾನ್ ಬಾಧಿತರು: ಸಚಿವ ಮಂಕಾಳು ವೈದ್ಯರ ವಿಶೇಷ ಕಾಳಜಿ ಯಿಂದ ’ಆಶಾಕಿರಣ’ ಯೋಜನೆ ಜಾರಿ- ವೆಂಕಟೇಶ ನಾಯ್ಕ
543 new endosulfan affected people in Uttara Kannada: Minister Mankalu, 'Asha Kirana' scheme implem
ಕಾರವಾರ 21: ಉತ್ತರ ಕನ್ನಡ ಜಿಲ್ಲೆಯಲ್ಲಿ ದಶಕಗಳಿಂದ ಎಂಡೋಸಲ್ಫಾನ್ ಬಾಧೆಗೆ ಒಳಗಾಗಿಯೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ನೂರಾರು ಕುಟುಂಬಗಳಿಗೆ ಇದೀಗ ಹೊಸ ಆಶಾಕಿರಣ ಮೂಡಿದೆ ಎಂದು ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹೇಳಿದ್ದಾರೆ. ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯರವರ ವಿಶೇಷ ಕಾಳಜಿಯಿಂದಾಗಿ, ಜಿಲ್ಲೆಯ ಆರು ತಾಲೂಕುಗಳಲ್ಲಿ ಮರು ಸಮೀಕ್ಷೆ ನಡೆಸಿ ಹೊಸದಾಗಿ 543 ಸಂತ್ರಸ್ತರನ್ನು ಗುರುತಿಸಲಾಗಿದೆ.
ಈ ಮೂಲಕ ಅವರಿಗೆ ಮಾನವೀಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಹಲವು ವರ್ಷಗಳಿಂದ ತಮಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿದ್ದ ಸಂತ್ರಸ್ತರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಮರು ಸಮೀಕ್ಷೆಗೆ ಆದೇಶಿಸಿದ್ದರು. ಈ ಸಮೀಕ್ಷೆಯ ಫಲವಾಗಿ ಭಟ್ಕಳದಲ್ಲಿ 110, ಹೊನ್ನಾವರದಲ್ಲಿ 169, ಕುಮಟಾದಲ್ಲಿ 36, ಅಂಕೋಲಾದಲ್ಲಿ 126, ಶಿರಸಿಯಲ್ಲಿ 40 ಹಾಗೂ ಸಿದ್ದಾಪುರದಲ್ಲಿ 62 ಸೇರಿದಂತೆ ಒಟ್ಟು 543 ಹೊಸ ವ್ಯಕ್ತಿಗಳನ್ನು ಎಂಡೋ ಬಾಧಿತರೆಂದು ಗುರುತಿಸಲಾಗಿದೆ.
ವಿಶೇಷವೆಂದರೆ, ಇವರಲ್ಲಿ ಒಟ್ಟು 228 ಮಂದಿ 18 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಈ ಎಲ್ಲಾ ಹೊಸ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಸ್ತುತ ಯು.ಡಿ.ಐಡಿ ಕಾರ್ಡ್ಗಳನ್ನು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಸರ್ಕಾರಿ ಪ್ರಯತ್ನದ ಜೊತೆಗೆ, ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಎಂಡೋಸಲ್ಫಾನ್ ಬಾಧಿತರ ಪುನರ್ವಸತಿಗಾಗಿ ಶ್ರಮಿಸುತ್ತಿರುವ ’ಸ್ಕೋಡ್ ವೆಸ್’ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ "ಆಶಾಕಿರಣ" ಎಂಬ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ರೂಪಿಸಲಾದ ಈ ಯೋಜನೆಯು ಜಿಲ್ಲೆಯ 608 ಎಂಡೋ ಬಾಧಿತ ಮಕ್ಕಳು ಹಾಗೂ ಅವರ ಪಾಲಕರಿಗೆ ವರದಾನವಾಗಲಿದೆ. "ಆಶಾಕಿರಣ" ಯೋಜನೆಯು ಸಂತ್ರಸ್ತರ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿದೆ. ಇದರ ಅಡಿಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಸತತ ಎರಡು ತಿಂಗಳ ಕಾಲ 12 ಹಂತಗಳಲ್ಲಿ ನುರಿತ ಫಿಸಿಯೋಥೆರಪಿಸ್ಟ್ಗಳು, ಶುಶೂಷಕಿಯರು ಹಾಗೂ ವಿಶೇಷ ಶಿಕ್ಷಣ ಶಿಕ್ಷಕರಿಂದ ಚಿಕಿತ್ಸೆ ನೀಡಲಾಗುತ್ತದೆ. ಕೇವಲ ಮಕ್ಕಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಚಿಕಿತ್ಸೆಯ ನಂತರ ಮನೆಯಲ್ಲಿ ಮಗುವನ್ನು ಹೇಗೆ ಆರೈಕೆ ಮಾಡಬೇಕೆಂಬ ಬಗ್ಗೆ ಪಾಲಕರಿಗೂ ವಿಶೇಷ ತರಬೇತಿ ನೀಡಲಾಗುತ್ತದೆ.
ಚಿಕಿತ್ಸೆಯ ನಂತರ ಸಂತ್ರಸ್ತ ಮಕ್ಕಳ ಅವಶ್ಯಕತೆಗೆ ತಕ್ಕಂತೆ ವಿವಿಧ ಪರಿಕರಗಳನ್ನು ವಿತರಿಸುವುದಲ್ಲದೆ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಕೌಶಲ್ಯ ತರಬೇತಿಗಳನ್ನೂ ಆಯೋಜಿಸಲಾಗಿದೆ ಎಂದರು. ಎಂಡೋಸಲ್ಪಾನ್ ಬಾಧಿತ 2097 ಕುಟುಂಬಗಳು ಇವೆ.ಈ ಪೈಕಿ 543 ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ನೀಗಿಸಲು ಈ ಯೋಜನೆಯಡಿ ಸುಮಾರು 450 ಪಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಉದ್ಯಮಶೀಲತಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಆಶಯದಂತೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಸಂಯೋಜಿತ ಕಾರ್ಯಕ್ರಮ ಜಾರಿಯಾಗುತ್ತಿದ್ದು, ಭಟ್ಕಳದಿಂದ ಈ ಮಹತ್ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಈ ಯೋಜನೆಯ ಯಶಸ್ಸನ್ನು ಗಮನಿಸಿ ಮುಂದಿನ ದಿನಗಳಲ್ಲಿ ಕರಾವಳಿಯ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಈ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ’ಸ್ಕೋಡ್ ವೆಸ್’ ಸಂಸ್ಥೆಯ ಜನರ ಉದ್ಧಾರಕ್ಕಾಗಿ ನಾವು ಎಂಬ ಧ್ಯೇಯವಾಕ್ಯಕ್ಕೆ ಹೆಚ್ಚಿನ ಅರ್ಥ ದೊರೆತಂತಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಹೆಗಡೆ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 