ಕಾರವಾರ: ದೇವರ ದಾಸಿಮಯ್ಯ ಜಯಂತಿ ಆಚರಣೆ ವಚನಕಾರರ ಹೋರಾಟವು ವೈಚಾರಿಕವಾಗಿತ್ತು: ಜಿಲ್ಲಾಧಿಕಾರಿ


ಕಾರವಾರ 10: ಸಾಹಿತ್ಯ ಪ್ರಕಾರವಾದ ಚಂಪೂವಿನಲ್ಲಿ  ಸಾಹಿತ್ಯ ರಚನೆಯಾಗುತ್ತಿದ್ದಂತಹ ಕಾಲಘಟ್ಟ ದಾಟಿ,  11ನೇ ಶತಮಾನದಲ್ಲಿ ಕನ್ನಡದಲ್ಲಿ ವಚನಗಳನ್ನು ರಚಿಸಿದಂತಹ ದೇವರ ದಾಸಿಮಯ್ಯನವರು ಮೊದಲ ಕನ್ನಡ ವಚನಕಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು. 

ಬುಧವಾರ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಿಲ್ಲಾಧಿಕಾರಿ ಮಾತನಾಡಿದರು. ದೇವರ ದಾಸಿಮಯ್ಯನವರೇ ಜೇಡರ ದಾಸಿಮಯ್ಯನವರಾಗಿದ್ದಾರೆ. ನೇಕಾರಿಕೆ ವೃತ್ತಿ ಮಾಡುತ್ತಾ ವಚನಗಳನ್ನು ರಚಿಸಿ, ಭಕ್ತಿ ಮಾರ್ಗದಲ್ಲಿ ಶಿವನನ್ನು ಆರಾಧಿಸಿ ಕಾಯಕವೇ ಕೈಲಾಸ ಎಂದು ಮಾಡಿ ತೋರಿಸಿದವರು. ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿಯಂತಹ ವಚನಕಾರರಲ್ಲಿ ದೇವರದಾಸಿಮಯ್ಯನವರೂ ಕೂಡಾ ಪ್ರಮುಖ ವಚನಕಾರರಲ್ಲಿ ಒಬ್ಬರು.  ವಚನಕಾರರ ಹೊರಾಟವು ವೈಚಾರಿಕವಾಗಿರುತ್ತಿತ್ತು. ತಮ್ಮ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು. ದೇವರ ದಾಸಿಮಯ್ಯನವರ  ವಚನಗಳಲ್ಲಿರುವ ಸಂದೇಶಗಳನ್ನು ಓದುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು. ವಚನಕಾರರ ಬದುಕು ಮತ್ತು ಅವರ ವಚನದ ತಿರುಳನ್ನು ನಾವು ಅಳವಡಿಸಿಕೊಂಡಲ್ಲಿ ಸಮಾನತೆಯ ಸಮಾಜದ ಕನಸು ನನಸಾದೀತು ಎಂದು ಅಭಿಪ್ರಾಯಪಟ್ಟರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಮ್. ರೋಶನ್ ಅವರು ಮಾತನಾಡಿ ಆದಿ ವಚನಕಾರ ದೇವರ ದಾಸಿಮಯ್ಯ ಅವರು ರಚಿಸಿರುವ 150ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ವಚನಗಳನ್ನು ಇಂದಿನ ಯುವ ಪೀಳಿಗೆ ಓದಿ ತಿಳಿದುಕೊಳ್ಳಬೇಕು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.     

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿದರ್ೇಶಕರಾದ ಹಿಮಂತರಾಜು.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಪರ ಜಿಲ್ಲಾಧಿಕಾರಿಗಳಾದ ನಾಗರಾಜ ಸಿಂಗ್ರೇರ್, ಪ್ರೋಬೇಶನರಿ ಐ.ಎ.ಎಸ್ ಅಧಿಕಾರಿ ದೀಲಿರ್ ಸಸಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.