‘ಶಾನುಭೋಗರ ಮಗಳು’ ಚಿತ್ರದ ಟ್ರೇಲರ್, ಹಾಡು ಬಿಡುಗಡೆ

ಲೋಕದರ್ಶನ ವರದಿ 

‘ಶಾನುಭೋಗರ ಮಗಳು’ ಚಿತ್ರದ ಟ್ರೇಲರ್, ಹಾಡು ಬಿಡುಗಡೆ 

ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿರುವ ಕಾದಂಬರಿ ಆಧಾರಿತ ‘ಶಾನುಭೋಗರ ಮಗಳು’ ಸಿನಿಮಾದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ‘ಶಾನುಭೋಗರ ಮಗಳು’ ಕಾದಂಬರಿ ಬರೆದಿರುವ ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಮಾತನಾಡಿ, ‘ಈ ಕಥೆ ಸಿನಿಮಾ ಆಗಿರುವುದು ತುಂಬಾ ಖುಷಿ ಇದೆ. ನಾನು ಇಲ್ಲಿಯವರೇಗೆ 32 ಕಾದಂಬರಿ ಬರೆದಿದ್ದು, ಈ ಕಾದಂಬರಿಯನ್ನು 2004ರಲ್ಲಿ ಬರೆಯಲಾಗಿದೆ. ಕಲ್ಪನೆ ಮೂಲಕ ಬರೆದಿದ್ದ ಸ್ಥಳಗಳಿಗೆ ಹೋಗಿ ನೋಡಿದಾಗ ನೈಜವಾಗಿ ಹಾಗೆಯೇ ಘಟನೆ ನಡೆದಿತ್ತು. ಮುಖ್ಯ ಪಾತ್ರಧಾರಿಯಾಗಿ ಚಿತ್ರದಲ್ಲಿ ರಾಗಿಣಿ ಪ್ರಜ್ವಲ್ ಅದ್ಭುತವಾಗಿ ನಟನೆ ಮಾಡಿದ್ದಾರೆ. ಇದು 2008-9ರಲ್ಲಿ ತರಂಗದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು’ ಎನ್ನುವರು.  

ನಂತರ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಮಾತನಾಡಿ, ‘ಆಕಸ್ಮಿಕವಾಗಿ ಈ ಸಿನಿಮಾ ಶುರು ಆಯ್ತು. ಇದು ನನ್ನ 14ನೇ ಕಾದಂಬರಿ ಆಧಾರಿತ ಸಿನಿಮಾ. ಕಮರ್ಷಿಯಲ್ ಆಗಿ ಏನೆಲ್ಲಾ ಬೇಕು ಅದನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದು 18ನೇ ಶತಮಾನದ ಕಥೆ. ಕಿಶೋರ್ ಟಿಪ್ಪು ಸುಲ್ತಾನ್ ಪಾತ್ರ ಮಾಡಿದ್ದಾರೆ. ಒಟ್ಟು ಆರು ಹಂತದಲ್ಲಿ ಶೂಟಿಂಗ್ ಮಾಡಲಾಗಿದೆ. ಹಳೆಯ ಕಲಾವಿದರ ಜೊತೆ ತುಂಬಾ ಜನ ಹೊಸಬರಿಗೆ ಇದರಲ್ಲಿ ಅವಕಾಶ ಮಾಡಿ ಕೊಡಲಾಗಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುವರು. ಶಾನುಭೋಗರ ಮಗಳು ಶರಾವತಿ ಪಾತ್ರ ಮಾಡಿರುವ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿನಿ ಪ್ರಜ್ವಲ್ “ಲಾ’ ಚಿತ್ರವಾದಮೇಲೆ ತುಂಬಾ ದಿನ ಗ್ಯಾಪ್ ನಂತರ ಈ ಚಿತ್ರ ಮಾಡಲಾಗಿದೆ. ಮೂಲತಃ ನಾನು ಕ್ಲಾಸಿಕಲ್ ಡ್ಯಾನ್ಸರ್‌. ಇಂತಹ ಪಾತ್ರಗಳನ್ನು ಮಾಡುವುದು ನನಗೆ ತುಂಬಾ ಇಷ್ಟ. ಇದರಲ್ಲಿ ನಾನು ಕನ್ನಡ ಕಲಿತು ಡಬ್ಬಿಂಗ್ ಕೂಡ ಮಾಡಿದ್ದೇನೆ’ ಎನ್ನುವರು. ಶ್ರೀರಂಗಪಟ್ಟಣ, ಮೇಲುಕೋಟೆ, ಮೈಸೂರು, ಚಿಕ್ಕಬಳ್ಳಾಪುರ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಚಿತ್ರದ ನಾಯಕನಾಗಿ ನಿರಂಜನ್ ಶೆಟ್ಟಿ ಅಭಿನಯಿಸಿದ್ದಾರೆ. 

ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿರುವ ರಮೇಶ್ ಭಟ್ ‘ಹಿಸ್ಟಾರಿಕಲ್ ಸಿನಿಮಾ ಮಾಡೋದು ತುಂಬಾ ಕಷ್ಟ. ಈ ಸಿನಿಮಾ ಚೆನ್ನಾಗಿ ಬಂದಿದೆ. ಇಡಿ ಕುಟುಂಬ ಕುಳಿತು ನೋಡುವಂತ ಸಿನಿಮಾ ಇದಾಗಲಿದೆ’ ಎನ್ನುವರು. ವೇದಿಕೆಯಲ್ಲಿ ಮತ್ತೋರ್ವ ನಾಯಕಿ ರಿಷಿಕಾ, ಜೋಸೈಮನ್, ವಾಣಿಶ್ರೀ, ಸಂಗೀತ ನಿರ್ದೇಶಕ ರಮೇಶ್ ಕೃಷ್ಣ, ಛಾಯಾಗ್ರಾಹಕ ಜೈ ಆನಂದ್ ತಮ್ಮ ಅನುಭವ ಹಂಚಿಕೊಂಡರು. ಭುವನ್ ಫಿಲ್ಮಸ್ ಲಾಂಛನದಲ್ಲಿ ಈ ಚಿತ್ರವನ್ನು ಸಿ.ಎಂ. ನಾರಾಯಣ್ ನಿರ್ಮಾಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕರ ಪರವಾಗಿ ಮಾತನಾಡಿದ ಸ್ವಸ್ತಿಕ ಶಂಕರ್ ‘ನಮ್ಮ ಮಿತ್ರ ಸಿ.ಎಂ ನಾರಾಯಣ್ ಕಥೆ ಓದಿದ್ದರು. ಇದನ್ನು ಸಿನಿಮಾ ಮಾಡಲು ಮುಂದಾದರು. ಅನೇಕ ಅಡೆ ತಡೆಗಳನ್ನು ದಾಟಿ ಸಿನಿಮಾ ಮಾಡಲಾಗಿದೆ. ಇದು ಮಹಿಳಾ ಪ್ರಧಾನ ಸಿನಿಮಾ. ನಾನು ಚಿತ್ರವನ್ನು ನೋಡಿದ್ದು ತುಂಬಾ ಚನ್ನಾಗಿ ಬಂದಿದೆ’ ಎಂದು ಹೇಳಿದರು. ಚಿತ್ರದ ಹಾಡುಗಳಿಗೆ ಕವಿರಾಜ್ ಹಾಗೂ ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್‌.ಎಂ ಸುರೇಶ್ ಉಪಸ್ಥಿತರಿದ್ದರು.