ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ’: ಮುರಕಟ್ಟಿ ಗ್ರಾಮಸ್ಥರ ಪ್ರತಿಭಟನೆ

ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ’: ಮುರಕಟ್ಟಿ ಗ್ರಾಮಸ್ಥರ ಪ್ರತಿಭಟನೆ 'We will not let our village school close': Murakatti villagers protest

 ಧಾರವಾಡ 06:  ತಾಲೂಕಿನ ಮುರಕಟ್ಟಿ ಗ್ರಾಮಸ್ಥರು ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ,65 ವರ್ಷ ದಾಟಿದ ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು. 

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ದೇವರಹುಬ್ಬಳ್ಳಿ ಪ್ರೌಢ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಮುರಕಟ್ಟಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. 120 ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಬಡ ರೈತ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಂದುವರೆದು,ಮುರಕಟ್ಟಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಲಾಳಗಟ್ಟಿ ಹಿರಿಯ ಪ್ರಾಥಮಿಕ ಶಾಲೆ, ಬೆನಕನಕಟ್ಟಿ ಹಿರಿಯ ಪ್ರಾಥಮಿಕ ಶಾಲೆ, ನಿಗದಿ ಸರ್ಕಾರಿ ಹಿರಿಯ ಮಾದರಿ ಶಾಲೆ, ಸೇರಿದಂತೆ 4 ಶಾಲೆಗಳನ್ನು ಮುಚ್ಚಿ ದೇವರಹುಬ್ಬಳ್ಳಿ ಮ್ಯಾಗ್ನೆಟ್ ಶಾಲೆಗೆ ಸೇರಿಸಲಾಗುತ್ತಿದೆ. ಈ ರೀತಿ ಕೇವಲ ಧಾರವಾಡ ಜಿಲ್ಲೆಯಲ್ಲೇ 500 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ತಲುಪಿಸಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳುತ್ತಿರುವ ಸರ್ಕಾರವು ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿ ಎಂ ಸಿ ತಲೆಯ ಮೇಲೆ ಹೊರೆಸಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಎಂದು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.  

ಮುರಕಟ್ಟಿ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷರಾದ ಜ್ಯೋತಿ ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಲಿಂಗನಕೊಪ್ಪ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಡುತ್ತೇವೆ. ಸರ್ಕಾರ ಜನರ ಹೋರಾಟವನ್ನು ಎದುರಿಸಲು ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದರು. 

ಪ್ರತಿಭಟನೆಯಲ್ಲಿ ಸದಸ್ಯರಾದ ಸಿದ್ದು  ಸೇರಿದಂತೆ  ರಾಘವೇಂದ್ರ ಪರಸಪನವರ, ಜ್ಯೋತಿ ಮಾದರ್, ಭಾರತಿ ದುಗನಕೇರಿ, ಜಯಶ್ರೀ ಪಾಟೀಲ್, ಸುನೀತಾ ಬರಡೇ ಊರಿನ ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.