ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸಿನಿಮಾ 'ಉಡಾಳ'

ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸಿನಿಮಾ 'ಉಡಾಳ' 'Udala' is a sure-fire movie from North Karnataka.

ಉತ್ತರ ಕರ್ನಾಟದಲ್ಲೇ ಪೂರ್ತಿ ಚಿತ್ರೀಕರಣ ಮಾಡಿರುವ 'ಉಡಾಳ' ಸಿನಿಮಾ ನವೆಂಬರ್ 14ರಂದು ಕೆ.ಆರ್‌.ಜಿ ಸ್ಟುಡಿಯೋ ಮುಖೇನ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ನೀರೀಕ್ಷೆ ಹೆಚ್ಚುವಂತೆ ಮಾಡಿದೆ. ಪೃಥ್ವಿ ಶಾಮನೂರು ಮತ್ತು ಹೃತಿಕಾ ಶ್ರೀನಿವಾಸ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಅಮೋಲ್ ಪಾಟೀಲ್ ಅವರು ನಿರ್ದೇಶನ ಮಾಡಿದ್ದಾರೆ. 'ಪದವಿ ಪೂರ್ವ' ಖ್ಯಾತಿಯ ನಟ ಪೃಥ್ವಿ ಶಾಮನೂರು ಅವರು ಹೀರೋ ಆಗಿ 'ಉಡಾಳ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡುವ ಯೋಗರಾಜ್ ಭಟ್, 'ನಗಿಸುವುದು ಅಷ್ಟು ಸುಲಭವಲ್ಲ. ನಗು ಬರುವುದು ಅಷ್ಟು ಸುಲಭವಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಜನ ಕಲಾವಿದರ ತಂಡವನ್ನಿಟ್ಟುಕೊಂಡು ಈ ಸಿನಿಮಾ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದ್ದಾರೆ. ಪೃಥ್ವಿ ಸ್ವಲ್ಪ ದಿನಗಳಲ್ಲಿ ಸ್ಟಾರ್ ನಟ ಆಗುತ್ತಾನೆ' ಎನ್ನುವರು. 

'ಪದವಿ ಪೂರ್ವ' ನಂತರ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಅವರು ಜೊತೆಗೂಡಿ ನಿರ್ಮಾಣ ಮಾಡುತ್ತಿರುವ 2ನೇ ಸಿನಿಮಾ ಇದು. 'ನಿರ್ಮಾಪಕನಿಗೆ ಒಂದೊಳ್ಳೆ ತಂಡ ಸಿಗುವುಕ್ಕಿಂತ ಮತ್ತೇನು ಬೇಕು? ನನಗೆ ಅಂತಹ ಒಳ್ಳೆಯ ಟೀಮ್ ಸಿಕ್ಕಿದೆ. ಸಿನಿಮಾ ಕೂಡ ಅಂದುಕೊಂಡ ರೀತಿಯಲ್ಲೇ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ' ಎಂದು ನಿರ್ಮಾಪಕ ರವಿ ಶಾಮನೂರು ಅವರು ಹೇಳಿದರು. ಇಡೀ ಸಿನಿಮಾದ ಕಥೆ ಬಿಜಾಪುರದಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದ ಲೊಕೇಷನ್‌ಗಳಲ್ಲಿ ಶೂಟಿಂಗ್ ಮಾಡಲಾಗಿದೆ. 'ಇದುವರೆಗೂ ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ ಮಾತ್ರ ಕೆಲವು ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ ನಮ್ಮದು ಫುಲ್ ಮೀಲ್ಸ್‌ ರೀತಿ ಇರುವ ಉತ್ತರ ಕರ್ನಾಟಕದ ಸಿನಿಮಾ' ಎಂದು ನಿರ್ದೇಶಕ ಅಮೋಲ್ ಪಾಟೀಲ್ ಹೇಳಿದ್ದಾರೆ. ಚೇತನ್ ಡ್ಯಾವಿ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಮಾಡಿದ್ದಾರೆ. ಮಧು ತುಂಬಕೆರೆ ಅವರ ಸಂಕಲನ ಈ ಸಿನಿಮಾಗಿದೆ. ಗಾಯಕಿ ಸೃಷ್ಟಿ ಶಾಮನೂರು, ನಟರಾದ ಬಲ ರಾಜವಾಡಿ, ಬಿರಾದಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಟೀಸರ್ ಮತ್ತು ಹಾಡುಗಳು ಈಗಾಗಲೇ ಗಮನ ಸೆಳೆದಿದೆ.