‘ಗುಂಡೇಟು ಕೊಟ್ಟರೂ ನಮ್ಮ ಹೋರಾಟ ನಿರಂತರ’

‘ಗುಂಡೇಟು ಕೊಟ್ಟರೂ ನಮ್ಮ ಹೋರಾಟ ನಿರಂತರ’ 'Our struggle continues even if we are shot'

           ಹಾವೇರಿ: ಕಳೆದ ಐದು ವರ್ಷಗಳಿಂದ ಮೀಸಲಾತಿಗಾಗಿ ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ಪ್ರಮಾಣಪತ್ರ ಸಿಗುವವರೆಗೆ ಹೋರಾಟ ಕೈ ಬಿಡಬಾರದೆಂದು ನಿರ್ಧಾರ ಮಾಡಿಕೊಂಡು ಹೋರಾಟ ಆರಂಭ ಮಾಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಹೋರಾಟ ಮಾಡಿದ್ದೆವು, ಯಡಿಯೂರ​‍್ಪ ಸಿಎಂ ಇದ್ದಾಗ, ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗಲೂ ಬೆಳಗಾವಿಯಲ್ಲಿ ಹೋರಾಟ ಮಾಡಿದ್ದೇವೆ.

             ಆದರೆ ಯಾರೂ ಸಹ ನಮ್ಮ ಹೋರಾಟವನ್ನು ದೌರ್ಜನ್ಯ ಮಾಡಿರಲಿಲ್ಲ. ಐದಾರು ಸಾವಿರ ವಕೀಲರು ಸೇರಿ ವಕೀಲರ ಪರಿಷತ್ ಮಾಡಿಕೊಂಡು ಸಿಎಂಗೆ ಒತ್ತಡ ಹಾಕಿದರು. ಆದರೆ ಮೀಸಲಾತಿ ನೀಡುವ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ. ಸಿಎಂ ಅವರು ನಮ್ಮ ಕಡೆಗೆ ಬರದೇ ಇದ್ದಾಗ, ನಾವೇ ಸಿಎಂ ಬಳಿ ಹೋಗುತ್ತೇವೆಂದು ಹೊರಟಿದ್ದೆವು. ಆಗ ನಮ್ಮ ಸಮಾಜದ ಅನೇಕ ವಕೀಲರು, ರೈತರು ಸೇರಿದಂತೆ ಹಲವರ ಮೇಲೆ ಲಾಠಿ ಚಾರ್ಜ್‌ ಮಾಡಲಾಯಿತು. ಚೆನ್ನಮ್ಮ, ಬಸವಣ್ಣನ ಕಾಲದಲ್ಲಿ ದೌರ್ಜನ್ಯ ಆಗಿದ್ದನ್ನು ನಾವು ಕೇಳಿದ್ದೆವು. ಆದರೆ ಈಗಿನ ಸರ್ಕಾರ ಏಕಾಏಕಿ ನಮ್ಮ ಮೇಲೆ ಲಾಠಿ ಚಾರ್ಜ್‌ ಮಾಡಿ ದೌರ್ಜನ್ಯ ಮಾಡಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 10 ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದರು. 

              2ಎ ಮೀಸಲಾತಿ ಸಿಗುವವರೆಗೆ ದೌರ್ಜನ್ಯ ದಿನವನ್ನು ನರಗುಂದ ಬಂಡಾಯದ ಹೋರಾಟದ ರೀತಿಯಲ್ಲಿ ಪ್ರತಿವರ್ಷ ಮಾಡುತ್ತೇವೆ. ಕೈಗೆ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೆಳಗಾವಿಯಲ್ಲಿ ಮೌನ ಪಥಸಂಚಲನ ಮಾಡುತ್ತೇವೆ. ನಮ್ಮ ಸಮಾಜದ ಸಾವಿರಾರು ಜನರು ಅಲ್ಲಿಗೆ ಬರಬೇಕು. ಗಾಂಧಿಭವನದಿಂದ ನಡೆದುಕೊಂಡು ಹೋಗುತ್ತೇವೆ. ಜಿಲ್ಲಾಧಿಕಾರಿಗಳು ತೋರಿಸಿದ ಸ್ಥಳದಲ್ಲಿ ಒಂದು ದಿನ ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. 

             ಯಾರು ಹೋರಾಟದ ಪರವಾಗಿ ಇರುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡುತ್ತೇವೆ. ಮಾಜಿಗಳು ಇದ್ದಾಗ ಎಲ್ಲರೂ ಹೋರಾಟಕ್ಕೆ ಬರುತ್ತಾರೆ, ಅಧಿಕಾರ ಬಂದ ಮೇಲೆ ಕೆಲವರು ಹೋರಾಟದಿಂದ ಹಿಂದೆ ಸರಿಯುತ್ತಾರೆ. ಅದು ಅವರ ಪಕ್ಷ, ಸಿದ್ಧಾಂತದ ಮೇಲೆ ನಿರ್ಧಾರವಾಗುತ್ತದೆ. ವ್ಯಕ್ತಿಯ ನಡವಳಿಕೆ, ಅವರ ಬೆಂಬಲದ ಮೇಲೆ ನಮ್ಮ ಜನರು ಅವರಿಗೆ ಬೆಂಬಲ ಸೂಚಿಸುತ್ತಾರೆ. ಎಲ್ಲಾ ಹೋರಾಟಗಳನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಾರೆ.

           ನಾವು ಸಮಾಜದ ಪರವಾಗಿ ಕೆಲಸ ಮಾಡುತ್ತೇವೆ. ಅಧಿವೇಶನದಲ್ಲಿ ಸಮಾಜದ ಬಗ್ಗೆ ಮಾತನಾಡಿ, ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಎಲ್ಲರೂ ಬಿಡುವು ಮಾಡಿಕೊಂಡು ಬಂದು ಹೋರಾಟದಲ್ಲಿ ಭಾಗವಹಿಸುವಂತೆ ಹೇಳಿದ್ದೇವೆ. ನಮ್ಮ ಲಿಂಗಾಯತ ಶಾಸಕರು ಹೋರಾಟಕ್ಕೆ ಬಾರದೇ ಇದ್ದಾರೆ, ಅಧಿವೇಶನದಲ್ಲಿ ಕಪ್ಪು ಬಟ್ಟೆ ಧರಿಸಿಕೊಂಡು ಅಧಿವೇಶನದಲ್ಲಿ ಭಾಗವಹಿಸಬೇಕು. ನಾವು ಸಮಾಜಕ್ಕೆ ಒಳಿತಾಗಬೇಕು ಎಂದು ಎಲ್ಲರನ್ನೂ ಕರೆಯುತ್ತಿದ್ದೇವೆ. ವಕೀಲರ ಪರಿಷತ್ ರಚನೆ ಆದ ಮೇಲೆ ಯಾವ ರಾಜಕಾರಣಿಗಳನ್ನು ನಮ್ಮ ಹೋರಾಟದ ವೇದಿಕೆ ಮೇಲೆ ಕೂರಿಸಬಾರದು ಎಂದು ನಿರ್ಧಾರ ಮಾಡಿದ್ದೇವೆ ಎಂದರು. 

            ಅಧಿವೇಶನದಲ್ಲಿ ಯಾವ ಶಾಸಕರು ಕಪ್ಪು ಬಟ್ಟೆ ಧರಿಸಿ ಹೋರಾಟದಲ್ಲಿ ಭಾಗವಹಿಸುವುದಿಲ್ಲವೋ ಅವರಿಗೆ ಏನು ಮಾಡಬೇಕು ಎಂದು ಡಿಸೆಂಬರ್ 10 ರಂದು ಸಂಜೆ ನಿರ್ಧಾರ ಮಾಡುತ್ತೇವೆ ಎಂದು ಶ್ರೀಗಳು ಹೇಳಿದರು. ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಬಾಯಿ ಬಿಟ್ಟು ಹೇಳಿದ್ದಾರೆ. ಆದರೆ ನಮ್ಮ ಹೋರಾಟ ನಿರಂತರ. ಸಿದ್ದರಾಮಯ್ಯನವರ ಮನಸ್ಸು ಪರಿವರ್ತನೆ ಆದರೂ ಆಗಬಹುದು, ಲಾಠಿ ಏಟು, ಗುಂಡೇಟು ಕೊಟ್ಟರೂ ನಮ್ಮ ಹೋರಾಟ ನಿರಂತರ. ಹಿಂದಿನ ಸರ್ಕಾರದಲ್ಲಿ ನಮ್ಮ ಸಮಾಜದ ಬಗ್ಗೆ ಭಯವಿತ್ತು. ಈಗಿನ ಸರ್ಕಾರದಲ್ಲಿ ನಮ್ಮ ಶಾಸಕರು ಭಾಗವಹಿಸದಂತೆ ಭಯವಿದೆ. ಹೋರಾಟದಲ್ಲಿ ಭಾಗವಹಿಸಿದರೆ ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬ ಭಯವಿದೆ ಎಂದು ಶ್ರೀಗಳು ಹೇಳಿದರು.