ಬದುಕಿನ ಹಾದಿಗೆ ಅರಿವಿನ ಬೆಳಕು ಸೂಸುವ ವಚನ ಜ್ಯೋತಿ

ಎಲ್ಲ ಕಾಲಕ್ಕೂ ಸಮಾಜವನ್ನು ದಾರಿಗೆ ತರುವ ಪ್ರಯತ್ನಗಳು ನಡೆದೇ ಇವೆ. ಶರಣರು, ಸಂತರು, ದಾರ್ಶನಿಕರು, ಕವಿಗಳು, ಮಹಾನ್ ಪುರುಷರು ಶತ ಶತಮಾನದಿಂದಲೂ ಹೆಜ್ಜೆ ತಪ್ಪಿದ ಬದುಕನ್ನು, ಕ್ಷಣಿಕತೆಯ ಸಾರವನ್ನು, ಸಾಧನೆಯೆಡೆಗಿನ ಹಾದಿಯನ್ನು, ಕುಸಿದು ಕೂತ ಕಾಲುಗಳಿಗೆ ಬಲ ತುಂಬುವ ಕಾಯಕವನ್ನು ತಮ್ಮ ನಡೆ-ನುಡಿಗಳಿಂದ ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಅದು ಆಗಬೇಕಾದ ಅಗತ್ಯ ಕೆಲಸವೂ ಕೂಡ ಹೌದು. ಹನ್ನೆರಡನೇ ಶತಮಾನದ ವಚನಕಾರರ ರಚನೆಗಳು ಜನಜೀವನದ ಮೇಲೆ ಬೀರಿದ ಪ್ರಭಾವ, ದೇವರನ್ನು ಕಾಣಿಸಿದ ಬಗೆ, ಸಂಪ್ರದಾಯಗಳನ್ನು ಧಿಕ್ಕರಿಸಿ, ಕ್ರಾಂತಿ ಸೃಷ್ಟಿಸಿದ್ದು, ಸಮಾನತೆಯ ತೋಳ ತೆಕ್ಕೆಯಲ್ಲಿ ಸರ್ವರನು ಬಂಧಿಸಲು ಪ್ರಯತ್ನಕ್ಕೆ ಕೈ ಹಾಕಿದ್ದು ಅವಿಸ್ಮರಣೀಯ. ಅಂತಹ ಶರಣರ ವಚನಗಳ ಪ್ರಭಾವಕ್ಕೆ ಒಳಗಾಗಿ ಇಂದಿನ ಅನೇಕ ಬರಹಗಾರರು ‘ಆಧುನಿಕ ವಚನಗಳ’ನ್ನು ರಚಿಸುತ್ತಿರುವುದು ಶ್ಲಾಘನೀಯ. ಅಂತಹವರ ಸಾಲಿನಲ್ಲಿ ಈಗ ಹೊಸ ಸೇರೆ​‍್ಡ, ಸೋಂಪುರದ ವೀರೇಶ ಬ. ಕುರಿ. ‘ವಚನ ಜ್ಯೋತಿ’ ಎಂಬ ಆಧುನಿಕ ವಚನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಬರವಣಿಗೆ ಲೋಕವನ್ನು ಪ್ರವೇಶಿಸಿದ್ದಾರೆ. ಹಳ್ಳಿಯ ಪರಿಸರದಲ್ಲಿ ಜನ್ಮಿಸಿದ ಮುಗ್ಧ ಯುವಕನೊಬ್ಬ ಸಮಾಜದಲ್ಲಿನ ದುಷ್ಟ ಪದ್ಧತಿಗಳಿಗೆ ಸಿಲುಕಿ, ಅವಮಾನ, ತಿರಸ್ಕಾರಗಳಿಂದ ನೊಂದು ಆಧುನಿಕ ವಚನಗಳ ಬರವಣಿಗೆಯಲ್ಲಿ ತೊಡಗಿದ್ದು ಮೆಚ್ಚುಗೆ ಗಳಿಸುವಂತದ್ದು. ಅಕ್ಷರದ ಸಾಂತ್ವನವೇ ಎಲ್ಲ ನೋವುಗಳಿಗೆ ಮದ್ದು. 

“ಬರಹಕ್ಕೆ ವಯಸ್ಸಿನ ಮಿತಿಯಿಲ್ಲ. ಆಲೋಚಿಸುವ ಮನಸ್ಸು ಮತ್ತು ಅನುಭಾವ ಇದ್ದರೆ ಸಾಕು. ಎನ್ನುವುದಕ್ಕೆ ಈ ಬರಹಗಾರನೇ ಸಾಕ್ಷಿ. ಚೊಚ್ಚಲ ಬರಹವಾದರೂ ಶರಣರ ಆಲೋಚನೆ ಈಡೇರಿಸುವ ಬರಹಗಾರನ ದೊಡ್ಡ ಪ್ರಯತ್ನ ಶ್ಲಾಘನೀಯವಾಗಿದೆ” ಎಂದು ಶ್ರೀ ಗವಿಸಿದ್ದೇಶ್ವರ ಪೂಜ್ಯರು ಆಶೀರ್ವದಿಸಿರುವ ಈ ಮಾತುಗಳು ಸಂಕಲನಕ್ಕೆ ಕಳಸಪ್ರಾಯವಾಗಿವೆ. ಮೊದಲ ಮಾತುಗಳನ್ನಾಡಿರುವ ಡಾ. ಶಿವಕುಮಾರ ಮಾಲಿಪಾಟೀಲರು ಕಂಡುಕೊಂಡಂತೆ ವೀರೇಶ ಅವರ ವಚನಗಳಲ್ಲಿ ಶಬ್ದಗಳ ಮೇಲೆ ಹಿಡಿತವಿದೆ. ಮಾನವೀಯತೆಯ ತುಡಿತವಿದೆ. ಜನಪರ ಕಳಕಳಿ ಇದೆ. ‘ಪಾರ್ವತಿ ತನಯ’ ಎಂಬ ಅಂಕಿತದಿಂದ ಗುರುತಿಸಿಕೊಳ್ಳುವ ಇಲ್ಲಿನ ವಚನಗಳು ದೈನಂದಿನ ಆಗು-ಹೋಗುಗಳಲ್ಲಿ ಕಂಡುಕೊಂಡ ನ್ಯೂನ್ಯತೆಗಳಿಗೆ ಮದ್ದು ನೀಡಿವೆ. ವಚನಗಳನ್ನು ವಿಷಯವಾರು ವಿಂಗಡಿಸಿ ಕೊಟ್ಟದ್ದು ಸೂಕ್ತವೆನಿಸಿದೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು ಬಸವಣ್ಣನವರು. ‘ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಗಳಿಗಂಜಿದೊಡೆಂತಯ್ಯ’ ಎಂದರು ಶಿವಶರಣೆ ಅಕ್ಕಮಹಾದೇವಿ. ಈಗಿನ ಸಂದರ್ಭದಲ್ಲಿ ಕಿಡಿ ಹಚ್ಚದೇ ಮನಸುಗಳನ್ನು ಬೆಸೆಯುವ ನುಡಿಗಳಾಡುವ ಅಗತ್ಯವಿದೆ. ಹಾಗೆಂದೇ ಇಂದು ಮಾತು ಹೇಗಿರಬೇಕು ಎಂಬುದರ ಕುರಿತಾಗಿ ವೀರೇಶ ಬರೆದಿರುವ ವಚನ ಹೀಗಿದೆ. 

ನುಡಿಯು ಬೆಂಕಿಯ ಕಿಡಿಗಳಾಗದೆ; 

ಬೆಳಕಿನ ಗುಡಿಗಳಾಗಲಯ್ಯ 

ನುಡಿಗಳು ಕಾಯ್ದ ಚಡಿಗಳಾಗದೆ; 

ಸುನಾದದ ‘ದುಡಿ’ಗಳಾಗಲಯ್ಯ 

ನುಡಿಗಳು ಮುಡಿಗೆ ಭೂಷಣವಾಗಿ 

ಮೃಢ ಶರಣರ ಅಡಿಗೆ ಸಲ್ಲಲೆಂದ ಪಾರ್ವತಿ ತನಯ. 

ಇಂದು ಎಲ್ಲ ಪುರಸ್ಕಾರಗಳು, ಸ್ಥಾನ-ಮಾನ, ಗೌರವ-ಸನ್ಮಾನಗಳು ಅಯೋಗ್ಯರ ಪಾಲಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೊಗಳುಭಟರಿಗೆ, ಕಾಲಿಗೆ ಮೂಗು ತಿಕ್ಕುವವರಿಗೆ, ಅಧಿಕಾರದ ಹಿಂದೆಯೆ ಅಲೆಯುವ ಅಬ್ಬೇಪಾರಿಗಳಿಗೆ ಅಧಿಕಾರ-ಗೌರವ ಸಿಗುತ್ತಿರುವುದು ಆಯಾ ಕ್ಷೇತ್ರಗಳ ಅಧಃಪತನಕ್ಕೆ ಕಾರಣ. ಇಂತಹವರನ್ನು ಕಂಡೇ ವೀರೇಶ ತಮ್ಮ ವಚನದಲ್ಲಿ ಹೀಗೆ ತಿವಿದಿದ್ದಾರೆ. 

ಅಯೋಗ್ಯರಿಗೆ ಸಂದ ಸನ್ಮಾನ 

ಮನೆಹಾಳರಿಗೆ ದೊರೆತ ಮನ್ನಣೆ 

ಕಪಟಿಗಳು ಗಳಿಸಿದ ಗೌರವಾದರ 

ಇವು ಮೂರೂ ಮೂಗಿಲ್ಲದ ಮೊಗದ 

ಶೃಂಗಾರದಂತೆಂದ ಪಾರ್ವತಿ ತನಯ.  

ವೀರೇಶ ಅವರ ಒಂದು ವಚನ ಓದಿದೊಡನೆ ನನಗೆ ಜರಗನಹಳ್ಳಿ ಶಿವಶಂಕರ ಅವರ ಒಂದು ಜನಪ್ರಿಯ ಹನಿಗವಿತೆ ನೆನಪಾಗುತ್ತದೆ.  

ಹತ್ತಾರು ವರುಷ 

ನೆರಳಾಗಿ ನಿಂತ ಮರ 

ತೊಲೆಯಾಗಿ ಉಳಿಯಿತು 

ನೂರಾರು ವರುಷ 

ನೂರು ವರುಷ ಆಳಿದ ಅರಸ 

ಹೆಣವಾಗಿ ಉಳಿಯಲಿಲ್ಲ  

ಮೂರು ದಿವಸ 

ಇಲ್ಲಿನ ಒಂದು ವಚನವೂ ಕೂಡ ಮರದ ಸಾರ್ಥಕ್ಯತೆಯ ಕುರಿತು ಅರಹುತ್ತದೆ. ಪರರಿಗಾಗಿ ಬದುಕಿದರೆ ಶಾಶ್ವತವಾಗಿ ಉಳಿಯುವ ಹೆಸರಿನ ಬಗ್ಗೆಯೂ ಅಭಿಮಾನ ಮೂಡಿಸುತ್ತದೆ. ನೊಂದವರ ಪರ ನಿಂತರೆ ನೆಮ್ಮದಿ ಸಿಗುವ ಮಾತಾಡುತ್ತದೆ. ಅದಕ್ಕೆಂದೇ ನಾನು ಈ ಹನಿಗವಿತೆಯನ್ನು ಸ್ಮರಿಸಿದೆ. 

ಮರವಾಗಿ ನೀ ಸಲಹು 

ನೆರಳಿಲ್ಲದೆ ನೊಂದವರ 

ಸ್ವರವೆತ್ತಿ ನೀ ಪಾಡು 

ಪೊರೆದಂತ ಸುರ ಜನರ 

ಹರಸು ನೀ ಒಮ್ಮನದಿ 

ಪರರಿಗಾಗಿ ದುಡಿದವರ 

ವರಯೋಗ ಸೂತ್ರವಿದು 

ಚಿರ ಕೀರ್ತಿ ಪಡೆಯಲೆಂದ ಪಾರ್ವತಿ ತನಯ.  

ಈ ಸಂಕಲನದ ಇನ್ನೊಂದು ವಚನ ನನಗೆ ತುಂಬ ಇಷ್ಟವಾಯಿತು. ಈಗಾಗಲೇ ಗಾದೆಗಳು, ನಾಣ್ಣುಡಿಗಳು ಸಾಕಷ್ಟು  ಕಡೆ  ಈ ಅರ್ಥವನ್ನು ಧ್ವನಿಸಿವೆ. ನಮ್ಮ ತಪ್ಪುಗಳನ್ನು ಇತರರು ಎತ್ತಿ ತೋರಿದರೆ ನಮಗೆ ಆಗಿಬರದು. ಸುಮ್ಮನೆ ಹೊಗಳುವವರ ಮೇಲೆಯೇ ನಮಗೆ ಪ್ರೀತಿ. ಪ್ರಸ್ತುತ ಸಂದರ್ಭಕ್ಕೆ ಈ ವಚನ ಹೇಳಿ ಮಾಡಿಸಿದಂತಿದೆ. ಸತ್ಯದ ಮಾತಿಗೆ ಮುನಿಸಿಕೊಳ್ಳುವವರ, ಮಿಥ್ಯಕ್ಕೆ ಮನಸೋಲುವವರ ಕಂಡೇ ಈ ವಚನ ಹೀಗೆ ಮಾತಾಡುತ್ತದೆ. 

ಮಾಡಿದ ತಪ್ಪನು ಎತ್ತಿ ತೋರಿದೊಡೆ 

ಕಿಡಿ ಕಿಡಿಯಾಗುವರಯ್ಯ ಇವರು! 

ನೋಡಿಯೂ ನೋಡಿದಂತೆ ಸುಮ್ಮನಿದ್ದೊಡೆ 

ಕೂಡಿ ನಲಿಯುವರಯ್ಯ ಇವರು! 

ಈ ಅಡ್ನಾಡಿಗಳಿಂದ ಕೇಡಾದರೂ ಚಿಂತೆಯಿಲ್ಲ ಎನಗೆ 

ಕೇಡನು ಖಂಡಿಸದೇ ಬಿಡೆನೆಂದ ಪಾರ್ವತಿ ತನಯ.  

ಇಂತಹ ಬದುಕಿನ ಸಾರವನ್ನು ಅರ್ಥ ಮಾಡಿಸುವ ಅನೇಕ ವಚನಗಳು ವಚನ ಜ್ಯೋತಿಯಲ್ಲಿವೆ. ತುಂಬ ಸರಳವಾದ ಧಾಟಿಯಲ್ಲಿ ಬರೆದಿರುವ ವಚನಗಳು ಓದಿಸಿಕೊಂಡು ಹೋಗುವ ಗುಣವನ್ನು ಒಳಗೊಂಡಿವೆ. ಆದರೂ ಇನ್ನೂ ಒಂದಷ್ಟು ಸರಳತೆ, ಪ್ರತಿಮಾತ್ಮಕ ಗುಣ, ಅಧ್ಯಯನ ವೀರೇಶ ಅವರಿಗೆ ಬೇಕು. ಅದನ್ನು ಅವರು ಮುಂದಿನ ಸಂಕಲನದಲ್ಲಿ ಸಾಧಿಸುತ್ತಾರೆ ಎಂಬ ಮಹದಾಸೆಯೊಂದಿಗೆ ಅವರನ್ನು ಅಭಿನಂದಿಸುವೆ. 

ವಚನ ಜ್ಯೋತಿ-ಆಧುನಿಕ ವಚನಗಳು 

ಲೇಖಕರು : ವೀರೇಶ ಬ. ಕುರಿ 

ಪ್ರಕಾಶಕರು : ಗಾನವಿ ಪ್ರಕಾಶನ ಸೋಂಪೂರ 

      ವರ್ಷ-2022 ಪುಟಗಳು-116 ಬೆಲೆ-120/- 



- * * * -