'ಪರಿಸರ ಉಳಿಸಲು ವಿದ್ಯಾರ್ಥಿಗಳು ಶ್ರಮಿಸಲಿ'

ಧಾರವಾಡ, 18 : ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಪ್ರತಿಯೊಂದು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಆಸಕ್ತಿಯಿಂದ ಶ್ರಮಿಸಬೇಕೆಂದು 'ತಿರಂಗ ದಾಮೋದರ' ಸಂಸ್ಥೆಯ ಅಧ್ಯಕ್ಷ ಹಾಗೂ ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯ  ಮಿಹಿರ್ ಕೊಲೇಕಾರ ಮನವಿ ಮಾಡಿದರು.

ಅವರು ಮಂಗಳವಾರ ನಗರದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕುರಿತ ಕಾರ್ಯಕ್ರಮದಲ್ಲಿ  ಪ್ರಧಾನ ಭಾಷಣ ಮಾಡಿ ಮಾತನಾಡುತ್ತಿದ್ದರು. ತಿರಂಗ ದಾಮೋದರ ಸಂಸ್ಥೆಯು ಇಂದಿನ ಯುವಕರಲ್ಲಿ ದೇಶಪ್ರೇಮವನ್ನು ಮೂಡಿಸುವುದರ ಸಲುವಾಗಿ ಭಾರತ ದೇಶದ ಪ್ರತಿಯೊಂದು ರಾಜ್ಯಗಳ ಅತಿ ಎತ್ತರದ ಪ್ರದೇಶದಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವ ಉದ್ದೇಶವನ್ನಿಟ್ಟುಕೊಂಡು ಕಟ್ಟಿದಂಥಹ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸದಸ್ಯರಾಗಿರುವಂತಹ ವಿದ್ಯಾರ್ಥಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಸರ ಜಾಗೃತಿ ಮತ್ತು ದೇಶಪ್ರೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಾರೆ ಎಂದರು.

ಇಂದಿನ ವಿದ್ಯಾರ್ಥಿಗಳು ಪರಿಸರ ಉಳಿಸುವುದಕ್ಕಾಗಿ ಪರಿಸರ ನಾಶದಿಂದ ಉಷ್ಣಾಂಶ ಹೆಚ್ಚಾಗುತ್ತಿದ್ದು, ಇದರಿಂದ ಪ್ರಾಣಿ ಸಂಕುಲಕ್ಕೆ ಗಂಡಾಂತರ ಬಂದಿದೆ. ಆದ್ದರಿಂದ ಎಲ್ಲರೂ ಸಸಿ ನೆಡುವುದು, ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವುದು ಹಾಗೂ ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಎಲ್ಲರಿಗೂ ಜಾಗೃತಿ ಮೂಡಿಸುವುದು ಅವಶ್ಯಕ ಎಂದರು.

ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರಾಣಿ ಯೋಹಾನನ್ ಮಾತನಾಡಿ, ಬೀದಿಗಳಲ್ಲಿ ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಎಸೆಯದಂತೆ, ಮತ್ತು ಅನವಶ್ಯಕ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣ ಹೇರಬೇಕಿದೆ. ವಾಹನಗಳ ಅತಿಯಾದ ಬಳಕೆಯಿಂದಾಗಿ ಹಸಿರುಮನೆ ಪರಿಣಾಮವುಂಟಾಗುತ್ತಿದ್ದು ಓಝೋನ್ ಪದರದಲ್ಲಿ ರಂಧ್ರವಾಗುತ್ತಿದ್ದು ಸೂರ್ಯನ ನೇರಳಾತೀತ ಕಿರಣಗಳಿಂದ ಮನುಕುಲಕ್ಕೆ ಕಂಟಕ ಕಾದಿದೆ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ ಎಂದರು. ಶಾಲೆಯ ಸಂಸ್ಥಾಪಕ ಅರುಣ ಚರಂತಿಮಠ, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.