‘ಧಾರವಾಡ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗಮನಾರ್ಹ ಪ್ರಗತಿ’

‘ಧಾರವಾಡ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗಮನಾರ್ಹ ಪ್ರಗತಿ’ 'Significant progress in the implementation of Dharwad Taluk Guarantee Schemes'

ಧಾರವಾಡ 24:: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ಪ್ರತಿ ಅರ್ಹ ಫಲಾನುಭವಿಗೆ ತಲುಪುವಂತಾಗಲು ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರವಿಂದ ಏಗನಗೌಡರ ಅವರು ಸೂಚಿಸಿದರು. 

ಇಂದು (ಮಾ.24) ಧಾರವಾಡದ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಜರುಗಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.  

ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಜಾರಿಯಾಗುತ್ತಿರುವ ಗ್ಯಾರಂಟಿ ಯೋಜನೆಗಳ ಸಮಗ್ರ ಪ್ರಗತಿಯನ್ನು ಅವರು ಈ ಸಂದರ್ಭದಲ್ಲಿ ಪರೀಶೀಲಿಸಿದರು. 

ಯೋಜನೆಗಳ ಪ್ರಗತಿ ವರದಿ: ಗೃಹಲಕ್ಷ್ಮಿ ಯೋಜನೆಗೆ ತಾಲ್ಲೂಕಿನಲ್ಲಿ ಒಟ್ಟು 57,008 ಫಲಾನುಭವಿಗಳಿದ್ದು, ಇಲ್ಲಿಯವರೆಗೆ ಪ್ರತಿಯೊಬ್ಬ ಮಹಿಳೆಯ ಖಾತೆಗೆ ತಲಾ 27 ಕಂತುಗಳ ಹಣ ನೇರವಾಗಿ ಜಮೆಯಾಗಿದೆ. ಈ ಯೋಜನೆಗಾಗಿ ಒಟ್ಟು ರೂ. 564,56,78,000 ಪಾವತಿಸಲಾಗಿದೆ. 

 ಗೃಹಜ್ಯೋತಿ ಯೋಜನೆಗೆ 60,484 ಗ್ರಾಹಕರು ಈ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದು, ಇಲ್ಲಿಯವರೆಗೆ ರೂ. 5,232.79 ಲಕ್ಷ ಆರ್ಥಿಕ ವೆಚ್ಚ ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಗೆ 52,525 ಫಲಾನುಭವಿಗಳಿಗೆ ಸರ್ಕಾರದ ನೂತನ ಆದೇಶದಂತೆ ಡಿಬಿಟಿ ಬದಲಿಗೆ ತಲಾ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. 

 ಯುವನಿಧಿ ಯೋಜನೆಗೆ ತಾಲ್ಲೂಕಿನ 2,745 ಪದವೀಧರರು ಹಾಗೂ 68 ಡಿಪ್ಲೋಮಾ ಪದವೀಧರರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪದವೀಧರರಿಗೆ ರೂ. 8,49,84,000 ಹಾಗೂ ಡಿಪ್ಲೋಮಾ ಅಭ್ಯರ್ಥಿಗಳಿಗೆ ರೂ. 7,74,000 ಹಣ ಸಂದಾಯವಾಗಿದೆ. 

 ಶಕ್ತಿ ಯೋಜನೆಗೆ ಮಹಿಳೆಯರು ಈ ಉಚಿತ ಪ್ರಯಾಣ ಸೌಲಭ್ಯದ ಬಗ್ಗೆ ಅತ್ಯಂತ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. 

ಪ್ರಸ್ತುತ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಆದರೆ, ಯಾವುದೇ ಅರ್ಹ ಫಲಾನುಭವಿಯು ತಾಂತ್ರಿಕ ಕಾರಣಗಳಿಂದ ಯೋಜನೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಇನ್ನಷ್ಟು ಹೆಚ್ಚಿನ ಶ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು. 

ಸಭೆಯಲ್ಲಿ ಧಾರವಾಡ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಗ್ಯಾರಂಟಿ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಕದಂ, ಸಿದ್ದಪ್ಪ ಅಗಸಿಮನಿ, ಪರಮೇಶ್ವರ ಕರಿಕಟ್ಟಿ, ರಾಜೇಶ್ ಚವ್ಹಾಣ, ಮಂಜುನಾಥ ಉಡಕೇರಿ, ಕಾರ್ತಿಕ್ ಗೋಕಾಕ್, ಮತ್ತು ಕಲಾವತಿ ಭೀಮಕ್ಕನವರ ಉಪಸ್ಥಿತರಿದ್ದರು.  

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಹಾಜರಿದ್ದರು.