ಬೇಲ್’ ಪ್ರೀ-ರೀಲೀಸ್ ಇವೆಂಟ್ ನಲ್ಲಿ ಶಿವಣ್ಣ ಆಂಥೆಮ್’ ಬಿಡುಗಡೆ
'Shivanna Anthem' released at the 'Bail' pre-release event
ಅಕ್ಟೋಬರ್ 2ರಂದು ಅದ್ದೂರಿಯಾಗಿ ಸಿನಿಮಾ ತೆರೆಗೆಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ, ಪವನ್ ಒಡೆಯರ್ ನಿರ್ದೇಶನದ ಬಹುನೀರೀಕ್ಷಿತ ’ಬೇಲ್’ ಚಿತ್ರದ ’ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಾಂಗ್ ರೀಲೀಸ್ ಸಮಾರಂಭದಲ್ಲಿ ನಾಯಕ ನಟ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ತಮ್ಮ ವೈಯಕ್ತಿಕ ಬದುಕಿನ ನೋವು-ಸವಾಲುಗಳು ಹಾಗೂ ಚಿತ್ರೀಕರಣದ ದಿನಗಳ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಶಿವರಾಜ್ಕುಮಾರ್, ತಾವು ಚಿಕಿತ್ಸೆ ಪಡೆಯುತ್ತಿದ್ದ ಕಠಿಣ ದಿನಗಳನ್ನು ಮೆಲುಕು ಹಾಕುತ್ತಾ, ’ನಾನು ಕೊನೆಯ ಹಂತದ ಕೀಮೋಥೆರಪಿಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಭೇಟಿ ನೀಡಿ ಕಥೆ ಹೇಳಿದ್ದರು.
ಕೀಮೋಥೆರಪಿ ವೇಳೆ ಸಾಮಾನ್ಯವಾಗಿ ಕೂದಲು ಉದುರುತ್ತದೆ, ಅಷ್ಟು ಪ್ರಬಲ ಡೋಸ್ ನೀಡಿದ್ದರೂ ದೇವರ ದಯೆಯಿಂದ ನನಗೆ ಒಂದೇ ಒಂದು ಕೂದಲು ಕೂಡ ಉದುರಲಿಲ್ಲ. 64 ವರ್ಷದವರೆಗೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಕೂದಲನ್ನು ನೋಡಿ ಬೇರೆಯವರು ಮರುಗಬಾರದು ಎಂಬ ಆತಂಕವಿತ್ತು. ಚಿಕಿತ್ಸೆಯ ಆ ಕಷ್ಟದ ವೇಳೆಯಲ್ಲೂ ಪವನ್ ದಂಪತಿ ಬಂದು ಪ್ರೀತಿಯಿಂದ ಅಡ್ವಾನ್ಸ್ ನೀಡಿ ಸಿನಿಮಾ ಒಪ್ಪಿಸಿದರು. ಅವರ ನಂಬಿಕೆ ಕಂಡು ನಾನು ಹಾಗೂ ಪತ್ನಿ ಗೀತಾ ಭಾವುಕರಾಗಿ ಕಣ್ಣೀರಿಟ್ಟಿದ್ದೆವು’ ಎಂದು ಶಿವಣ್ಣ ಹೇಳಿದರು. ಚಿತ್ರದ ಪಾತ್ರವರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಣ್ಣ, ’ಇದು ಕೇವಲ ಒಬ್ಬ ವ್ಯಕ್ತಿಯ ಶೋ ಅಲ್ಲ. ಎಲ್ಲ ಪಾತ್ರಗಳು ಚಿತ್ರಕಥೆಗೆ ಜೀವ ತುಂಬಿವೆ. ದೀಕ್ಷಿತ್ ಅತ್ಯುತ್ತಮ ಡ್ಯಾನ್ಸರ್ ಮತ್ತು ಹ್ಯಾಂಡ್ಸಮ್ ನಟ. ಸಂಜನಾ ಉತ್ತಮ ಅಭಿನಯ ನೀಡಿದ್ದಾರೆ.
ಇನ್ನು ’ದುನಿಯಾ’ ಚಿತ್ರದಿಂದಲೂ ನಾನು ಲೂಸ್ ಮಾದ ಯೋಗಿಗೆ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ನೀಡಿದೆ. ವಯಸ್ಸಾಗುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು, 64 ವರ್ಷವಾದರೂ ಕೆಲಸ ಮಾಡುವ ಸಕಾರಾತ್ಮಕ ಮನೋಭಾವ ನಮ್ಮಲ್ಲಿರಬೇಕು. ಇದೊಂದು ಉತ್ತಮ ಸಿನಿಮಾವಾಗಲಿದೆ’ ಎಂದು ಹೇಳಿದರು.ನಂತರ ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ’ಕ್ರಿಕೆಟ್ ಟೂರ್ನಮೆಂಟ್ ಆಕ್ಷನ್ ವೇಳೆ ಶಿವಣ್ಣನಿಗೆ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದೆ. ಆದರೆ ಚಿತ್ರರಂಗದ ಕಾರ್ಮಿಕರ ಬದುಕಿಗೆ ನಿರಂತರವಾಗಿ ಆಸರೆಯಾಗಿರುವ, ಹಿಟ್-ಫ್ಲಾಪ್ ಮೀರಿ ನಿಂತಿರುವ ಶಿವಣ್ಣನಿಗೆ ಏನೂ ಆಗಲ್ಲ ಎಂಬ ನಂಬಿಕೆಯಿತ್ತು. ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಬಂದ ತಕ್ಷಣವೇ ಅವರು ನಮಗೆ ಕರೆ ಮಾಡಿ ಚಿತ್ರೀಕರಣಕ್ಕೆ ಡೇಟ್ಸ್ ನೀಡಿದರು. ಇದಕ್ಕೆ ಬೆನ್ನೆಲುಬಾಗಿ ನಿಂತ ಗೀತಕ್ಕ ಹಾಗೂ ನಿವೇದಿತಾ ಶಿವರಾಜ್ಕುಮಾರ್ ಅವರಿಗೆ ಧನ್ಯವಾದಗಳು.
ಈ ಚಿತ್ರವನ್ನು ನಾವೇ ನಿರ್ಮಿಸಲು ಹೊರಟಿದ್ದಾಗ, ಕಥೆ ಮೆಚ್ಚಿದ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ. ನಾರಾಯಣ ಅವರು ಬೆಂಬಲವಾಗಿ ನಿಂತರು’ ಎಂದರು.ತಮ್ಮ ತಾಯಿಯ ನೆನಪಿನಲ್ಲಿ ಭಾವುಕರಾದ ಪವನ್, ’ಎರಡನೇ ಶೆಡ್ಯೂಲ್ ಚಿತ್ರೀಕರಣದ ವೇಳೆ ನನ್ನ ತಾಯಿಗೂ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಶಿವಣ್ಣ ಅವರ ಅಪ್ಪಟ ಅಭಿಮಾನಿ. ತಮಗೆ ನೋವಿದ್ದರೂ, ’ಚಿತ್ರ ಚೆನ್ನಾಗಿ ಮೂಡಿಬರಬೇಕು, ಸದಾ ಕೆಲಸ ಮಾಡು’ ಎಂದೇ ಹುರಿದುಂಬಿಸುತ್ತಿದ್ದರು. ತಾಯಿ ತೀರಿಕೊಂಡ ಸೂತಕದ ದಿನದಲ್ಲೂ ನಾನು ಈ ಸಿನಿಮಾಗಾಗಿ ಶ್ರಮಿಸಿದ್ದೇನೆ’ ಎಂದು ಕಣ್ಣೀರಾದರು. ಅಜನೀಶ್ ಲೋಕನಾಥ್ ಅವರ ಸಂಗೀತ, ವೈದಿ ಎಸ್ ಅವರ ಛಾಯಾಗ್ರಹಣ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಹೊಂದಿರುವ ’ಬೇಲ್’ ಚಿತ್ರವು ಅಕ್ಟೋಬರ್ 2 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಅಂಗಾರಕ ಸಂಕಷ್ಟಿ : ನೀಲಗಾರ ಗಣೇಶ ದರ್ಶನಕ್ಕೆ ಬೀಗಿ ಬಂದೋಬಸ್ತ್ : ಭಕ್ತರ ಸಂಖ್ಯೆ ಇಳಿಮುಖ
ಹಳೇ ವೈಷಮ್ಯ: ವ್ಯಕ್ತಿಯ ಅಪಹರಣ, ಕೊಲೆ: ನಾಲ್ವರು ಆರೋಪಿಗಳ ಬಂಧನ
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ 