ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ ಅಂಗವಾಗಿ ರಂಗಜ್ಯೋತಿ ಯಾತ್ರೆಗೆ ಚಾಲನೆ
'Rangajyothi Yatra' flagged off to mark the 116th birth anniversary of Joladarashi Doddanagowda
ಲೋಕದರ್ಶನ ವರದಿ
ಬಳ್ಳಾರಿ 30: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ ಅಂಗವಾಗಿ ರಂಗತೋರಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಂಗಜ್ಯೋತಿ ಯಾತ್ರೆಗೆ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಚಾಲನೆ ನೀಡಿದರು.
ಚೇಳ್ಳಗುರ್ಕಿಯ ಎರ್ರಿತಾತ ಜೀವಸಮಾಧಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಜೋಳದರಾಶಿಯಂತಹ ಪುಟ್ಟ ಗ್ರಾಮದಲ್ಲಿ ಜನಿಸಿದ ದೊಡ್ಡನಗೌಡರು ತಮ್ಮ ಸಾಹಿತ್ಯ, ನಾಟಕ, ಪ್ರವಚನ ಹಾಗೂ ಸಾಂಸ್ಕೃತಿಕ ಸೇವೆಯ ಮೂಲಕ ರಾಜ್ಯಾದ್ಯಂತ ಅಪಾರ ಗೌರವ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ದೊಡ್ಡನಗೌಡರ ಜೀವನ, ಮೌಲ್ಯಗಳು ಹಾಗೂ ಸಾಧನೆಗಳನ್ನು ಇಂದಿನ ಯುವಜನತೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ರಂಗಜ್ಯೋತಿ ಯಾತ್ರೆಯಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಸಾಂಸ್ಕೃತಿಕ ಯಾತ್ರೆಗಳು ಕನ್ನಡದ ಸಂಸ್ಕೃತಿ, ಸಾಹಿತ್ಯ ಹಾಗೂ ರಂಗಭೂಮಿ ಪರಂಪರೆಯನ್ನು ಜೀವಂತವಾಗಿರಿಸಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಎರ್ರಿತಾತ ಜೀವಸಮಾಧಿ ಮಠದಿಂದ ದೊಡ್ಡನಗೌಡರ ಭಾವಚಿತ್ರ ಹೊತ್ತ ಅಲಂಕೃತ ವಾಹನದೊಂದಿಗೆ ಆರಂಭವಾದ ರಂಗಜ್ಯೋತಿ ಯಾತ್ರೆ, ಬೈಕ್ ರ್ಯಾಲಿಯ ಮೂಲಕ ಸಮೀಪದ ದೊಡ್ಡನಗೌಡರ ಸಮಾಧಿಗೆ ತಲುಪಿತು. ಅಲ್ಲಿ ಕುಟುಂಬ ಸದಸ್ಯರು ಜ್ಯೋತಿಯನ್ನು ಭಕ್ತಿ-ಗೌರವಗಳಿಂದ ಸ್ವಾಗತಿಸಿದರು.
ನಂತರ ಪರಮದೇವನಹಳ್ಳಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಪೂಜೆ, ಪುಷ್ಪಾರ್ಚನೆ ಮೂಲಕ ಜ್ಯೋತಿಗೆ ಗೌರವ ಸಲ್ಲಿಸಿದರು. ಗೊಂಡೆಹಾಳು, ಅಮರಾಪುರ, ಕಕ್ಕಬೆವಿನಹಳ್ಳಿ, ಬೇವಿನಹಳ್ಳಿ ಹಾಗೂ ಬಿಸಲಹಳ್ಳಿ ಗ್ರಾಮಗಳ ಮೂಲಕ ಸಾಗಿದ ಯಾತ್ರೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ಬಳಿಕ ಬಳ್ಳಾರಿಯ ಡಾ. ರಾಜ್ಕುಮಾರ್ ರಸ್ತೆಯ ರಾಘವ ಕಲಾಮಂದಿರಕ್ಕೆ ಆಗಮಿಸಿದ ರಂಗಜ್ಯೋತಿಯನ್ನು ಕಲಾವಿದರು ಹಾಗೂ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಎರ್ರಿತಾತ ಜೀವಸಮಾಧಿ ಟ್ರಸ್ಟ್ನ ಧರ್ಮದರ್ಶಿ ಬಾಳನಗೌಡ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಜೋಳದರಾಶಿ ಪಂಪನಗೌಡ, ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಅಡವಿಸ್ವಾಮಿ, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಜೆ.ಎಂ.ಆರ್. ಬಸವರಾಜ, ಅಮರೇಶಸ್ವಾಮಿ, ದೊಡ್ಡನಗೌಡರ ಕುಟುಂಬಸ್ಥರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 