‘ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಪಾಲಕರ ಜವಾಬ್ದಾರಿ ಅಧಿಕ’

‘ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಪಾಲಕರ ಜವಾಬ್ದಾರಿ ಅಧಿಕ’  'Parents have a greater responsibility for the all-round development of children'

ಜಮಖಂಡಿ 04: ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಪಾಲಕರ ಜವಾಬ್ದಾರಿ ಬಹಳಷ್ಟು ಇದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ,ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. 

ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಿದ್ಧರಾಮೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಜಗದ್ಗುರು ಪಂಚಾಚಾರ್ಯ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಜಗದ್ಗುರು ಪಂಡಿತಾರಾಧ್ಯ ಪ್ರೌಢ ಶಾಲೆಯ 18ನೇ ವಾರ್ಷಿಕೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ರಂಗೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಕ್ಕಳ ಉತ್ತಮ ಶಿಕ್ಷಣಕ್ಕೆ ಅವರ ಪಾಲಕರು ಮಕ್ಕಳ ಕಲಿಕೆಯಲ್ಲಿ ಪ್ರತಿದಿನ ಸಮಯಕೊಡಬೇಕು, ಮಕ್ಕಳು ಓದಿನಲ್ಲಿ ಎಷ್ಟು ಮುಂದಿದ್ದಾರೆ ತಿಳಿದುಕೊಳ್ಳಬೇಕು ಎಂದರು. 

ಮಕ್ಕಳ ಸಾಧನೆಗೆ ಪಾಲಕರು ಪ್ರೋತ್ಸಾಹ ಅತ್ಯಗತ್ಯವಾಗಿದೆ, ಶೈಕ್ಷಣಿಕವಾಗಿ ಮಕ್ಕಳು ಬೆಳೆಸುವ ನಿಟ್ಟಿನಲ್ಲಿ ಪಾಲಕರು ತಮ್ಮ ಕರ್ತವ್ಯಪಾಲಿಸಬೇಕು. ಮಾರ್ಚ್‌ 5ಮತ್ತು 6 ರಂದು ಯಡಿಯೂರನಲ್ಲಿ 5 ಸಾವಿರಕ್ಕೂ ಅಧಿಕ ಸುಮಂಗಲಿಯರಿಂದ ಕುಂಬಮೇಳದೊಂದಿಗೆ 5 ರಾಜಗೋಪುರಗಳಿಗೆ ಮಹಾಕುಂಬಾಭಿಷೇಕ ಜರುಗಲಿದೆ, ಸಂಜೆ ಲಕ್ಷ ದಿಪೋತ್ಸವದಲ್ಲಿ ಎಲ್ಲ ಭಕ್ತರು ಪಾಲ್ಗೊಳ್ಳಬೇಕು, ಕಾರ್ಯಕ್ರಮ ಅಂಗವಾಗಿ 51 ದಿನಗಳ ಬೃಹತ್ ಧರ್ಮ ಜಾಗೃತಿ ಯಾತ್ರೆ ನಡೆಸಲಾಗುತ್ತಿದೆ ಎಂದರು. 

ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನಸ್ಸು ಇದ್ದರೆ ಏನು ಬೇಕಾದರು ಸಾಧನೆ ಮಾಡಲು ಸಾಧ್ಯ, ಗ್ರಾಮಿಣ ಪ್ರದೇಶ ಹಿಪ್ಪರಗಿ ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನಿಯ, ಗ್ರಾಮಿಣ ಮಕ್ಕಳಿಗೆ ವೈಜ್ಞಾನಿಕವಾಗಿ ಶಿಕ್ಷಣ ನೀಡಬೇಕು ಎಂದರು. 

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಮೇಶ ಅವಟಿ ಜ್ಞಾನ ನಿಧಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿ, ಮಕ್ಕಳನ್ನೆ ದೇಶದ ಆಸ್ತಿಯನ್ನಾಗಿ ಮಾಡುವ ಕಾರ್ಯ ಈಗಿಗ ಆಗುತ್ತಿದೆ, ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಅತಿಅವಶ್ಯವಾಗಿದೆ ಎಂದರು. ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಮಾತನಾಡಿ, ನಾಡಿನಲ್ಲಿ ಹೃದಯವಂತವರು ತಯಾರಾಗಬೇಕು, ಎಲ್ಲರ ಚಿತ್ತ ಶುದ್ದಿಯಾಗಿರಬೇಕು ಎಂದರು. 

ಎಸಿ ಶ್ವೇತಾ ಬಿಡಿಕರ ಅವರಿಗೆ ದಕ್ಷ ಸಿರಿ,. ತಾಲೂಕಾ ಅರೋಗ್ಯಾಧಿಕಾರಿ ಡಾ.ಗೈಬುಸಾಬ ಗಲಗಲಿ ಅವರಿಗೆ ವೈದ್ಯ ಭೂಷಣ, ಬಿಆರ್‌ಸಿ ರಮೇಶ ಅವಟಿ ಅವರಿಗೆ ಜ್ಞಾನ ನಿಧಿ, ವಿಜಯವಾಣಿ ವರದಿಗಾರ ಎಂ.ಎನ್‌.ನದಾಫ್ ಅವರಿಗೆ ಮಾಧ್ಯಮ ಮಿತ್ರ, ದಯಾನಂದ ಧರಿಗೋಣ ಅವರಿಗೆ ಸಮಾಜಸೇವಾ ಸಾಧಕ, ಸಂಗಪ್ಪ ಮರನೂರ ಅವರಿಗೆ ಭೂಮಿತಾಯಿಯ ಹೆಮ್ಮೆಯ ಮಗ, ಹಾಗೂ ಸಾಧನೆ ಮಾಡಿದ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ಚೇತನ ಪ್ರಶಸ್ತಿ ನೀಡಿ ಗೌರವಿಸಿದರು. 

ವೇದಿಕೆಯಲ್ಲಿ ಪಿ.ಆರ್‌.ಪಾಲಬಾವಿ, ಆರ್‌.ಎಂ.ಸಂಪಗಾಂವಿ ಗ್ರಾಮದ ಪ್ರಮುಖರು, ಯುವಕರು ಇದ್ದರು. ಮುಖ್ಯಶಿಕ್ಷಕ ಈರಣ್ಣ ಕುಂದರಗಿಮಠ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಪಿ.ಬಿ.ಬಾಗೇವಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಅಮೃತಾ ಕಾಂಬಳೆ ನಿರೂಪಿಸಿದರು.