‘ಜೀವನಪೂರ್ತಿ ಕಲಿಕೆ ಇಂದಿನ ಯಶಸ್ಸಿನ ಮೂಲ ಅಂಶ’
ಲೋಕದರ್ಶನ ವರದಿ
ವಿಜಯಪುರ 21: ತಂತ್ರಜ್ಞಾನ ದಕ್ಷತೆಯನ್ನು ಮಾನವೀಯ ಸಂವೇದನೆಯೊಂದಿಗೆ ಸಂಯೋಜಿಸಬಲ್ಲವರಿಗೆ ಭವಿಷ್ಯವಿದೆ. ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಜೀವನಪೂರ್ತಿ ಕಲಿಕೆ ಇಂದಿನ ಯಶಸ್ಸಿನ ಮೂಲ ಅಂಶಗಳಾಗಿವೆ. ಇಂದಿನ ಯಶಸ್ಸು ಪದವಿಗಳ ಮೂಲಕ ಮಾತ್ರ ನಿರ್ಧಾರವಾಗುವುದಿಲ್ಲ; ಅದು ಕೌಶಲ್ಯ ಮತ್ತು ಹೊಂದಾಣಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಅವರು ಪ್ರತಿಪಾದಿಸಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಕೃತಕ ಬುದ್ಧಿಮತ್ತೆಯಿಂದ ರೂಪುಗೊಳ್ಳುತ್ತಿರುವ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಂಋ ಉದ್ಯಮಗಳನ್ನು ಪರಿವರ್ತಿಸುತ್ತಿದ್ದು, ಉದ್ಯೋಗಗಳನ್ನು ಮರು ಪರಿಭಾಷಿಸುತ್ತಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ತಂತ್ರಜ್ಞಾನವು ಮುಂದುವರಿದರೂ, ಮಾನವೀಯ ಮೌಲ್ಯಗಳು, ನೈತಿಕ ಚಿಂತನೆ, ಸೃಜನಶೀಲತೆ ಮತ್ತು ಸಹಾನುಭೂತಿ ಮುಂತಾದ ಈ ಮೌಲ್ಯಗಳು ಸದಾ ಸ್ಥಿರವಾಗಿರುತ್ತವೆ ಎಂದರು.
ದೇಶ “ವಿಕಸಿತ ಭಾರತ- 2047” ಎಂಬ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಣ ಪಡೆದ ಮತ್ತು ಸಬಲಗೊಂಡ ಮಹಿಳೆಯರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯವಾಗುತ್ತದೆ. ಶಿಕ್ಷಣ ಪಡೆದ ಮಹಿಳೆಯರು, ಆರ್ಥಿಕವಾಗಿ ಸ್ವಾವಲಂಬಿ ಮಹಿಳೆಯರಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ನಾಯಕತ್ವ. ಮಹಿಳೆಯರು ಅಭಿವೃದ್ಧಿಯಾದರೆ ರಾಷ್ಟ್ರವೂ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಸಮಾನ ಉದ್ದೇಶ ಹೊಂದಿವೆ. ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಹಾಗೂ ಅವರನ್ನು ನಾಯಕಿಯರಾಗಿ ಮತ್ತು ಬದಲಾವಣೆಯ ಸಾರಥಿಗಳಾಗಿ ರೂಪಿಸುವುದು ಈ ಎರಡೂ ವಿಶ್ವವಿದ್ಯಾನಿಲಯಗಳ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಪದವೀಧರರಾಗಿ ಹೊರ ಬರುತ್ತಿರುವ ನಿಮಗೆ ಜ್ಞಾಪಕದಲ್ಲಿರಲಿ- ಕಲಿಕೆ ಇಲ್ಲಿಗೆ ಅಂತ್ಯಗೊಳ್ಳುವುದಿಲ್ಲ ಶ್ರಿಇದು ಜೀವನ ಪೂರ್ತಿ ನಡೆಯುವ ಪ್ರಯಾಣ. ಮುಂದಿನ ದಿನಗಳಲ್ಲಿ ನೀವು ವೃತ್ತಿಪರ, ವೈಯಕ್ತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸವಾಲುಗಳು ಅಡ್ಡಿಗಳು ಅಲ್ಲ; ಅವು ನಿಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಅವಕಾಶಗಳು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ದೃಢವಾಗಿರಿ. ನಿಮ್ಮ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜಿಸಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಮಹಿಳಾ ಸಬಲೀಕರಣವೆಂದರೆ ಶಿಕ್ಷಣ ಅಥವಾ ಉದ್ಯೋಗ ಮಾತ್ರವಲ್ಲ. ಅದು ಆತ್ಮವಿಶ್ವಾಸ, ಸ್ವಾತಂತ್ರ್ಯ ಮತ್ತು ನಿರ್ಧಾರಗಳನ್ನು ತೆಗೆದುಕೊಂಡು ಅವುಗಳೊಂದಿಗೆ ನಿಂತುಕೊಳ್ಳುವ ಸಾಮರ್ಥ್ಯ. ವಿದ್ಯಾವಂತ ಮಹಿಳೆಯರಾಗಿ, ನೀವು ಕುಟುಂಬ, ಸಮುದಾಯ ಮತ್ತು ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದ್ದೀರಿ. ನೀವು ವಿಶ್ವದತ್ತ ಹೆಜ್ಜೆ ಇಡುವಾಗ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ, ದೊಡ್ಡ ಕನಸು ಕಾಣಿರಿ, ಆದರೆ ವಾಸ್ತವಿಕವಾಗಿರಿ. ನೀವು ಮಾಡುವ ಪ್ರತಿಯೊಂದರಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಿ. ಇತರ ಮಹಿಳೆಯರನ್ನು ಬೆಂಬಲಿಸಿ ಮತ್ತು ಉತ್ತೇಜಿಸಿ. ನಿಮ್ಮ ಬೇರುಗಳು ಮತ್ತು ಮೌಲ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ. ನಿಮ್ಮ ಕುಟುಂಬಕ್ಕೆ ಗೌರವ ನೀಡಿ ಎಂದು ಉಜ್ವಲಾ ಚಕ್ರದೇವ್ ಸಲಹೆ ನೀಡಿದರು.
ನೀವು ಈ ವಿಶ್ವವಿದ್ಯಾನಿಲಯವನ್ನು ಬಿಟ್ಟು ಹೋಗುವಾಗ, ಅಕ್ಕಮಹಾದೇವಿಯವರ ಧೈರ್ಯ, ಜ್ಞಾನ ಮತ್ತು ನಿರ್ಭಯ ಸ್ವಾತಂತ್ರ್ಯದ ಆತ್ಮವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಭವಿಷ್ಯವನ್ನು ರೂಪಿಸುವುದು ನಿಮ್ಮ ಕೈಯಲ್ಲಿದೆ. ಆತ್ಮವಿಶ್ವಾಸದೊಂದಿಗೆ ಮುಂದುವರಿಯಿರಿ. ಉದ್ದೇಶಪೂರ್ಣವಾಗಿ ನಡೆದುಕೊಳ್ಳಿ. ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಿಮ್ಮ ಕೊಡುಗೆಯನ್ನು ನೀಡಿ ಎಂದು ಅವರು ಕರೆ ನೀಡಿದರು.
ವೇದಿಕೆಯ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 