‘ಮಕ್ಕಳನ್ನು ಅಂಕಗಳನ್ನು ತೆಗೆಯುವ ಯಂತ್ರದಂತೆ ನೋಡುವುದು ತಪ್ಪು’

‘ಮಕ್ಕಳನ್ನು ಅಂಕಗಳನ್ನು ತೆಗೆಯುವ ಯಂತ್ರದಂತೆ ನೋಡುವುದು ತಪ್ಪು’ 'It is wrong to see children as scoring machines'

ಲೋಕದರ್ಶನ ವರದಿ 

ಧಾರವಾಡ 04: ಇಂದು ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವದು ಅವಶ್ಯವಿದೆ. ಮಕ್ಕಳನ್ನು ಅಂಕಗಳನ್ನು ತೆಗೆಯುವ ಯಂತ್ರದಂತೆ ನೋಡುತ್ತಿದ್ದೇವೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಶಿಕ್ಷಣ ಚಿಂತಕ ಎಂ.ಎಂ. ಚಿಕ್ಕಮಠ ನುಡಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ  ಚಿಲಿಪಿಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡುತ್ತಾ ಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಸಕಾರಾತ್ಮಕ ಗುಣಗಳು ಬೆಳೆಯುತ್ತವೆ. ಏಕಾಗ್ರತೆ, ಕೂಡಿ ಬಾಳುವ, ಕೂಡಿ ಆಡುವೆ, ಉನ್ನುವ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಸಹಜವಾಗಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವರು. ಪಾಲಕರು ಮಕ್ಕಳನ್ನು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದರಿಂದ ಅವರ ಜೀವನ ತುಂಬ ಸುಂದರ ಬಾಲ್ಯದ ದಿನಗಳನ್ನು ಪಡೆಯುತ್ತಾರೆ. ಚಿಲಿಪಿಲಿ ಸಂಸ್ಥೆ ಮುವತ್ತು ವರ್ಷಗಳಿಂದ ಬೇಸಿಗೆ ಶಿಬಿರ ಮಾಡುತ್ತಾ ಸಾವಿರಾರು ಮಕ್ಕಳಲ್ಲಿ ಮಾನವೀಯತೆ, ಸಹಬಾಳ್ವಿಕೆ ಗುಣಗಳನ್ನು ಕಟ್ಟಿಕೊಡುವಲ್ಲಿ ಯಶಕಂಡಿದೆ. ಇಂದು ಮಕ್ಕಳಲ್ಲಿ ಸಂಸ್ಕಾರದ ಕೊರತೆಯನ್ನು ಕಾಣುತ್ತಿದ್ದೇವೆ. ಇಂಥ ಶಿಬಿರಗಳ ಮೂಲಕ ಮಕ್ಕಳಲ್ಲಿ ಸಂಸ್ಕಾರವನ್ನು ಕಟ್ಟಿಕೊಡುವ ಕಾರ್ಯ ಮಾಡುವುದು. ಹಳ್ಳಿ ಆಟಗಳು ಇಂದು ಕಣ್ಮರೆಯಾಗುತ್ತಿದ್ದಾವೆ. ಯಾವ ಖರ್ಚು ಇಲ್ಲದೇ ಹಳ್ಳಿ ಆಟಗಳನ್ನು ಆಡುವುದನ್ನು ಮಕ್ಕಳಿಗೆ ಕಲಿಸುವುದರಿಂದ ಹೆಚ್ಚು ಖುಷಿಯನ್ನು ಮಕ್ಕಳು ಅನುಭವಿಸುವರು ಎಂದರು. 

ಅತಿಥಿಯಾಗಿ  ಭಾಗವಹಿಸಿದ್ದ ಪ್ರಮಿಳಾ ಜಕ್ಕನ್ನವರ ಮಾತನಾಡುತತಾ ಮಕ್ಕಳ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ ವಿಶೇಷವಾದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಕ್ಕಳಲ್ಲಿ ಆನಂದದ ಬಾಲ್ಯದ ದಿನಗಳನ್ನು ಶಿಬಿರದ ಮೂಲಕ ಕಟ್ಟಿಕೊಡುತ್ತಿರುವುದು ಅಭಿನಂದನೀಯ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ, ಮಕ್ಕಳ ಮನೋವಿಕಾಸ ಬರೀ ಶಾಲೆಯ ನಾಲ್ಕು ಗೋಡೆಗಳ ನಡುವೆ ಆಗುವುದಿಲ್ಲ. ಸಮಾಜದ ನಡುವೆ ಮಗು ಬೆಳೆಯುವಂತಾದಾಗ ಅದು ಸಾಧ್ಯವಾಗುವುದು. ಇಂದು ಮಕ್ಕಳು ನಿಜವಾದ ಖುಷಿತರುವ ಬಾಲ್ಯದ ದಿನಗಳನ್ನು ಅನುಭವಿಸುತ್ತಿಲ್ಲ. ಪಾಲಕರು ಬದುಕಿನ ಒತ್ತಡದಲ್ಲಿ ಮಕ್ಕಳ ಕಡೆ ಗಮನಕೊಡುತ್ತಿಲ್ಲ. ಕೊಟ್ಟರೂ ಶೈಕ್ಷಣಿಕವಾಗಿ ಮಾತ್ರ ಕೊಡುತ್ತಾರೆ ವಿನಹ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಇದು ಸರಿಯಾದದ್ದಲ್ಲ. ಪಾಲಕರು ಮನೋಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದರು. 

ವಿಜಯಲಕ್ಷ್ಮಿ ಎಚ್‌. ಕಾರ‌್ಯಕ್ರಮ ನಡೆಸಿಕೊಟ್ಟರು, ವೇದಿಕೆಯ ಮೇಲೆ ಬಿ.ಆರ್‌. ಜಕಾತಿ, ಉಳವಪ್ಪ ತೇಗುರ ಇದ್ದರು. ಇದೇ ಸಂದರ್ಭದಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳಾದ ಸುಮಿತ ಭಜೆಂತ್ರಿ ಹಾಗೂ ಸಂಕೇತ ಹೊಳೆಯಾಲೂರ ಅವರನ್ನು ಸನ್ಮಾನಿಸಲಾಯಿತು. ವಿಜಯಲಕ್ಷ್ಮಿ ಎಚ್‌. ಮತ್ತು ರಿಜ್ವಾನ್ ಅವರನ್ನೂ ಸನ್ಮಾನಿಸಲಾಯಿತು. ನಿನಾಸಂ ಕಲಾವಿದ ವಿನಾಯಕ ಎಸ್‌. ಎಂ. ನಿರ್ದೇಶಿಸಿದ ಮಕ್ಕಳ ಯಕ್ಷಗಾನ ‘ಧೂತ ಘಟೋತ್ಕಚ’ ಮತ್ತು ಸಿಕಂದರ ದಂಡೀನ ನಿರ್ದೇಶನದ ‘ಶರೀಫ’ ಮಕ್ಕಳ ನಾಟಕ ಹಾಗೂ ಸೋಮು ಕಾರಿಗನೂರ ನಿರ್ದೇಶಿಸಿದ ಸಂವಿಧಾನ ರೂಪಕವನ್ನು ಮಕ್ಕಳು ಪ್ರಸ್ತುತ ಪಡಿಸಿದರು. ಎರಡೂ ನಾಟಕಗಳಲ್ಲಿ ಮಕ್ಕಳ ಅಭಿನಯ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.