‘ಸ್ಪರ್ಧಾತ್ಮಕ ಉದ್ಯೋಗ ಜಗತ್ತಿನಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ’

‘ಸ್ಪರ್ಧಾತ್ಮಕ ಉದ್ಯೋಗ ಜಗತ್ತಿನಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ’ 'In the competitive job world, a degree alone is not enough'

 ವಿಜಯಪುರ 03: ಇಂದಿನ ತೀವ್ರ ಸ್ಪರ್ಧಾತ್ಮಕ ಉದ್ಯೋಗ ಜಗತ್ತಿನಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ, ಪ್ರಾಯೋಗಿಕ ಕೌಶಲ್ಯ, ಪ್ರಮಾಣಿತ ತರಬೇತಿ ಹಾಗೂ ಸರಿಯಾದ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ ಎಂದು ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ, ಭೌತಶಾಸ್ತ್ರ ವಿಭಾಗ ಮತ್ತು ಗಣಿತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ರಾಷ್ಟೀಯ ಉಚ್ಚತರ ಶಿಕ್ಷಣ ಅಭಿಯಾನ ಪಿಎಮ್‌ಉಷಾ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅನುದಾನದ ನೆರವಿನಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ “ಪ್ಲೇಸ್‌ಮೆಂಟ್, ಟ್ರೇನಿಂಗ್ ಮತ್ತು ಸರ್ಟಿಫಿಕೇಶನ್‌” ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ತರಬೇತಿಯ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ವೃತ್ತಿಪರ ಅರಿವನ್ನು ಪಡೆಯಲು ಸಾಧ್ಯವಾಗುತ್ತದೆ. ಮಾನ್ಯತೆ ಪಡೆದ ಪ್ರಮಾಣಪತ್ರಗಳು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅಧಿಕೃತ ಮಾನ್ಯತೆಯನ್ನು ನೀಡುತ್ತವೆ. ಅಲ್ಲದೆ, ಪ್ಲೇಸ್ಮೆಂಟ್ ವ್ಯವಸ್ಥೆಯ ಮೂಲಕ ಅವರ ಪರಿಶ್ರಮ ಮತ್ತು ಕೌಶಲ್ಯಗಳಿಗೆ ತಕ್ಕಂತೆ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಈ ಕಾರ್ಯಾಗಾರವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. 

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ. ಎಸ್‌. ಬಿ. ಬಿರಾದಾರ ಮಾತನಾಡಿ, “ವೃತ್ತಿ ಜಾಗೃತಿ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿನ ಪ್ರವೃತ್ತಿಗಳು” ವಿಷಯದ ಕುರಿತು ಮಾಹಿತಿ ನೀಡಿದರು. ಹಿಂದಿನ ದಿನಗಳಲ್ಲಿ ಒಂದೇ ಪದವಿ ಒಂದು ಉದ್ಯೋಗಕ್ಕೆ ಸಾಕಾಗುತ್ತಿತ್ತು. ಆದರೆ ಇಂದಿನ ಉದ್ಯೋಗ ಮಾರುಕಟ್ಟೆ ವೇಗವಾಗಿ ಬದಲಾಗುತ್ತಿದೆ. ಕೌಶಲ್ಯಾಧಾರಿತ ಉದ್ಯೋಗಗಳು, ಡಿಜಿಟಲ್ ತಂತ್ರಜ್ಞಾನ, ಸಮಸ್ಯೆ ಪರಿಹಾರ ಸಾಮರ್ಥ್ಯ, ತಂಡದ ಕೆಲಸ ಹಾಗೂ ತಂತ್ರಜ್ಞಾನ ಜ್ಞಾನಕ್ಕೆ ಉದ್ಯೋಗದಾತರು ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ನಿರಂತರ ಕಲಿಕೆ ಇಂದಿನ ಕಾಲದ ಅಗತ್ಯವಾಗಿದ್ದು, ಆನ್‌ಲೈನ್ ಕೋರ್ಸ್‌ಗಳು, ಪ್ರಮಾಣಪತ್ರಗಳು ಮತ್ತು ಇಂಟರ್ನ್‌ಶಿಪ್‌ಗಳು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧಗೊಳಿಸುತ್ತವೆ ಎಂದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಕವಿತಾ ಹಿರೇಮಠ ಮಾತನಾಡಿ, “ಆಕರ್ಷಕ ಸಿವಿ ಅಥವಾ ರೆಸ್ಯೂಮ್ ಅಭಿವೃದ್ಧಿಪಡಿಸುವುದು” ವಿಷಯದ ಕುರಿತು ಮಾಹಿತಿ ನೀಡಿದರು. ಉತ್ತಮ ಸಿವಿ ಕೇವಲ ವಿದ್ಯಾರ್ಹತೆಗಳ ಪಟ್ಟಿ ಅಲ್ಲ, ಅದು ಅಭ್ಯರ್ಥಿಯ ಕೌಶಲ್ಯಗಳು, ಸಾಧನೆಗಳು ಮತ್ತು ಸಾಮರ್ಥ್ಯವನ್ನು ತೋರಿಸಬೇಕು ಎಂದರು. ಸಿವಿ ಸರಳ ಮತ್ತು ಸ್ಪಷ್ಟವಾಗಿರಬೇಕು, ಅನಗತ್ಯ ಮಾಹಿತಿಯನ್ನು ತಪ್ಪಿಸಬೇಕು. ಹೆಸರು, ಸಂಪರ್ಕ ವಿವರಗಳು ಹಾಗೂ ಪ್ರಮುಖ ಕೌಶಲ್ಯಗಳು ಸ್ಪಷ್ಟವಾಗಿರಬೇಕು. ಅಕ್ಷರದೋಷಗಳಿಲ್ಲದ ಸಿವಿಯೇ ಉತ್ತಮ ಉದ್ಯೋಗಾವಕಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಆಗಮಿಸಿದ್ದ, ಸಮಥಾ ರುಣವಾಲ ಮಾತನಾಡಿ, “ಸಂದರ್ಶನ ಕೌಶಲ್ಯಗಳು” ವಿಷಯದ ಕುರಿತು ಮಾಹಿತಿ ನೀಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ಸರಿಯಾಗಿ ಪ್ರದರ್ಶಿಸುವುದು ಅತ್ಯಂತ ಅಗತ್ಯ. ಸಂದರ್ಶನಕ್ಕೆ ಮುನ್ನ ಸಮರ​‍್ಕ ತಯಾರಿ, ಸಂಸ್ಥೆಯ ಕುರಿತು ತಿಳುವಳಿಕೆ, ವಿದ್ಯಾರ್ಹತೆ ಮತ್ತು ಕೌಶಲ್ಯಗಳ ಬಗ್ಗೆ ಸ್ಪಷ್ಟತೆ ಇರಬೇಕು. ವೇಷಭೂಷಣ, ಸಮಯಪಾಲನೆ, ಸ್ಪಷ್ಟ ಮತ್ತು ವಿನಯಪೂರ್ಣ ಸಂವಹನ ಉತ್ತಮ ಮೊದಲ ಅಭಿಪ್ರಾಯವನ್ನು ಮೂಡಿಸುತ್ತದೆ. ದೇಹಭಾಷೆ, ಕಣ್ಣಲ್ಲಿ ಕಣ್ಣು ಹಾಕಿ ಮಾತನಾಡುವುದು ಮತ್ತು ಧನಾತ್ಮಕ ಮನೋಭಾವ ಸಂದರ್ಶನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಂದು ಸಂದರ್ಶನವೂ ಒಂದು ಕಲಿಕೆಯ ಅನುಭವವಾಗಿದ್ದು, ಭಯಪಡುವುದಕ್ಕಿಂತ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಈ ರೀತಿಯ ಕಾರ್ಯಾಗಾರಗಳು ಅತ್ಯಂತ ಮಹತ್ವದವಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ, ಉದ್ಯೋಗ ಕ್ಷೇತ್ರಕ್ಕೆ ತಕ್ಕಂತೆ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಪ್ರಾಮಾಣೀಕರಣ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಾಗಾರದ ವಿಷಯ ಮತ್ತು ಇಂದಿನ ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿನಿಯರಲ್ಲಿ ಇರುವ ಜ್ಞಾನಮಟ್ಟವನ್ನು ಹೆಚ್ಚಿಸಿ, ಅವರಿಗೆ ಪ್ರೇರಣೆ ನೀಡಿದರು.