ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ ಜೀವದಾನ’ ಶಿಬಿರ

ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ ಜೀವದಾನ’ ಶಿಬಿರ  'Guru Shikshak Jeevadaan' (Teacher-Donor) Camp on the occasion of Teachers' Day

ಲೋಕದರ್ಶನ ವರದಿ 

ಖಾನಾಪುರ 04 : ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕು ಪಂಚಾಯತ ಖಾನಾಪುರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಗುರು ಶಿಕ್ಷಕ  ಜೀವದಾನ’ ಸಂದೇಶದೊಂದಿಗೆ ಖಾನಾಪುರ ಪಟ್ಟಣದ ಮಂಗಲ ಕಾರ್ಯಾಲಯ ಹಾಗೂ ನಂದಗಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಖಾನಾಪುರ ಮತಕ್ಷೇತ್ರದ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಶಿಬಿರಕ್ಕೆ ಚಾಲನೆ ನೀಡಿ, ರಕ್ತದಾನವು ಮಹತ್ಕಾರ್ಯವಾಗಿದ್ದು, ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.

ಶಿಬಿರದಲ್ಲಿ ಖಾನಾಪುರ ಮಂಗಲ ಕಾರ್ಯಾಲಯದಲ್ಲಿ 332 ಯೂನಿಟ್ ಹಾಗೂ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ 102 ಯೂನಿಟ್, ಒಟ್ಟು 434 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ತಾಲೂಕು ಎಂಬ ಹೆಗ್ಗಳಿಕೆಗೆ ಖಾನಾಪುರ ಪಾತ್ರವಾಯಿತು. ವಿವಿಧ ಇಲಾಖೆಗಳ, ವಿದ್ಯಾರ್ಥಿಗಳು, ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ರಕ್ತದಾನ ಮಾಡಿದರು. ಮರಾಠ ಮಂಡಳ ಕಾಲೇಜು, ಶಾಂತಿನಿಕೇತನ ಶಾಲೆ, ಬಿಬಿಎ ವಿದ್ಯಾರ್ಥಿಗಳು, ಭಾರತೀಯ ಸೇವಾದಳ, ಕನ್ನಡ ರಕ್ಷಣಾ ವೇದಿಕೆ ಹಾಗೂ ಲಯನ್ಸ್‌ ಕ್ಲಬ್ ಸದಸ್ಯರು ಸೇರಿದಂತೆ ಹಲವರು ಶಿಬಿರದಲ್ಲಿ ಭಾಗವಹಿಸಿದ್ದರು.

ಜಿಪಂ ಸಿಇಒ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ರಕ್ತದ ಕೊರತೆಯಿಂದ ಯಾವುದೇ ಜೀವಹಾನಿ ಯಾಗದಂತೆ ರಕ್ತ ಸಂಗ್ರಹಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ತಾಪಂ ಇಒ ರಮೇಶ ಮೇತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಹತ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ ಕಿವಡಸನ್ನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.