‘ರಸಗೊಬ್ಬರ; ಬಿತ್ತನೆ ಬೀಜಗಳ ವಿತರಣೆಯಲ್ಲಿ ರೈತರ ಸುಲಿಗೆ’
'Farmers are being extorted in the distribution of fertilizer; sowing seeds'
ಲೋಕದರ್ಶನ ವರದಿ
ದೇವರಹಿಪ್ಪರಗಿ 08: ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ತಾಲೂಕಿನಾದ್ಯಂತ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ವಿತರಣೆಯಲ್ಲಿ ವ್ಯಾಪಕ ಗೊಂದಲ ಹಾಗೂ ಕಪ್ಪು ಮಾರುಕಟ್ಟೆ ದಂಧೆ ತಲೆದೋರಿದ್ದು, ಖಾಸಗಿ ಕೃಷಿ ಕೇಂದ್ರಗಳು ರೈತರನ್ನು ಸುಲಿಗೆ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ರಿ) ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು “ಸರಕಾರ ನಿಗದಿಪಡಿಸಿರುವ ರಿಯಾಯಿತಿ ದರಗಳನ್ನು ಗಾಳಿಗೆ ತೂರಿ, ಖಾಸಗಿ ಆಗ್ರೋ ಕೇಂದ್ರಗಳ ಮಾಲೀಕರು ಮನಬಂದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಬಡ ರೈತರಿಗೆ ಭಾರಿ ಆರ್ಥಿಕ ಹೊರೆ ಬೀಳುತ್ತಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ. ಸರಕಾರದ ಸ್ಪಷ್ಟ ಆದೇಶಗಳಿದ್ದರೂ ಸಹ ಖಾಸಗಿ ಮಾರಾಟಗಾರರು ನಿಯಮಗಳನ್ನು ಪಾಲಿಸುತ್ತಿಲ್ಲ. ಅಧಿಕಾರಿಗಳ ಕಣ್ಣೆದುರೇ ಈ ದಂಧೆ ನಡೆಯುತ್ತಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ದಿನೇಶಗೌಡ ಪಾಟೀಲ ಮಾತನಾಡಿ ರೈತರು ಗೊಬ್ಬರ ಕೇಳಲು ಹೋದರೆ, "ನಮ್ಮಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಕಡಿಮೆ ಇದೆ" ಎಂಬ ಹಸಿ ಸುಳ್ಳು ನೆಪಗಳನ್ನು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ. ಇದು ಕೇವಲ ಕೃತಕ ಅಭಾವ ಸೃಷ್ಟಿಸಿ, ನಂತರ ಕಪ್ಪು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಮತ್ತು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ವ್ಯವಸ್ಥಿತ ಸಂಚಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಕ.ರಾ.ರೈತ ಸಂಘ ಹಾಗೂ ಹಸಿರುಸೇನೆಯ ನಗರ ಘಟಕದ ಅಧ್ಯಕ್ಷರಾದ ಶಕೀಲಾ ಹೆಬ್ಬಾಳ, ಉಪಾಧ್ಯಕ್ಷರಾದ ಸುನಂದಾ ಸೊನ್ನಳ್ಳಿ, ರಾಮು ದೇಸಾಯಿ, ರಾಚೋಟಯ್ಯಾ ಹಿರೆಮಠ, ಈರಣ್ಣ ಒಂಟೆತ್ತಿನ, ಚಂದ್ರಕಾಂತ ಪ್ಯಾಟಿ, ಕಾಶಿನಾಥ ಕೋರಿ, ಅಜೀಜ ಯಲಗಾರ, ಚೆನ್ನಪ್ಪ ದೇಸಾಯಿ, ಎಸ.ಎಮ್. ಆನಂದಿ, ಸಂತೋಷ ಕುಲಕರ್ಣಿ, ಮಲ್ಲಿಕಾರ್ಜೂನ ಕುಂಬಾರ, ಸಂದೀಪ ಬಾಸುತ್ಕರ ಇದ್ದರು.
ರೈತ ಸಂಘಟನೆಯ ಪ್ರಮುಖ ಬೇಡಿಕೆಗಳು:
ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವಂತೆ ಖಾಸಗಿ ಕೇಂದ್ರಗಳಿಗೆ ಕಡಕ್ ಸೂಚನೆ ನೀಡಬೇಕು. ನಿಯಮ ಉಲ್ಲಂಘಿಸಿ ಕೃತಕ ಅಭಾವ ಸೃಷ್ಟಿಸುವ ಅಥವಾ ಹೆಚ್ಚಿನ ಬೆಲೆಗೆ ಮಾರುವ ಕೃಷಿ ಕೇಂದ್ರಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು. ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಕಳಪೆ ಹಾಗೂ ನಕಲಿ ಬಿತ್ತನೆ ಬೀಜಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ಸ್ಥಳೀಯ ರೈತ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಸೊಸೈಟಿ) ಸಮರ್ಕವಾಗಿ ಮತ್ತು ಕ್ರಮಬದ್ಧವಾಗಿ ಗುಣಮಟ್ಟದ ರಸಗೊಬ್ಬರ ಹಾಗೂ ಬೀಜಗಳು ಸಿಗುವಂತೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಕೃಷಿ ಇಲಾಖೆಯು ತಕ್ಷಣವೇ ಜಾಗೃತಗೊಂಡು ಖಾಸಗಿ ಮಾರಾಟಗಾರರ ಮನಸೋಇಚ್ಛೆ ದರ ವಸೂಲಿಗೆ ಕಡಿವಾಣ ಹಾಕದಿದ್ದರೆ ಮತ್ತು ರೈತರು ಎದುರಿಸುತ್ತಿರುವ ಈ ಗಂಭೀರ ಬಿಕ್ಕಟ್ಟನ್ನು ನಿವಾರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಎಚ್ಚರಿಸಿದೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 