ಸೆ.25ಕ್ಕೆ ಕಾಮನ್ ಮ್ಯಾನ್ ನಾನೇ ಸಿಎಂ ಚಿತ್ರ ಬಿಡುಗಡೆ

ಸೆ.25ಕ್ಕೆ ಕಾಮನ್ ಮ್ಯಾನ್ ನಾನೇ ಸಿಎಂ ಚಿತ್ರ ಬಿಡುಗಡೆ  'Common Man Nane CM' movie to be released on September 25

ಲೋಕದರ್ಶನ ವರದಿ 

ಗದಗ 10 :  ಸುರಭಿ ಫಿಲಂಸ್ ನಿರ್ಮಾಣದ ‘ಕಾಮನ್ ಮ್ಯಾನ್ ನಾನೇ ಸಿಎಂ’ ಚಿತ್ರವು ಸೆ. 25ರಂದು ತೆರೆಗೆ ಬರಲಿದ್ದು, ಕಲಾಪೋಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಿರ್ಮಾಪಕ ಹಾಗೂ ಕಥೆ ರಚನಾಕಾರ ಡಾ. ಎನ್‌. ನರಸಿಂಹಮೂರ್ತಿ ಮನವಿ ಮಾಡಿದರು.  

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯಕ್ಕೆ ಬರುವುದು ಎಷ್ಟು ಕಷ್ಟ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜದಲ್ಲಿ ಎದುರಾಗುವ ಅವಮಾನವನ್ನೇ ಒಂದು ಅವಕಾಶವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಗೇರುವ ವ್ಯಕ್ತಿಯ ಕಥೆಯನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂದರು.  

“ಚಿತ್ರದಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದೇನೆ. ಇದೊಂದು ವಿಭಿನ್ನ ಕಥೆಯಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ,” ಎಂದು ಅವರು ಹೇಳಿದರು. ಕೆರೆಯಬೇಟೆ ಖ್ಯಾತಿಯ ನಟ ಗೌರಿಶಂಕರ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ವಿನಯಚಂದ್ರ ಸಂಗೀತ ನಿರ್ದೇಶನ, ಜೆ.ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.  

ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ ಇದಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಏನು ಮಾಡಬಹುದು ಎಂಬುದನ್ನು ಮನರಂಜನೆಯ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತದೆ.  

ನಟಿ ಸೋನಾ ಲಡ್ವಾ ಮಾತನಾಡಿ, “ನಾನು ಮೂಲತಃ ರಾಣೆಬೆನ್ನೂರಿನವಳು. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ನನಗೆ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಇದೀಗ ಡಾ. ನರಸಿಂಹಮೂರ್ತಿ ಅವರು ಅವಕಾಶ ನೀಡಿದ್ದಾರೆ. ಈ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರದಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು,” ಎಂದು ಮನವಿ ಮಾಡಿದರು.  

ಚಿತ್ರದ ನಾಯಕಿ ಸೋನಾ ಲಡ್ವಾ ಸೇರಿದಂತೆ ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕ್ಯಾಮೆರಾಮ್ಯಾನ್ ಕೃಷ್ಣ, ಸಂಭಾಷಣೆ ಬರಹಗಾರ ಶೈಲೇಶ್ ಸೇರಿದಂತೆ ಚಿತ್ರತಂಡದ ಹಲವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ್ ಎಲೆಕೇರಿ, ಚನ್ನಪಟ್ಟಣ, ಬನಶಂಕರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಬಸಟ್ಟೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.