‘ಅಂಬೆಡ್ಕರರವರ ಚಿಂತನೆಗಳು ಸಮಾಜಕ್ಕೆ ದಾರೀದೀಪವಾಗಿವೆ’

‘ಅಂಬೆಡ್ಕರರವರ ಚಿಂತನೆಗಳು ಸಮಾಜಕ್ಕೆ ದಾರೀದೀಪವಾಗಿವೆ’ 'Ambedkar's thoughts are a beacon of light for society'

ಲೋಕದರ್ಶನ ವರದಿ 

ಧಾರವಾಡ 14: ಡಾ. ಬಿ. ಆರ್ ಅಂಬೆಡ್ಕರ್ ಭಾರತೀಯ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞರು ಮತ್ತು ದಲಿತರ ನಾಯಕಾರಾಗಿದ್ದರು. ಅಸ್ಪೃಶ್ಯತೆ ಮತ್ತ ಜಾತಿ ಪದ್ದತಿಯ ವಿರುದ್ಧ ಹೋರಾಡಿದ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದ ಸರ್ವ ಜನರಿಗೂ ಸಮಾನವಾದ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕಾಗಿ ಹೋರಾಡಿದ ಅಪ್ರತಿಮ ಸಮಾಜ ಸುಧಾರಕ ಡಾ. ಬಿ.ಆರ್ ಅಂಬೆಡ್ಕರರವರು. ದಲಿತರ ದ್ವನಿಯಾಗಿ, ಸ್ವಾತಂತ್ರ ಪೂರ್ವ ಹಾಗೂ ನಂತರ ದಿನಗಳಲ್ಲಿ ಸತತವಾಗಿ ಹೋರಾಟ ಮಾಡಿ ಸ್ವತಂತ್ರ ಭಾರತಕ್ಕೆ ಸಂವಿಧಾನ ರಚಿಸಿಕೊಟ್ಟ ಡಾ. ಭೀಮರಾವ್ ಅಂಬೇಡ್ಕರವರ ಕೊಡುಗೆ ಅವಿಸ್ಮರಣಿಯ ಎಂದು ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು. 

ಅವರು ಜನತಾ ಶಿಕ್ಷಣ ಸಮಿತಿಯಲ್ಲಿ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜು ಮತ್ತು ಜೆ.ಎಸ್‌.ಎಸ್ ಎಂ.ಸಿ.ಎ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಭೀಮರಾವ್ ಅಂಬೆಡ್ಕರ್ ಇವರ 135ನೇ ಜಯಂತಿಯಲ್ಲಿ ಅಂಬೆಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.  

ಅಂಬೆಡ್ಕರರು ಮಹಾಡ್ ಸತ್ಯಾಗ್ರಹ, ಕಲಾರಾಮ್ ದೇವಾಲಯ ಪ್ರವೇಶ ಚಳುವಳಿಗಳ ಮೂಲಕ ಅಸ್ಪೃಶ್ಯರ ಹಕ್ಕುಗಳಿಗಾಗಿ ಹೋರಾಡಿದರು. ಬಹಿಷ್ಕೃತ ಭಾರತ, ಹಿತಕಾರಿಣಿ ಸಭಾ ಸ್ಥಾಪನೆ ಮತ್ತು ಮೂಕನಾಯಕ ಬಹಿಕೃತ ಭಾರತ ಪತ್ರಿಕೆಗಳ ಮೂಲಕ ದಲಿತರ ಧ್ವನಿಯಾದರು. ಅಷ್ಟೆ ಅಲ್ಲದೇ ಕಾರ್ಮಿಕರ ಕೆಲಸದ ಅವಧಿ ಕಡಿತ, ಹೆರಿಗೆ ರಜೆ ಮತ್ತು ಮಹಿಳಾ ಸಮಾನ ಹಕ್ಕುಗಳಿಗಾಗಿ ಶ್ರಮಿಸಿದರು. ಅಂದಿನ ಅವರ ದೂರ ದೃಷ್ಠಿಯ ಚಿಂತನೆಗಳು ಇಂದಿಗೂ ನಮಗೆ ದಾರೀದೀಪವಾಗಿವೆ ಎಂದು ಹೇಳಿದರು. 

ಅತಿಥಿ ಅಪನ್ಯಾಸಕರಾಗಿ ಆಗಮಿಸಿದ ಡಾ. ಆರ್‌. ವಿ. ಚಿಟಗುಪ್ಪಿ ಮಾತನಾಡಿ 14 ಏಪ್ರಿಲ್ 1891, ಮಧ್ಯಪ್ರದೇಶದ ಮಾಹು ಎಂಬಲ್ಲಿ ಜನಿಸಿದರು. ರಾಮ್‌ಜೀ ಮಾಲೋಜಿ ಸಕ್ಪಾಲ್ ಮತ್ತು ಭೀಮಾಬಾಯಿ ಇವರ ಮಗನಾಗಿ ಜನಿಸಿದ ಇವರು ಜಾತಿ ಪದ್ಧತಿಯ ಶೋಷಣೆಯನ್ನು ಅನುಭವಿಸಿ ಅದನ್ನು ದೇಶದಿಂದ ಕಿತ್ತೊಗೆಯಬೇಕೆಂಬ ಪಣ ತೊಟ್ಟರು. ಶೋಷಿತರು ಇಂದು ಸಮಾಜದಲ್ಲಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರವರ ಹೋರಾಟವೇ ಕಾರಣ, ಸಮಾಜದಲ್ಲಿ ಸಮಾನತೆ ತರಬೇಕಾದರೆ ಎಲ್ಲರಿಗೂ ಶಿಕ್ಷಣ ದೊರೆಯುವಂತಾಗಬೇಕು. ಅವರು ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯಾ ನಂತರದ ಸುಧಾರಣೆಗಳಲ್ಲಿ ತಮ್ಮ ಅಪಾರವಾದ ಕೊಡುಗೆ ನೀಡಿದ್ದು, ಭಾರತದ ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತೀಯ ರಿಸರ್ವ ಬ್ಯಾಂಕ್ ರಚನೆಯಲ್ಲಿ ಬಾಬಾ ಸಾಹೇಬ್ ಅಂಬೆಡ್ಕರ್‌ರವರದ್ದು ಮಹತ್ವದ ಪಾತ್ರ. ಅವರ ಪರಿಕಲ್ಪನೆಯ ಆಧಾರದ ಮೇಲೆಯೆ ಸೆಂಟ್ರಲ್ ಬ್ಯಾಂಕ್‌ನ್ನು ರಚಿಸಲಾಗಿದೆ. ನಾವು ಸಹ ಅಂಬೆಡ್ಕರ್‌ರವರಂತೆ ಶ್ರದ್ಧೆ, ಸಮಯ ಪ್ರಜ್ಞೆ, ಸತತ ಪ್ರಯತ್ನ, ಸರಿಯಾದ ಯೋಜನೆ ರೂಪಿಸುವದರಿಂದ ಯಶಸ್ಸನ್ನು ಪಡೆಯಬಹುದು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಶ್ರೀ ಮಹಾವೀರ ಉಪಾದ್ಯೆ ನಿರೂಪಿಸಿ, ವಂದಿಸಿದರು. ಜ್ಯೋತಿ ಅಕ್ಕಿ, ಶೃತಿ ಶೆಟ್ಟಿ, ರೋನಿಲ್ ಮನೋಹರ್, ಶಿಲ್ಪಾ ನಾಯಕ್, ಮುರಳಿಧರ್ ಹೆಗಡೆ ಉಪಸ್ಥಿತರಿದ್ದರು.