ಡಾ. ಅಮಿತ್ ಮಿರ್ಜಿ ಅವರಿಗೆ ಸಾಧಕ ಶಿಕ್ಷಕ ಪ್ರಶಸ್ತಿ

ಡಾ. ಅಮಿತ್ ಮಿರ್ಜಿ ಅವರಿಗೆ ಸಾಧಕ ಶಿಕ್ಷಕ ಪ್ರಶಸ್ತಿ  'Achiever Teacher' Award for Dr. Amit Mirji

ಲೋಕದರ್ಶನ ವರದಿ 

ವಿಜಯಪುರ, ಆ.25: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಮಿತ್ ಮಿರ್ಜಿ ಅವರಿಗೆ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸಾಧಕ ಶಿಕ್ಷಕ ಪ್ರಶಸ್ತಿ ಲಭಿಸಿದೆ.  

ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ನಗರದ ಮಹೇಶ್ವರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಗುರುನಮನ-2026’ ಕಾರ್ಯಕ್ರಮದಲ್ಲಿ ಡಾ. ಅಮಿತ್ ಮಿರ್ಜಿ ಅವರನ್ನು ಸಾಧಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು, ಸಂಚಾಲನಾ ಸಮಿತಿ ಅಧ್ಯಕ್ಷ ಬಸವರಾಜ ಕೌಲಗಿ, ಪ್ರಾಂತ ಅಧ್ಯಕ್ಷ ಡಾ. ಬಸವರಾಜ ಅನಾಮಿ, ಜಿಲ್ಲಾಧ್ಯಕ್ಷ ಬಿ.ಎಸ್‌. ಬಾಪುಗೊಂಡ, ಎಕ್ಸಲೆಂಟ್ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ಶ್ರೀ ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಚೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜಶ್ರೀ ಜುಗತಿ ಹಾಗೂ ದರ್ಬಾರ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಜೇಶ್ ದರ್ಬಾರ್ ಉಪಸ್ಥಿತರಿದ್ದರು.  

ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಸಾಧನೆ  

ಡಾ. ಅಮಿತ್ ಮಿರ್ಜಿ ಅವರು ಈಗಾಗಲೇ ಎರಡು ಪೇಟೆಂಟ್ಗಳನ್ನು ಪಡೆದಿದ್ದು, 18 ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಾಧಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದು ಅವರು ಹೇಳಿದರು.  

“ಕೇವಲ ಬೋಧನೆಗೆ ಸೀಮಿತವಾಗದೆ, ನೂರಾರು ವಿದ್ಯಾರ್ಥಿಗಳ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಬದುಕಿನಲ್ಲಿ ಬೆಳಕು ಮೂಡಿಸಿರುವ ತೃಪ್ತಿ ನನಗಿದೆ. ಸುವರ್ಣ ಕನ್ನಡಿಗ ಪ್ರಶಸ್ತಿ ಹಾಗೂ ಸಾಧಕ ಶಿಕ್ಷಕ ಪ್ರಶಸ್ತಿಗಳು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ,” ಎಂದು ಡಾ. ಅಮಿತ್ ಮಿರ್ಜಿ ಹೇಳಿದರು.  ಪ್ರಶಸ್ತಿ ನೀಡಿ ಗೌರವಿಸಿದ ಭಾರತೀಯ ಶಿಕ್ಷಣ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.